ಈದಿನ.ಕಾಮ್ ಡಿಜಿಟಲ್ ಮಾಧ್ಯಮ The News Minute ಜೊತೆ ಸೇರಿ ಮಣಿಪುರದ ಹಿಂಸಾಪೀಡಿತ ನೆಲದಿಂದ ತಲ್ಲಣಗಳ ಪ್ರತ್ಯಕ್ಷ ವರದಿಗಳ ಸರಣಿಯನ್ನು ಆರಂಭಿಸುತ್ತಿದೆ. ಇಲ್ಲಿದೆ ಇಂಪಾಲದ ಖುಮಾನ್ ಲಂಪಾಕ್ ಕ್ರೀಡಾ ಸಮುಚ್ಚಯದಿಂದ ಮೈತೇಯಿ ಗರ್ಭಿಣಿಯರ ನಿರಾಶ್ರಿತ ಶಿಬಿರದ ಪ್ರತ್ಯಕ್ಷ ವರದಿ
ಕಣಿವೆ ಮತ್ತು ಕಾಡಿನ ನಡುವಣ ಬಿರುಕು ಕಣ್ಣು ಹಾಯಿಸಿದಷ್ಟೂ ದಟ್ಟ ದಟ್ಟ…
ಮೊನ್ನೆ (ಆಗಸ್ಟ್ 7) ಮಣಿಪುರದ ರಾಜಧಾನಿ ಇಂಪಾಲಕ್ಕೆ ಬಂದಿಳಿದಾಗ, ವಿಮಾನ ನಿಲ್ದಾಣದ ಹೊರಗಿನ ಸೇನಾ ಸಿಬ್ಬಂದಿ ನಮ್ಮನ್ನು ನೋಡಿದೊಡನೆಯೇ ’ಇವರು ಹೊರಗಿನವರು’ ಎಂಬುದನ್ನು ಸುಲಭವಾಗಿ ಕಂಡುಕೊಂಡರು. “ಎಲ್ಲಿಂದ ಬಂದಿದ್ದೀರಿ? ಯಾವ ಉದ್ದೇಶಕ್ಕೆ ಬಂದಿದ್ದೀರಿ?” ಎಂಬಿತ್ಯಾದಿ ವಿವರಗಳನ್ನು ಲಿಖಿತವಾಗಿ ಬರೆಯಿಸಿಕೊಂಡು ’ಇನ್ನರ್ ಲೈನ್ ಪರ್ಮಿಟ್’ (ಈಶಾನ್ಯ ರಾಜ್ಯಗಳಿಗೆ ಹೊರಗಿನವರು ಪ್ರವೇಶಿಸಲು ಮತ್ತು ಅಲ್ಲಿ ತಂಗಲು ನೀಡುವ ವಿಶೇಷ ಅನುಮತಿ) ಪತ್ರವನ್ನು ನೀಡಿದರು. ನಿಜ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರವಾಸ ಮಾಡಬೇಕೆಂದರೆ ಐಎಲ್‌ಪಿ ಅಗತ್ಯ.
ಕುಕಿ ಬುಡಕಟ್ಟು ಮತ್ತು ಮೈತೇಯಿ ಜನಾಂಗದ ನಡುವೆ ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಕಲಹದಿಂದಾಗಿಯಂತೂ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿವೆ. ಇಂಪಾಲ ಕಣಿವೆಯಲ್ಲಿ ಈಗ ’ಕುಕಿಗಳು’ ಹುಡುಕಿದರೂ ಸಿಗುವುದಿಲ್ಲ. ಜೀವ ಭಯದಿಂದ ಈ ಪ್ರದೇಶವನ್ನು ತೊರೆದ ಗುಡ್ಡಗಾಡಿನ ನಿರಾಶ್ರಿತ ಶಿಬಿರಗಳಲ್ಲಿ ತಂಗಿದ್ದರೆ, ಗುಡ್ಡಗಾಡುಗಳಲ್ಲಿದ್ದ ಮೈತೇಯಿಗಳು ಪಲಾಯನ ಮಾಡಿ ಇಂಪಾಲ ಸುತ್ತಮುತ್ತ ತೆರೆದಿರುವ ಶಿಬಿರಗಳಲ್ಲಿ ಉಳಿದಿದ್ದಾರೆ. ಈ ‘ಎಥ್ನಿಕ್ ವಾರ್’ ಉಂಟು ಮಾಡಿರುವ ತಲ್ಲಣದ ಕಥೆಯನ್ನು ಇಂಪಾಲದಿಂದಲೇ ಶುರು
ಮಾಡೋಣ.
ಮತ್ತೆ ಕೂಡಿಸಲಾಗದಷ್ಟು ಅಪಕಲ್ಪನೆ
ರಾಜ್ಯದಲ್ಲಿ ಬಹುಸಂಖ್ಯಾತರೆಂದೇ ಗುರುತಿಸಿಕೊಂಡಿರುವ ಸಮುದಾಯ ಮೈತೇಯಿ. ಇಂಪಾಲ ಕಣಿವೆಯೇ ಇವರ ನೆಲೆ. ಸಮುದಾಯ ಸಂಘರ್ಷ ಆರಂಭವಾದ ಮೇಲೆ ರಾಜ್ಯದೆಲ್ಲೆಡೆ ಇಂಟರ್ನೆಟ್ ಸ್ಥಗಿತಗೊಳಿಸಿದಂತೆ ’ಇಂಪಾಲ’ದಲ್ಲೂ ಈಗಲೂ ಇಂಟರ್ನೆಟ್ ಸೌಲಭ್ಯವಿಲ್ಲ. ದಿನದ ಕೆಲವು ಗಂಟೆಗಳಷ್ಟೇ ಕರ್ಫ್ಯೂ ತೆರವು ಮಾಡಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗುತ್ತಿದೆ.
ಹೀಗಾಗಿ ಕಡಿಮೆ ಸಂಖ್ಯೆಯ ವಾಹನ ಓಡಾಟ, ಮುಚ್ಚಿದ ಅಂಗಡಿ ಮುಂಗಟ್ಟುಗಳು, ಅಲ್ಲಲ್ಲಿ ಓಡಾಡುವ ಜನರು ನೋಡಸಿಗುತ್ತಾರೆ. ಮೇ 3ರಂದು ಹಿಂಸಾಚಾರ ಆರಂಭವಾದಾಗ ಸುಟ್ಟು ಹಾಕಲಾದ ದೊಡ್ಡ ದೊಡ್ಡ ಕಟ್ಟಡಗಳು ಮಸಿಗಟ್ಟಿ ಕಣ್ಣಿಗೆ ರಾಚುತ್ತವೆ. ಈಗ ಕುಕಿಯೇತರ ಸಮುದಾಯಗಳು ಮಾತ್ರ ಮೈತೇಯಿಗಳೊಂದಿಗೆ ಇಂಪಾಲದಲ್ಲಿ ಬಿಡಾರ ಹೂಡಿದ್ದಾರೆ. ಪರಸ್ಪರ ನಂಬಿಕೆ ಕೂಡಿಸಲಾದ ಹಂತ ತಲುಪಿ ಮುರಿದು ಮಣ್ಣಾಗಿದೆ.

’ಈದಿನ.ಕಾಂ’ ಮತ್ತು ’ದಿ ನ್ಯೂಸ್ ಮಿನಿಟ್’ ಜಂಟಿಯಾಗಿ ಮಾಡುತ್ತಿರುವ ’ಮಣಿಪುರ ಹಿಂಸಾಚಾರ’ದ ವರದಿಗಾಗಿ ಸಹಕರಿಸಲು ಕಾರ್ ಹಾಗೂ ಡ್ರೈವರ್ ಅನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಚಾಲಕನ ಹಿನ್ನೆಲೆಯನ್ನು ನೋಡಬೇಕಾಯಿತು. ನಿಜ, ಕುಕಿ ಡ್ರೈವರ್ ಆಗಿದ್ದರೆ ಮೈತೇಯಿ ಪ್ರಾಬಲ್ಯದ ಭಾಗಗಳಿಗೂ, ಮೈತೇಯಿ ಪರ ನಿಂತಿರುವ ಗುಂಪಿನ ಚಾಲಕನಾಗಿದ್ದರೆ ಕುಕಿ ಪ್ರಾಬಲ್ಯದ ಸ್ಥಳಗಳಿಗೆ ಹೋಗುವಂತಿಲ್ಲ. ಯಾವುದೇ ಡ್ರೈವರ್ ಕೂಡ ಅಂತಹ ಅಪಾಯಕ್ಕೆ ಕೈ ಹಾಕುವುದಿಲ್ಲ, ಬಿಡಿ. ಸದ್ಯಕ್ಕೆ ಎರಡು ಕೋಮಿನ ಕದನದಲ್ಲಿ ತಟಸ್ಥವಾಗಿರುವ, ಮೈತೇಯಿ ಪಾಂಗಲ್ (ಮುಸ್ಲಿಂ) ಸಮುದಾಯದ ನಾಸಿರ್ ಎಂಬವರು ನಮ್ಮ ಸುತ್ತಾಟಕ್ಕೆ ಜಂಟಿಯಾದರು.
“ಈ ನಾಗರಿಕ ಯುದ್ಧದ ನೆಲದಲ್ಲಿ ಕುಕಿ ಮತ್ತು ಮೈತೇಯಿಗಳು ಅವರದೇ ದೃಷ್ಟಿಯಲ್ಲಿ ಸಂತ್ರಸ್ತರು” ಎಂದರೆ ತಪ್ಪಾಗಲಾರದೇನೋ. ಈ ಎರಡೂ ಸಮುದಾಯದಲ್ಲಿ ನೊಂದವರು, ಮನೆಮಠ ಕಳೆದುಕೊಂಡವರು ಇದ್ದಾರೆ. ಸಾವು ನೋವುಗಳಿಗೆ ಈಡಾಗಿದ್ದಾರೆ. ಇದರ ನಡುವೆ ತಮ್ಮವರನ್ನು ರಕ್ಷಿಸಿಕೊಳ್ಳಲು ಪಣ ತೊಟ್ಟಿದ್ದಾರೆ. ಈ ಕಾಳಗದಲ್ಲಿ ಉಭಯ ಸಮುದಾಯಗಳು ತಮ್ಮದೇ ಆದ ನೋವಿನ ಕತೆಗಳನ್ನು ಹೇಳುತ್ತ ಬಂದಿವೆ. ಕಣಿವೆ ಮತ್ತು ಕಾಡಿನ ನಡುವಿನ ಬಿರುಕು ಕಣ್ಣು ಹಾಯಿಸಿದಷ್ಟೂ ದಟ್ಟವಾಗಿ ಕಾಣುತ್ತಲೇ ಇದೆ.
ನಾವು ಮೊದಲಿಗೆ ಮಣಿಪುರದಲ್ಲಿ ಭೇಟಿ ನೀಡಿದ ಸ್ಥಳ ಬಿಜೆಪಿಯವರು ನಡೆಸುತ್ತಿರುವ ’ಗರ್ಭಿಣಿಯರ ನಿರಾಶ್ರಿತ ಶಿಬಿರ’ವಾಗಿತ್ತು. ಇಂಪಾಲದ ಖುಮಾನ್ ಲಂಪಾಕ್ ಕ್ರೀಡಾ ಸಮುಚ್ಚಯದಲ್ಲಿನ ಈ ಶಿಬಿರಕ್ಕೆ ಹೋದಾಗ, ಪುಟಾಣಿ ಮಕ್ಕಳು ಕಟ್ಟಡದ ಕಾರಿಡಾರ್‌ನಲ್ಲಿ ಆಟವಾಡುತ್ತಿದ್ದರು. ನಮ್ಮನ್ನು ಬರಮಾಡಿಕೊಂಡ ಮಣಿಪುರ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಮುಖಂಡ ರಾಜ್‌ಕುಮಾರ್ ನೋಯಿಂಗ್ದ್ರೆಂಗ್ಖೋಂಬಾ ಶಿಬಿರದಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾ ಹೋದರು.
“ಮೇ ಮೊದಲ ವಾರ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಾಗ ಕುಕಿ ಪ್ರಾಬಲ್ಯದ ಜಿಲ್ಲೆಗಳಲ್ಲಿರುವ ಮೈತೇಯಿ ಗರ್ಭಿಣಿಯರನ್ನು ರಕ್ಷಿಸಲು ಮುಂದಾದೆವು. ಮೇ 21ರಂದು ಈ ಶಿಬಿರ ಆರಂಭವಾಗಿದೆ. ಮಣಿಪುರ ರಾಜ್ಯದ ಏಳು ಜಿಲ್ಲೆಗಳ 87 ತಾಯಂದಿರು ಇಲ್ಲಿದ್ದಾರೆ. ಈ ಶಿಬಿರದಲ್ಲಿ 42 ಮಕ್ಕಳ ಜನನವಾಗಿದೆ. ಮೂರು ತಾಯಂದಿರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಬ್ಬ ತಾಯಿ- ಎರಡು ಗಂಡುಮಕ್ಕಳಿಗೆ, ಇನ್ನೊಬ್ಬ ತಾಯಿ- ಇಬ್ಬರು ಹೆಣ್ಣುಮಕ್ಕಳಿಗೆ, ಮತ್ತೊಬ್ಬ ತಾಯಿ- ಒಂದು ಗಂಡು, ಒಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ” ಎಂದು ತಿಳಿಸಿದರು.

ಈ ಶಿಬಿರದಲ್ಲಿನ ಉಸ್ತುವಾರಿಗಳಲ್ಲಿ ಒಬ್ಬರಾದ ರಾಜ್‌ಕುಮಾರ್, “ಜವಾಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜೆನಿಮ್ಸ್- JNIMS), ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್- RIMS) ಮತ್ತು ಖಾಸಗಿ ಆಸ್ಪತ್ರೆಯಾದ ಲಿಟಲ್ ಕ್ಲಿನಿಕ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಜನಾಂಗೀಯ ಸಂಘರ್ಷದಿಂದಾಗಿ ಗರ್ಭಿಣಿಯರು ತೀವ್ರ ಸಂಕಷ್ಟಕ್ಕೊಳಗಾಗಿದ್ದರು. ಅವರಿಗೆ ವೈದ್ಯಕೀಯ ಚಿಕಿತ್ಸೆ, ಸಲಹೆಗಳು ಅಗತ್ಯ. ಗಲಭೆಪೀಡಿತ ಏಳು ಜಿಲ್ಲೆಗಳಲ್ಲಿ, ಮುಖ್ಯವಾಗಿ ಚೂರಾಚಾಂದ್ಪುರ್, ಕಾಂಗ್ಪೋಪ್ಕಿ ಮತ್ತು ಇಂಪಾಲದಲ್ಲಿದ್ದ ಮೈತೇಯಿ ಗರ್ಭಿಣಿಯರನ್ನು ಇಲ್ಲಿ ರಕ್ಷಿಸಲಾಗಿದೆ. ದಿನವೂ ಒಬ್ಬೊಬ್ಬರು ಡಾಕ್ಟರ್ ಬಂದು ಗರ್ಭಿಣಿಯರ ಆರೋಗ್ಯವನ್ನು ವಿಚಾರಿಸುತ್ತಾರೆ” ಎಂದು ಮಾಹಿತಿ ನೀಡಿದರು. ಮೈತೇಯಿ ಸಮುದಾಯದ ಮಹಿಳೆಯು ಮಗುವಿಗೆ ಜನ್ಮ ನೀಡಿದ ಆರು ದಿನಗಳ ನಂತರ ತಾಯಿ ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ’ಇಪಂತಬಾ’ (ಷಷ್ಠಿಪೂಜೆ) ನಡೆಸಿಕೊಂಡು ಬರುತ್ತಿದ್ದೇವೆ” ಎಂದು ಮಹಿಳೆಯೊಬ್ಬರು ವಿವರಿಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಇಲ್ಲಿಗೆ ಕರೆಯಿಸಿ ಮಕ್ಕಳಿಗೆ ಪಾಠ ಪ್ರವಚನ ಮಾಡಿಸುವ ಕೆಲಸವೂ ನಡೆದಿದೆ. ಮೈತೇಯಿ ಜನಾಂಗದ ಬಿರೇನ್ ಸಿಂಗ್ ಸರ್ಕಾರದ ಸಂಪೂರ್ಣ ಸಹಕಾರ ಈ ಕ್ಯಾಂಪಿಗೆ ಇದೆ. ಇಲ್ಲಿನ ಬಿಜೆಪಿ ಶಾಸಕರು ಮೈತೇಯಿ ಸಮುದಾಯಗಳ ನಿರಾಶ್ರಿತ ಶಿಬಿರಗಳಿಗೆ ಕೊಡುಗೈ ದಾನಿಗಳಾಗಿದ್ದಾರೆ ಎಂಬುದು ಮಾತುಕತೆಗಳಿಂದ ತಿಳಿಯಿತು. ಮುಖ್ಯವಾಗಿ ಮಣಿಪುರ ಸರ್ಕಾರದ ವತಿಯಿಂದ ಪಶ್ಚಿಮ ಇಂಪಾಲ ಜಿಲ್ಲೆಯ ಲಂಬೋಯ್ ಖೋಂಗ್ನಾಂಗ್ಖಾಂಗ್ನಲ್ಲಿ ಮೈತೇಯಿ ಕ್ಯಾಂಪ್ ನಡೆಸಲಾಗುತ್ತಿದೆ. ಸುಮಾರು 580 ನಿರಾಶ್ರಿತರು ಅಲ್ಲಿದ್ದಾರೆ (ಮುಂದಿನ ವರದಿಯಲ್ಲಿ ವಿವರಗಳನ್ನು ಓದಬಹುದು.)

ಹಾಲ್ಗೂಸುಗಳ ಕಂಪು, ಕಣ್ಣೀರು ತುಂಬಿದ ಈ ಶಿಬಿರದಲ್ಲಿನ ಬಹುತೇಕ ತಾಯಂದಿರಿಗೆ ಇದೆಲ್ಲ ಯಾಕೆ ನಡೆಯುತ್ತಿದೆ ಎಂಬ ರಾಜಕೀಯ ಪ್ರಜ್ಞೆ ಇಲ್ಲ. ಅವರೆಲ್ಲ ಅಮಾಯಕ ಜೀವಿಗಳು, “ಈ ಕಲಹಗಳೆಲ್ಲ ಎಷ್ಟು ಬೇಗ ಮುಗಿಯುತ್ತದೆಯೋ ಸಾಕಪ್ಪ” ಎಂಬ ಆಸೆಗಣ್ಣುಗಳನ್ನು ಇಟ್ಟುಕೊಂಡಿರುವವರು. ಇಂತಹ ಸನ್ನಿವೇಶದಲ್ಲಿ ಹುಟ್ಟಿರುವ ’ಲಾಂಗಂಬಿ’ಗಳ ಭವಿಷ್ಯವನ್ನು ರೂಪಿಸಲು ಸರ್ಕಾರ ಸಮಸ್ಯೆಯನ್ನು ಬಗೆಹರಿಸುತ್ತದೆಯೇ?
ರಾಜಕೀಯವನ್ನೆಲ್ಲ ಬದಿಗಿಟ್ಟು ಮಾತನಾಡಿದ, ಹೆಸರು ಹೇಳಲಿಚ್ಛಿಸದ ಮೈತೇಯಿ ಮಹಿಳೆಯೊಬ್ಬರು, “ಹಿಂದೆಲ್ಲ ನಾವು ಮತ್ತು ಕುಕಿಗಳು ಸಹೋದರರಂತೆ ಇದ್ದೆವು. ಈಗ ಬಿರುಕು ಮೂಡಿದೆ. ತೊಂಬತ್ತು ದಿನಗಳು ಕಳೆದವು. ಪ್ರಧಾನಿ ಮೋದಿಯವರು ಇದನ್ನು ಬಗೆಹರಿಸಲು ಇಷ್ಟು ದಿನ ತೆಗೆದುಕೊಳ್ಳಬೇಕಿತ್ತೇ?” ಎಂದು ಮಾರ್ಮಿಕವಾಗಿ ನುಡಿದು ಮಾತು ಮುಗಿಸಿದರು. ಎಲ್ಲವೂ ಮೊದಲಿನ ಸ್ಥಿತಿಗೆ ಬರಬೇಕೆಂದು ಬಯಸುತ್ತಿರುವ ಮನಸ್ಸುಗಳಿವೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಪ್ರತಿ ಚಿಕ್ಕ ಕೊಠಡಿಯಲ್ಲಿ ನಾಲ್ಕೈದು ತಾಯಂದಿರಿಗೆ ವಾಸ್ತವ್ಯ ನೀಡಲಾಗಿದೆ. ಜೊತೆಗೆ ಬಿಜೆಪಿಯ ಮಹಿಳಾ ಪ್ರತಿನಿಧಿಗಳು, ಮುಖಂಡರು ಆಗುಹೋಗುಗಳನ್ನು ಗಮನಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದವರಿಗೆ ವಿವರಣೆಗಳನ್ನು ನೀಡುತ್ತಿದ್ದಾರೆ. ಒಟ್ಟು 19 ಗಂಡು, 23 ಹೆಣ್ಣು ಮಕ್ಕಳು ಇಲ್ಲಿ ಜನಿಸಿವೆ. ಹುಟ್ಟಿದ ಮಕ್ಕಳಿಗೆ ಸಾಮಾನ್ಯವಾಗಿ ’ಲಾಂಗಂಬಿ’ ಎಂಬ ಹೆಸರನ್ನು ಇಡುತ್ತಿದ್ದಾರೆ. ಮಣಿಪುರಿ ಭಾಷೆಯಲ್ಲಿ ‘ಲಾಂಗಂಬಿ’ ಎಂದರೆ ‘ಯುದ್ಧದಲ್ಲಿ ಗೆದ್ದವನು/ಗೆದ್ದವಳು’ ಎಂದು ಅರ್ಥ.
ಚಿತ್ರಗಳು: ಭುವನ್ ಮಲ್ಲಿಕ್, The News Minute

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
ತುಂಬಾ ಪ್ರಾಮಾಣಿಕ ವರದಿ. ಸಂವೇದನಾಶೀಲವಾಗಿದೆ. ಕಂಡದ್ದು ಕಂಡಹಾಗೆ ವಿವರಿಸಲಾಗಿದೆ.
ಮೈತೇಯಿ ಜನಾಂಗದವರ ಪರವಾಗಿ ರಾಜ್ಯದ ಬಿಜೆಪಿ ಸರ್ಕಾರ ಇದೆಯೆಂಬುದನ್ನು ತಮ್ಮ ವರದಿಗಳು ಧೃಡಪಡಿಸುತ್ತವೆ.
ಹೀಗಾದರೆ ಕುಕಿಗಳನ್ನು ರಕ್ಷಿಸುವವರು ಯಾರು?
ಈ ವರದಿ ಬಲಪಂತೀಯರನ್ನು ವೈಭವೀಕರಿಸುತ್ತಿದೆಯೆಂದು ಮತ್ತಾರಿಗಾದರೂ ಅನಿಸುತ್ತಿದೆಯೇ ?
ಅಂದರೆ ಬಿಜೆಪಿ ಒಳ್ಳೆಯ ಕೆಲಸ ಮಾಡುತ್ತಿದೆಯೇ ? ಅಥವಾ ಅವರ ಒಳ್ಳೆಯತನ ಮೈತೆಯಿ ಜನಗಳಿಗೋಸ್ಕರ ಮಾತ್ರವೇ ?
ದಯವಿಟ್ಟು ತಿಳಿಸಿ — ಖಗೋಲ ಶಾಸ್ತ್ರೀ
ಸಮುದಾಯದ ನಡುವೆ ಬೆಂಕಿ ಹಚ್ಚಿ ಬೆಂಕಿ ನಂದಿಸದೆ ಅದನ್ನ ಜೀವಂತವಾಗಿಡಲು ಪಕ್ಷಗಳು ಶ್ರಮಿಸುತ್ತಿರುವುದು ನೋಡಿದ್ರೆ ರಾಜಕಾರಣ ಎಷ್ಟೊಂದು ಕೀಳಮಟ್ಟದ್ದಾಗಿದೆ ಎಂದು ವಾಖಾರಿಕೆ ಬರ್ತಿದೆ.