ಚುನಾವಣಾ ವಸ್ತಿಲಿನಿಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಶುಕ್ರವಾರ (ಆಗಸ್ಟ್ 1) ಮತದಾರರ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕರಡು ಮತಪಟ್ಟಿಯಲ್ಲಿ ನನ್ನ ಹೆಸರು ನಾಪತ್ತೆಯಾಗಿದೆ ಎಂದು ಬಿಹಾರ ವಿಪಕ್ಷ ನಾಯಕ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಕರಡು ಮತಪಟ್ಟಿ ಬಿಡುಗಡೆಯಾದ ಬಳಿಕ, ತೇಜಸ್ವಿ ಯಾದವ್ ಅವರು ಮಾಧ್ಯಮಗಳ ಎದುರೇ ತಮ್ಮ ಹೆಸರು ಇಲ್ಲದಿರುವುದನ್ನು ಪರಿಶೀಲಿಸಿದ್ದಾರೆ. ಅವರು ತಮ್ಮ ಮತದಾರ ಗುರುತಿನ ಚೀಟಿಯನ್ನು ಉಲ್ಲೇಖಿಸಿ, ಪರಿಶೀಸಿದಾಗ, ಅವರ ಹೆಸರು ಪಟ್ಟಿಯಲ್ಲಿ ಇಲ್ಲದೇ ಇರುವುದು ಕಂಡುಬಂದಿದೆ. ಬಳಿಕ, ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಹೇಗೆ? ಇದು ಪ್ರಜಾಪ್ರಭುತ್ವದ ಹತ್ಯೆ, ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಚುನಾವಣಾ ಆಯೋಗವು ಬಿಜೆಪಿಯ ಘಟಕದಂತೆ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ತೇಜಸ್ವಿ ಆದವ್ ಪ್ರಸ್ತುತ ರಘೋಪುರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ದಿಘಾ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ. ಆದರೆ, ಕರಡು ಮತಪಟ್ಟಿಯಲ್ಲಿ ಅವರ ಹೆಸರೇ ಇಲ್ಲದಿರುವುದು ಆಯೋಗದ ಕಾರ್ಯನಿರ್ವಹಣೆ ಕುರಿತಾದ ಅನುಮಾನಗಳನ್ನು ಮತ್ತಷ್ಟು ಗಂಭೀರಗೊಳಿಸಿದೆ.