ಪುತ್ರನ ಅತ್ಯಾಚಾರ ಪ್ರಕಣಕ್ಕೆ ಕುಮ್ಮಕ್ಕು ನೀಡುತ್ತಿರುವ ಔರಾದ ಕ್ಷೇತ್ರದ ಹಾಲಿ ಶಾಸಕ ಪ್ರಭು ಚವ್ಹಾಣ ಅವರನ್ನು ಕೂಡಲೇ ಬಂಧಿಸಬೇಕು. ಅತ್ಯಾಚಾರ ಆರೋಪ ಹೊತ್ತಿರುವ ಪ್ರಭು ಚವ್ಹಾಣ ಅವರ ಪುತ್ರ ಪ್ರತೀಕ ಚವ್ಹಾಣ ವಿರುದ್ಧದ ಪ್ರಕರಣವನ್ನು ಎಸ್‌ಐಟಿ ತನಿಖೆಯಾಗಬೇಕು ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ತಿಳಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ʼಮಹಾರಾಷ್ಟ್ರ ಮೂಲದ ಸಂಧ್ಯಾ ರಾಠೋಡ್ ಎಂಬ ಯುವತಿಗೆ ಕಳೆದ ವರ್ಷ ವಿವಾಹವಾಗುವುದಾಗಿ ನಂಬಿಸಿ ಬೆಂಗಳೂರು, ಶಿರಡಿ ಸೇರಿದಂತೆ ಅನೇಕ ಕಡೆ ಕರೆದೊಯ್ದು ಆಕೆಯ ಶೀಲ ಹಾಳು ಮಾಡಿರುವುದು ಅಲ್ಲದೆ ಆಕೆಯೊಂದಿಗೆ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ಕುರಿತು ಶಾಸಕ ಪ್ರಭು ಚವ್ಹಾಣ ಅವರ ಮನೆಗೆ ಯುವತಿಯ ಪೋಷಕರು ತೆರಳಿದಾಗ ಯುವತಿಯ ತಾಯಿಗೆ ಹಲ್ಲೆ ಮಾಡಿ, ತನ್ನ ಪ್ರಭಾವ ಬಳಸಿ ಅವರ ಮೇಲೆಯೇ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿʼ ಎಂದು ಹರಿಹಾಯ್ದರು.
ʼಈ ಹಿಂದೆ ಔರಾದ ತಾಲೂಕಿನ ಮತ್ತೋರ್ವ ಯುವತಿಯೊಂದಿಗೂ ಪ್ರತೀಕ ಚವ್ಹಾಣ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ನಂಬಿಸಿ ಅವರಿಂದ 26 ಎಕರೆ ಜಮೀನು ವಶಪಡಿಸಿಕೊಂಡು ಅವರ ಕುಟುಂಬವನ್ನು ಬೀದಿಗೆ ತಳ್ಳಿದ್ದಾರೆ. ಹೀಗೆ ಅನೇಕ ಯುವತಿಯರ ಬದುಕು ಹಾಳು ಮಾಡುತ್ತಿದ್ದಾರೆ. ಪುತ್ರನ ಇಂತಹ ಕೃತ್ಯದ ಖಂಡಿಸಿ ಬುದ್ಧಿ ಹೇಳಬೇಕಾದ ಶಾಸಕ ಪ್ರಭು ಚವ್ಹಾಣ ಅವರು ತಮ್ಮ ಪುತ್ರನ ಪರ ಪತ್ರಿಕಾಗೋಷ್ಠಿ ನಡೆಸಿ ಈ ಪ್ರಕರಣವನ್ನು ಬೇರೆಡೆ ತಿರುಗಿಸುವ ಪ್ರಯತ್ನಿಸಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಇತರರ ಹೆಸರು ಪ್ರಸ್ತಾಪ ಮಾಡಿದ್ದಾರೆʼ ಎಂದು ಕಿಡಿಕಾರಿದರು.
ʼಕಳೆದ ಒಂದೂವರೆ ದಶಕದಿಂದ ಔರಾದ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ನೆಲಕಚ್ಚಿದೆ. ಭೂಕಬಳಿಕೆ ಮುಗಿಲು ಮುಟ್ಟಿದೆ. ಅತ್ಯಾಚಾರ
ತಾಂಡವವಾಡುತ್ತಿದೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಅತ್ಯಾಚಾರ ಪ್ರಕರಣಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಏಕತಾ ಫೌಂಡೇಶನ್ ಜೊತೆ ಗುರುತಿಸಿಕೊಂಡಿರುವ ಔರಾದ, ಕಮಲನಗರ ತಾಲೂಕಿನ ಹಲವು ಮುಖಂಡರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಅವರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದ್ದಾರೆʼ ಎಂದು ಆರೋಪಿಸಿದರು.
ʼಈ ಪ್ರಕರಣದ ನೊಂದ ಯುವತಿಯರಿಗೆ ನ್ಯಾಯ ದೊರೆಯುವವರೆಗೂ ಏಕತಾ ಫೌಂಡೇಶನ್ ಅವರ ಬೆನ್ನಿಗೆ ನಿಲ್ಲಲಿದೆ. ಅತ್ಯಾಚಾರದ ಆರೋಪ ಎದುರಿಸುತ್ತಿರುವ ಪ್ರತೀಕ ಚವ್ಹಾಣ ಅವರ ಪ್ರಕರಣ ನಿಶ್ಚಿತಾರ್ಥಕ್ಕೂ ಮೊದಲು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಯುವತಿಯೊಂದಿಗೆ ನಡೆದ ಅತ್ಯಾಚಾರ ಕುರಿತಾದ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಿʼ ಒತ್ತಾಯಿಸಿದರು.
ಇದನ್ನೂ ಓದಿ : ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ : ಸಮಗ್ರ ತನಿಖೆಗೆ ಚಿಂತಕರ ಆಗ್ರಹ
ಪತ್ರಿಕಾಗೋಷ್ಠಿಯಲ್ಲಿ ತೇಜರಾವ ಮೂಳೆ, ಅಶೋಕ ಪಾಟೀಲ ಹೊಕ್ರಾಣಾ, ಸಂದೀಪ ಪಾಟೀಲ ಹಂಗರಗಾ, ಧನಾಜಿ ಕಾಂಬಳೆ, ಪ್ರಭು ಸ್ವಾಮಿ, ಹಣ್ಮು ಪಾಜಿ, ಪ್ರಕಾಶ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.