ಈ ದಿನ ಸಂಪಾದಕೀಯ | ಗಾಜಾದ ಮಾನವೀಯ ದುರಂತಕ್ಕೆ ಜಗತ್ತಿನ ನಿರ್ಲಜ್ಜ ಕುರುಡು-ಮೌನ

Date:

Advertisements
ಗಾಜಾಕ್ಕೆ ಆಹಾರ, ಔಷಧಿ, ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ತಲುಪಿಸಲು ಗಾಜಾ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸುವಂತೆ ಇಸ್ರೇಲ್‌ ಮೇಲೆ ಒತ್ತಡ ಹೇರಬೇಕಿದೆ. ಪ್ಯಾಲೆಸ್ತೀನ್ - ಇಸ್ರೇಲ್ ನಡುವಿನ ಶಾಂತಿಯುತ ಮಾತುಕತೆಗೆ ಒತ್ತಾಯಿಸಬೇಕಿದೆ. 

ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ತನ್ನ ನರಹಂತಕ, ವಿಕೃತ, ಭೀಕರ ದಾಳಿಯನ್ನು ಆರಂಭಿಸಿ ಎರಡು ವರ್ಷಗಳು ಕಳೆದಿವೆ. ಗುರುವಾರ ಕೂಡ ಗಾಜಾ ಜನರ ಮೇಲೆ ಇಸ್ರೇಲ್ ಕ್ರೌರ್ಯ ಮೆರೆದಿದ್ದು, ಆಹಾರಕ್ಕಾಗಿ ಎದುರು ನೋಡುತ್ತಿದ್ದ 72 ಮಂದಿ ಸೇರಿ 91 ಜನರನ್ನು ಗುಂಡಿಕ್ಕಿ ಕೊಂದಿದೆ. 2023ರ ಅಕ್ಟೋಬರ್‌ನಿಂದ ಈವರೆಗೆ 60,034 ಪ್ಯಾಲೆಸ್ತೀನಿಯರು ಹತ್ಯೆಗೀಡಾಗಿದ್ದಾರೆ. ಸುಮಾರು 1,45,870 ಜನರು ಗಾಯಗೊಂಡಿದ್ದಾರೆ. ಜಗತ್ತಿನ ಪುಟ್ಟ ಭಾಗದಲ್ಲಿ ಮಾರಣಹೋಮ ನಡೆಯುತ್ತಿರುವ ಸಮಯದಲ್ಲಿಯೂ ಜಗತ್ತು ಮೌನವಾಗಿದೆ. ನಿರ್ಲಜ್ಜ ಕುರುಡುತನಕ್ಕೆ ಜಾರಿದೆ.

ಎರಡು ವರ್ಷಗಳಿಂದ ಗಾಜಾ ಪಟ್ಟಿ ಮಾನವೀಯ ದುರಂತದ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪ್ರದೇಶದ ಜನರು ಎದುರಿಸುತ್ತಿರುವ ಭೀಕರ ಪರಿಸ್ಥಿತಿಯನ್ನು ವರ್ಣಿಸುವುದು ಕಷ್ಟಕರವಾಗಿದೆ. ನೂರು ವರ್ಷಗಳ ಹಿಂದೆ ಭಾರತದಂತೆಯೇ ಬ್ರಿಟಿಷ್ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಿದ್ದ ಪ್ಯಾಲೆಸ್ತೀನ್, ಈಗಲೂ ಕ್ರೌರ್ಯಕ್ಕೆ ಬಲಿಯಾಗುತ್ತಲೇ ಇದೆ.

ಮೊದಲ ಮಹಾಯುದ್ಧದ ನಂತರ ಬ್ರಿಟನ್ ಸರ್ಕಾರ ಹುಟ್ಟುಹಾಕಿದ ಬ್ರಿಟಿಷ್ ಮ್ಯಾಂಡೇಟ್‌ – ಯಹೂದಿಗಳನ್ನು ಪ್ಯಾಲೆಸ್ತೀನ್‌ಗೆ ರವಾನಿಸಲು ಆರಂಭಿಸಿತ್ತು. ಪ್ಯಾಲೆಸ್ತೀನ್‌ಗೆ ವಲಸೆ ಬಂದ ಯಹೂದಿಗಳು ಪ್ಯಾಲೆಸ್ತೀನಿಯರನ್ನೇ ಮೂಲೆಗುಂಪು ಮಾಡಿ, ಪ್ಯಾಲೆಸ್ತೀನ್‌ನ ಬಹುತೇಕ ಭೂಭಾಗವನ್ನು ಆಕ್ರಮಿಸಿಕೊಂಡರು. 1948ರ ವೇಳೆಗೆ ಬ್ರಿಟನ್ ಸರ್ಕಾರ ಮತ್ತು ವಿಶ್ವಸಂಸ್ಥೆ ಸೇರಿ ಪ್ಯಾಲೆಸ್ತೀನ್‌ಅನ್ನು ಒಡೆದು, ಇಸ್ರೇಲ್‌ಅನ್ನು ಹುಟ್ಟುಹಾಕಿದವು. ಬ್ರಿಟನ್, ಅಮೆರಿಕಗಳು ಇಸ್ರೇಲ್‌ಗೆ ಭರಪೂರ ನೆರವು ನೀಡಿದವು. ಅಂದಿನಿಂದ ಇಂದಿನವರೆಗೂ ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಪ್ಯಾಲೆಸ್ತೀನ್‌ನ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಲೇ ಇದೆ.

ಪ್ಯಾಲೆಸ್ತೀನ್‌ನ ಪ್ರಮುಖ ಭೂಪ್ರದೇಶವಾದ ಗಾಜಾ ಪಟ್ಟಿಯು 1950ರ ದಶಕದಲ್ಲಿ 360 ಚದರ ಕಿಲೋಮೀಟರ್‌ ವಿಸ್ತೀರ್ಣವನ್ನು ಒಳಗೊಂಡಿತ್ತು. ಆದರೆ, ಈಗ ಈ ಪ್ರದೇಶವು 100 ಚದರ ಕಿಲೋಮೀಟರ್‌ಗೆ ಕುಗ್ಗಿದೆ. ಉಳಿದ 260 ಚದರ ಕಿ.ಮೀ. ಭೂಮಿಯನ್ನು ಇಸ್ರೇಲ್ ಅತಿಕ್ರಮಿಸಿ, ಆಕ್ರಮಿಸಿಕೊಂಡಿದೆ. ಇರುವ, 100 ಚಕಿಮೀ ಭೂಮಿಯಲ್ಲಿ 21 ಲಕ್ಷ ಪ್ಯಾಲೆಸ್ತೀನಿಯರು ವಾಸಿಸುತ್ತಿದ್ದಾರೆ. ಆದರೆ, ಅವರ ಮೇಲೆ ನಿರಂತರ ದಾಳಿ ಮತ್ತು ಕ್ರೌರ್ಯಗಳು ನಡೆಯುತ್ತಿವೆ.

2023ರಲ್ಲಿ ಇಸ್ರೇಲ್ ಸೇನೆ ಆರಂಭಿಸಿದ ಪೈಶಾಚಿಕ ಕಾರ್ಯಾಚರಣೆಯಿಂದಾಗಿ ಪ್ಯಾಲೆಸ್ತೀನ್‌ನ 80% ಜನರು ನಿರಾಶ್ರಿತರಾಗಿದ್ದಾರೆ. ಮನೆಗಳನ್ನು ಕಳೆದುಕೊಂಡು, ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿದ್ದಾರೆ. ಗಾಜಾದಲ್ಲಿನ ಮನೆಗಳು, ಶಾಲೆಗಳು ಹಾಗೂ ಆಸ್ಪತ್ರೆಗಳು ಧ್ವಂಸಗೊಂಡಿವೆ. ಆಹಾರ, ಶುದ್ಧ ಕುಡಿಯುವ ನೀರು, ವೈದ್ಯಕೀಯ ನೆರವಿಗಾಗಿ ಅಲ್ಲಿನ ಜನರು ಹಾತೊರೆಯುತ್ತಿದ್ದಾರೆ. ಜಗತ್ತಿನ ಜನರ ಸಹಾಯಾಸ್ತಗಾಗಿ ಎದುರು ನೋಡುತ್ತಿದ್ದಾರೆ.

ವಿಶ್ವಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಆಹಾರ ಕೊರತೆಯಿಂದಾಗಿ ಗಾಜಾದಲ್ಲಿನ ಮಕ್ಕಳು ಮಾರಣಾಂತಿಕ ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಅಲ್ಲಿನ ಜನರ ಪರಿಸ್ಥಿತಿ ಗಂಭೀರವಾಗುತ್ತಿದೆ. ಇಂತಹ ಸಮಯದಲ್ಲಿಯೂ, ಇಸ್ರೇಲ್ ವಿಧಿಸಿರುವ ಆರ್ಥಿಕ ದಿಗ್ಬಂಧನ ಮತ್ತು ಗಡಿ ನಿಯಂತ್ರಣದಿಂದಾಗಿ ಮಾನವೀಯ ನೆರವು ತಲುಪುವುದು ಕಷ್ಟವಾಗಿದೆ. ಇದು ಅನೇಕ ಮಕ್ಕಳು, ವೃದ್ಧರು ಹಾಗೂ ರೋಗ ಪೀಡಿತರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಜನರು ದಣಿದುಹೋಗಿದ್ದಾರೆ. ಹಸಿವಿನಿಂದಲೂ ಹಲವರು ಸಾವನ್ನಪ್ಪಿದ್ದಾರೆ ಎಂದು ಗಾಜಾದಲ್ಲಿ ನಿರಂತರವಾಗಿ ವರದಿ ಮಾಡುತ್ತಿರುವ ಪತ್ರಕರ್ತ ಸೊಲಿಮಾನ್ ಹಿಜ್ಜಿ ವಿವರಿಸಿದ್ದಾರೆ.

ಆದರೆ, ಗಾಜಾದ ಪರಿಸ್ಥಿತಿಗೆ ಜಗತ್ತು ಕೈಕಟ್ಟಿ ಕುಳಿತಿದೆ. ಗಾಜಾದ ಮಾನವೀಯ ದುರಂತದ ವಿಚಾರವಾಗಿ ಜಗತ್ತಿನ ಉದಾಸೀನತೆಯ ಹಿಂದೆ ಹಲವಾರು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿವೆ. ಇಸ್ರೇಲ್‌ ಮೇಲಿನ ಪಾಶ್ಚಿಮಾತ್ಯ ರಾಷ್ಟ್ರಗಳ ಒಲವು ಮುಖ್ಯ ಕಾರಣವೂ ಆಗಿದೆ. ಇಸ್ರೇಲ್‌ಗೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಬಲವಾದ ಬೆಂಬಲ ನೀಡುತ್ತಿವೆ. ಅಮೆರಿಕವು ಇಸ್ರೇಲ್‌ಗೆ ವಾರ್ಷಿಕವಾಗಿ 3.8 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಸೈನಿಕ ಮತ್ತು ಆರ್ಥಿಕ ನೆರವನ್ನು ಒದಗಿಸುತ್ತಿದೆ. ಜೊತೆಗೆ, ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಇಸ್ರೇಲ್‌ನೊಂದಿಗಿನ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳಿಗೆ ಆದ್ಯತೆ ನೀಡುತ್ತಿವೆ. ಜೊತೆಗೆ, ಇಸ್ರೇಲ್‌ ಬೆನ್ನಿಗೆ ಅಮೆರಿಕ ನಿಂತಿರುವುದು ಅನೇಕ ರಾಷ್ಟ್ರಗಳು ಗಾಜಾದ ಸಂಕಷ್ಟವನ್ನು ಕಡೆಗಣಿಸುವಂತೆ ಮಾಡಿದೆ. ಇದೆಲ್ಲವೂ, ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಗಾಜಾವನ್ನು ಅನಾಥ ಮಾಡಿವೆ.

ಜಗತ್ತಿನ ಮೌನದಿಂದಾಗಿ, ಗಾಜಾದ ಜನರಲ್ಲಿ ರೋಗಗಳು, ಮತ್ತು ಆರೋಗ್ಯ ವ್ಯವಸ್ಥೆಯ ಕುಸಿತವು ತೀವ್ರಗೊಂಡಿದೆ. UNICEFನ ವರದಿಗಳ ಪ್ರಕಾರ, ಗಾಜಾದಲ್ಲಿ 3,500ಕ್ಕಿಂತ ಹೆಚ್ಚು ಮಕ್ಕಳು ಕುಬ್ಜತೆ ಮತ್ತು ಅಪೌಷ್ಟಿಕತೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಇಂತಹ ಭೀಕರ ಸನ್ನಿವೇಶದಲ್ಲಿಯೂ ವಿಶ್ವಸಂಸ್ಥೆ ಮತ್ತು ಅರಬ್ ಹಾಗೂ ಮುಸ್ಲಿಂ ರಾಷ್ಟ್ರಗಳು ನಿಷ್ಕ್ರಿಯವಾಗಿವೆ. ದಕ್ಷಿಣ ಆಫ್ರಿಕಾ ಮತ್ತು ಟರ್ಕಿಯಂತಹ ಕೆಲವೇ ಕೆಲವು ರಾಷ್ಟ್ರಗಳು ಮಾತ್ರವೇ ಗಾಜಾಗೆ ನೆರವು ನೀಡಲು ಕೈಚಾಚುತ್ತಿವೆ.

ಈ ಲೇಖನ ಓದಿದ್ದೀರಾ?: ಬಲಾಢ್ಯರೊಂದಿಗೆ ಜೊತೆಯಾಗುವುದು ಜನದ್ರೋಹ

ಗಾಜಾದಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುವಲ್ಲಿ ನಿಷ್ಕ್ರಿಯವಾಗಿರುವ ವಿಶ್ವಸಂಸ್ಥೆಯು ಗಾಜಾಗೆ ತುರ್ತು ಮಾನವೀಯ ನೆರವಿನ ಅಗತ್ಯ ಇದೆ ಎಂದಷ್ಟೇ ಹೇಳುತ್ತಿದೆ. UNICEF ಮತ್ತು ಇತರ ಸಂಸ್ಥೆಗಳು ಮಕ್ಕಳನ್ನು ಅಪೌಷ್ಟಿಕತೆ ಮತ್ತು ಸಾವಿನಿಂದ ರಕ್ಷಿಸಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ಗಾಜಾಕ್ಕೆ ಆಹಾರ, ಔಷಧಿ ಹಾಗೂ ಇತರ ಮೂಲಭೂತ ಸಾಮಗ್ರಿಗಳನ್ನು ತಲುಪಿಸಲು ಕೇವಲ 10-15% ನಷ್ಟು ಟ್ರಕ್‌ಗಳಿಗೆ ಮಾತ್ರವೇ ಅನುಮತಿ ದೊರೆತಿದೆ.

ಈ ಹಿಂದೆ, ಭಾರತವು ಪ್ಯಾಲೆಸ್ತೀನ್‌ ಜೊತೆಗಿತ್ತು. ಇಸ್ರೇಲ್‌ನ ಕ್ರೌರ್ಯವನ್ನು ನಿರಂತರವಾಗಿ ವಿರೋಧಿಸಿತ್ತು. ಆದರೆ, ಮೋದಿ ಆಡಳಿತದಲ್ಲಿ ಭಾರತವು ಇಸ್ರೇಲ್‌ ಕಡೆಗೆ ವಾಲಿಕೊಂಡಿದೆ. ಈಗ, ಗಾಜಾದ ಮಾನವೀಯ ದುರಂತವನ್ನು ನೋಡಿಯಾದರು, ಭಾರತವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ತಮ್ಮ ರಾಜಕೀಯ ಲಾಲಸೆಯನ್ನು ಬದಿಗೊತ್ತಿ ಪ್ಯಾಲೆಸ್ತೀನಿಯರಿಗೆ ಸ್ಪಂದಿಸಬೇಕಾದ ತುರ್ತು ಇದೆ. ಗಾಜಾಕ್ಕೆ ಆಹಾರ, ಔಷಧಿ, ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ತಲುಪಿಸಲು ಗಾಜಾ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸುವಂತೆ ಇಸ್ರೇಲ್‌ ಮೇಲೆ ಒತ್ತಡ ಹೇರಬೇಕಿದೆ. ಪ್ಯಾಲೆಸ್ತೀನ್ – ಇಸ್ರೇಲ್ ನಡುವಿನ ಶಾಂತಿಯುತ ಮಾತುಕತೆಗೆ ಒತ್ತಾಯಿಸಬೇಕಿದೆ. ಮುಖ್ಯವಾಗಿ, ವಿಶ್ವಸಂಸ್ಥೆಯು ಎಚ್ಚೆತ್ತುಕೊಂಡು ಮಧ್ಯಪ್ರವೇಶಿಸಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X