ನಾಗರೀಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ ದಾವಣಗೆರೆ ವತಿಯಿಂದ ಚನ್ನಗಿರಿಯ ಮಿಲ್ಲತ್ ಶಾದಿಮಹಲ್ ನಲ್ಲಿ ನಾಗರೀಕ ಹಕ್ಕು ಅಧಿಕಾರ ಸಂರಕ್ಷಣಾ ಕಾರ್ಯಕ್ರಮ ಮತ್ತು ಪದಗ್ರಹಣ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುರುಕುಲ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಮಾತನಾಡಿ “ನಾಗರೀಕ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯ ಇಂದು ಸಮಾಜದಲ್ಲಿ ನಡೆಯಬೇಕಿದೆ. ಇಂದಿನ ದಿನಗಳಲ್ಲಿ ಇದರ ಅಗತ್ಯ ಹೆಚ್ಚು ಹೆಚ್ಚಾಗಿದೆ” ಎಂದು ಅಭಿಪ್ರಾಯಪಟ್ಟರು.

ರೈತ ಹೋರಾಟಗಾರರಾದ ಬಸಾಪುರ ರಂಗನಾಥ್ ಮಾತನಾಡಿ “ಜಾತಿ ಧರ್ಮ ಮೀರಿ ಅನ್ಯಾಯದ ವಿರುದ್ಧ ದನಿ ಎತ್ತುವ ಅಗತ್ಯವಿದೆ. ಇಂದು ಧರ್ಮಸ್ಥಳ ಸೌಜನ್ಯಾ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ನ್ಯಾಯ ಒದಗಿಸುವ ಕುರಿತು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ನ್ಯಾಯಕ್ಕಾಗಿ ಹೋರಾಡಿದವರ ಧರ್ಮ ದ್ರೋಹಿಗಳು ಎನ್ನುವ ನಿಂದನೆಗಳಿಗೆ ಒಳಗಾಗುತ್ತಾರೆ. ಅದನ್ನು ಮೀರಿ ನಾಗರಿಕರ ಅಧಿಕಾರ ಹಕ್ಕು ಸಂರಕ್ಷಣೆ ಆಗಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಕೇದಾರಲಿಂಗ ಶಾಂತವೀರ ಶ್ರೀಗಳು ಮಾತನಾಡಿ “ಮಾನವತೆಯ ಕಲ್ಯಾಣ ಬಹಳ ಮುಖ್ಯ. ಸಮಾಜದ ಎಲ್ಲರೂ ನಾಗರೀಕ ಹಕ್ಕುಗಳನ್ನು ಶೋಷಿತರಿಗೆ, ಕಷ್ಟದಲ್ಲಿರುವ ಜನರಿಗೆ ತಲುಪಿಸುವ ಕೆಲಸ ಮಾಡಬೇಕು.ನಾಗಾಲೋಟದಲ್ಲಿ ಮಾನವನ ಅಭಿವೃದ್ಧಿ ಪಥ ಓಡುತ್ತಿದೆ. ಆದರೂ ಮಾನಸಿಕ ನೆಮ್ಮದಿ ಇಲ್ಲವಾಗಿದೆ. ಏನು ಕಾರಣ, ನ್ಯೂನತೆ ಏನು ಎಂದು ಹುಡುಕಬೇಕಿದೆ.
ಎಷ್ಟು ದುಡಿದರೂ ಅದರ ಮಧ್ಯೆ ಸಂತೋಷ ಕಳೆದುಕೊಳ್ಳುವತ್ತ ಮಾನವ ಸಾಗುತ್ತಿದ್ದಾನೆ. ದುರಾಸೆ ದುರ್ನೀತಿಗೆ ಒಳಗಾಗಿ ಆತ್ಮಕಲ್ಯಾಣ, ಸಂತೋಷ ಮರೆತಿದ್ದಾರೆ. ಮಹಾತ್ಮರ ಆದರ್ಶ ಸಿದ್ದಾಂತಗಳನ್ನು ಅನುಸರಿಸಬೇಕು. ಆಯಾ ಧರ್ಮಗಳು ಬೋಧಿಸಿದ ಉತ್ತಮ ಅಂಶಗಳನ್ನು ಅನುಸರಿಸಿದಾಗ ಉತ್ತಮ ಶಾಂತಿಯ ಜೀವನ ಪಡೆಯಲು ಸಾದ್ಯ. ಮಾನವರ ಕಲ್ಯಾಣಕ್ಕಾಗಿ ನಾಗರೀಕರಿಗೆ ಅಧಿಕಾರ ಹಕ್ಕುಗಳು ಸಿಗಬೇಕು” ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಕಾರ್ಯದರ್ಶಿ ಷಹಬ್ಬಾಜ್ ಖಾನ್ ಮಾತನಾಡಿ, “ನಾಗರಿಕರ ಹಕ್ಕು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಹಕ್ಕು ಅಧಿಕಾರ ಸಂರಕ್ಷಣೆ ಬಗ್ಗೆ ನಾಗರಿಕರು ಎಚ್ಚೆತ್ತು ಕೊಳ್ಳುವ ಅಗತ್ಯವಿದೆ. ಸಮಾಜದಲ್ಲಿ ನೆಡೆಯುವ ಉತ್ತಮ ಕೆಲಸ ಕಾರ್ಯ ಗಳಿಗೆ ಸಹಕಾರ ನೀಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಅರಿವು ಮುಖ್ಯ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಗೆ ಹೋರಾಟ ಸಮಿತಿ ವತಿಯಿಂದ ಹೊನ್ನಾಳಿಯ ಕನಕದಾಸ ವೃತ್ತದಲ್ಲಿ ಪ್ರತಿಭಟನೆ.
ಗೌರವಾಧ್ಯಕ್ಷ ಅಲ್ಲಾಭಕ್ಷೀ ಮಾತನಾಡಿ “ನಾಗರೀಕ ಹಕ್ಕುಗಳನ್ನು ಗೌರವಿಸಲು, ಅಧಿಕಾರ ಸಂರಕ್ಷಣೆ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರಣದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆನೀಡಿದರು.