“ಅತಿಹೆಚ್ಚು ಮುಸ್ಲಿಂ ಯುವಕರು ಬೆಂಗಳೂರಿನಲ್ಲಿ ಡ್ರಗ್ ಅಡಿಕ್ಟ್ ಆಗುತ್ತಿದ್ದಾರೆ” ಎಂದು ಜಾಗೃತ ಕರ್ನಾಟಕದ ಸದಸ್ಯರಾದ ಅಬ್ದುಲ್ಲಾ ರಾಜ್ ಆತಂಕ ವ್ಯಕ್ತಪಡಿಸಿದ್ದಾರೆ
ಬದುಕು ಕಟ್ಟಿಕೊಳ್ಳುವುದಕ್ಕಾಗಿ ಹೈದ್ರಾಬಾದ್ ಕರ್ನಾಟಕದಿಂದ ಬೆಂಗಳೂರಿಗೆ ಬರುವ ವಲಸೆ ಕಾರ್ಮಿಕರ ಬದುಕು ನರಕವಾಗಿದೆ ಎಂದು ಒಳಮೀಸಲಾತಿ ಹೋರಾಟಗಾರ ಬಸವರಾಜ ಕೌತಾಳ್ ನೋವಿನಿಂದ ನುಡಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಐಎಟಿ ಸಭಾಂಗಣದಲ್ಲಿ ಶನಿವಾರ ‘ಜಾಗೃತ ಕರ್ನಾಟಕ ಸಂಘಟನೆ’ ಹಮ್ಮಿಕೊಂಡಿದ್ದ ‘ಒಂದು ವಿಶಿಷ್ಟ ಬಗೆಯ ಚಿಂತನ ಮಂಥನ- ಎಲ್ಲರಿಗೂ ಇದು ನಮ್ಮ ಬೆಂಗಳೂರು ಆಗಲು ಇರುವ ಸವಾಲುಗಳು ಮತ್ತು ಸಾಧ್ಯತೆಗಳು’ ಕಾರ್ಯಕ್ರಮದಲ್ಲಿ ‘ಸಮುದಾಯಗಳು’ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಬೆಂಗಳೂರಿನಲ್ಲಿ ಕಟ್ಟಡಗಳನ್ನು ಕಟ್ಟಲು, ಸ್ವಚ್ಛತಾ ಕಾರ್ಯಗಳನ್ನು ಮಾಡಲು, ನಗರವನ್ನು ಆರೋಗ್ಯವಾಗಿಡಲು ಹೈಕ (ಹೈದ್ರಾಬಾದ್ ಕರ್ನಾಟಕ) ಭಾಗದ ಶ್ರಮಿಕರು ಇಲ್ಲಿಗೆ ಬಂದಿದ್ದಾರೆ. ಬೆಂಗಳೂರಿನ ಒಳಗಡೆ ಒಂದು ನರಕವಿದೆ. ಇಲ್ಲಿ ಬದುಕು ಕಳೆದುಕೊಂಡು ಹೊರಗಡೆ ಹೋದವರೇ ಹೆಚ್ಚು. ಬದುಕುವ ಸಾಧ್ಯತೆಯೂ ಇದೆ. ಆದರೆ ಸವಾಲು ದೊಡ್ಡದು” ಎಂದರು.
“ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಹೆಚ್ಚು ವಲಸೆ ಬರುತ್ತಿದ್ದವರು ಹೈದ್ರಾಬಾದ್ ಕರ್ನಾಟಕದ ಜನರು. ಹೈಕ ಭಾಗದಲ್ಲಿ ಜೀವನಾಧಾರವಿಲ್ಲ, ಬೆಂಗಳೂರಲ್ಲಿ ಕೂಲಿ ಮಾಡಿದರೆ ಒಂದು ಹೊತ್ತಿನ ಊಟವಾದರೂ ಸಿಗುತ್ತದೆ ಎಂದು ಇಲ್ಲಿಗೆ ಬರಲಾರಂಭಿಸಿದರು. ಬಂದ ನಂತರ, ಆರು ತಿಂಗಳಲ್ಲಿ ಅವರಿಗೆ ನರಕ ದರ್ಶನವಾಗುತ್ತದೆ. ಬದುಕು ನಡೆಸುವುದು ಕಷ್ಟ ಎಂದು ಗೊತ್ತಾಗುತ್ತದೆ” ಎಂದು ವಿವರಿಸಿದರು.
“ಇಲ್ಲಿ ಲ್ಯಾಂಡ್ ಮಾಫಿಯಾ ಇದೆ. ಆ ಕಾರ್ಮಿಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಾರೆ. ಕೂಲಿ ಕೊಡದೆ ವಂಚಿಸುತ್ತಾರೆ. ಯಾವುದೇ ಷರತ್ತು ಇಲ್ಲದೆ ಕೆಲಸ ಮಾಡಲೇಬೇಕಾಗುತ್ತದೆ. ಹದಿನೆಂಟರಿಂದ ಇಪ್ಪತ್ತು ಗಂಟೆ ಕಾಲ ದುಡಿಸಿಕೊಂಡು ಕೂಲಿಯನ್ನೂ ವಂಚಿಸುವ ಕೆಲಸ ಆಗುತ್ತದೆ. ಬಹಳಷ್ಟು ಜನ ಕಾರ್ಮಿಕರು ಮೇಲಿನಿಂದ ಬಿದ್ದು ಸತ್ತಿದ್ದಾರೆ. ಕೈಕಾಲು ಮುರಿದುಕೊಂಡಿದ್ದಾರೆ. ಸುರಕ್ಷಿತ ಜಾಗದಲ್ಲಿ ಉಳಿಯದೆ ಹಾವುಗಳಿಂದ ಕಡಿಸಿಕೊಂಡು ಸತ್ತಿದ್ದಾರೆ. ಹೈಕ ಜನರು ಬೆಂಗಳೂರಿನ ಬೀದಿಗಳಲ್ಲಿ ತಮ್ಮ ಬದುಕುಗಳನ್ನು ದಿವಾಳಿ ಮಾಡಿಕೊಂಡಿದ್ದೇ ಹೆಚ್ಚು” ಎಂದು ಎಳೆಎಳೆಯಾಗಿ ಬಿಚ್ಚಿಟ್ಟರು.
ಇದನ್ನೂ ಓದಿರಿ: BIG BREAKING: ಧರ್ಮಸ್ಥಳ ಕೇಸ್‌ನಲ್ಲಿ ಮತ್ತೊಬ್ಬ ದೂರುದಾರ ಎಸ್‌ಐಟಿ ಮುಂದೆ ಹಾಜರು; ಮಹತ್ವದ ತಿರುವು
ಸ್ಲಮ್ ಜನಾಂದೋಲನ ಕರ್ನಾಟಕ ಸಂಘಟನೆಯ ಎ.ನರಸಿಂಹಮೂರ್ತಿಯವರು ಮಾತನಾಡಿ, “ಜಾತಿ ಪ್ರೇರಿತವಾದ ಟೌನ್ ಪ್ಲಾನ್ ಮಾಡಲಾತ್ತದೆ. ಸ್ಮಾರ್ಟ್‌ಸಿಟಿಯಲ್ಲಿನ ಏರಿಯಾ ಬೇಸ್ಡ್ ಡೆವಲಪ್‌ಮೆಂಟ್‌ನಲ್ಲಿಯೇ ಇದನ್ನು ಕಾಣಬಹುದು. ಮೊದಲ ಹಂತದಲ್ಲಿ ಯಾರು ಇರಬೇಕು, ಎರಡನೇ ಹಂತದಲ್ಲಿ ಮತ್ತು ಮೂರನೇ ಹಂತದಲ್ಲಿ ಯಾರಿರಬೇಕು ಎಂದು ವಿಂಗಡಿಸಲಾಗಿದೆ” ಎಂದು ತಿಳಿಸಿದರು.
“ಸ್ಲಮ್ ಜನರನ್ನು ಬಲವಂತವಾಗಿ ತೆರವು ಮಾಡಿಸುವುದು ನಿರಂತರ ನಡೆಯುತ್ತಲೇ ಇದೆ. ಪ್ರತಿ ಗಂಟೆಗೆ 25 ಜನರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಕೆಂಗೇರಿ, ಉಲ್ಲಾಳ, ಕೆ.ಆರ್.ಪುರಂ ಮೊದಲಾದ ಕಡೆ ಸ್ಲಮ್‌ಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಬಡ ಜನರು ಬದುಕು ರೂಪಿಸಿಕೊಳ್ಳಲೂ ಬಿಡುತ್ತಿಲ್ಲ” ಎಂದರು.
“ರಾಜ್ಯದಲ್ಲಿ 2,800 ಸ್ಲಮ್‌ಗಳಿವೆ. ಬೆಂಗಳೂರು ಒಂದರಲ್ಲೇ 1,100 ಸ್ಲಮ್‌ಗಳಿವೆ. ಅದರಲ್ಲಿ 150ರಿಂದ 180 ಸ್ಲಮ್‌ಗಳಲ್ಲಿ ಉತ್ತರ ಕರ್ನಾಟಕದ ಜನರಿದ್ದಾರೆ. ಇನ್ನೊಂದೆಡೆ ನೆಲ ಮಾಳಿಗೆ ಸ್ಲಮ್‌ಗಳು ಸೃಷ್ಟಿಯಾಗಿವೆ. ನೆಲ ಯಾರದ್ದೋ ಆಗಿರುತ್ತದೆ. ಆದರೆ ಅಲ್ಲಿ ಟಾರ್ಪೆಲ್ ಗುಡಿಸಲು ಹಾಕಿಕೊಟ್ಟು, ಸ್ಲಮ್ ಜನರಿಂದ ಹಫ್ತಾ ವಸೂಲಿ ಮಾಡುತ್ತಾರೆ” ಎಂದು ಬೆಂಗಳೂರಿನ ಅಸಲಿ ಜಗತ್ತನ್ನು ತೆರೆದಿಟ್ಟರು.
ವಕೀಲರಾದ ವಿನಯ್ ಶ್ರೀನಿವಾಸ್ ಮಾತನಾಡಿ, “ಬೆಂಗಳೂರನ್ನು ಅರ್ಥಮಾಡಿಕೊಳ್ಳಲು ಮಲ್ಲೇಶ್ವರಂ, ಬಸವನಗುಡಿ ಪ್ರದೇಶಗಳನ್ನು ನೋಡಬೇಕು. ಜಾನಕಿ ನಾಯರ್ ಅವರ ‘ಪ್ರಾಮಿಸ್ ಆಫ್ ದಿ ಮೆಟ್ರೊಪಾಲಿಸ್’ ಪುಸ್ತಕದಲ್ಲಿ ಬೆಂಗಳೂರಿನ ಆರಂಭಿಕ ಪ್ಲಾನಿಂಗ್‌ಗಳ ಬಗ್ಗೆ ದಾಖಲಿಸಿದ್ದಾರೆ. ಆ ಕೃತಿಯಲ್ಲಿನ ದಾಖಲೆಗಳ ಪ್ರಕಾರ ಮಲ್ಲೇಶ್ವರಂ ರೂಪಿಸಿದಾಗ ಮಧ್ಯದಲ್ಲಿ ಬ್ರಾಹ್ಮಣರು, ಸುತ್ತಲಿನ ಪ್ರದೇಶದಲ್ಲಿ ಒಕ್ಕಲಿಗರು, ಲಿಂಗಾಯತರು ಇರುವಂತೆಯೂ ಹಾಗೂ ಆಚೆ ಭಾಗದಲ್ಲಿ ಮುಸ್ಲಿಮರು ವಾಸಿಸುವಂತೆಯೂ ನೋಡಿಕೊಳ್ಳಲಾಯಿತು. ಹೀಗಾಗಿಯೇ ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿ ಒಂದೊಂದು ಮುಸ್ಲಿಮರ ಬ್ಲಾಕ್‌ಗಳಿವೆ. ಬೆಂಗಳೂರು ನಗರವನ್ನು ಕಟ್ಟುವಾಗಲೇ ಈ ರೀತಿ ಸಮಸ್ಯೆ ಇದೆ” ಎಂದು ವಿಶ್ಲೇಷಿಸಿದರು.
“ಉಳ್ಳವರು ಬೆಂಗಳೂರಿನಲ್ಲಿ ಹೆಚ್ಚು ಅಭಿವೃದ್ಧಿಯಾಗುತ್ತಲೇ ಇದ್ದಾರೆ. ಇನ್ನೊಂದೆಡೆ ಮನೆ ಇಲ್ಲದವರು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಲ್ಲಿ ಹಣವಂತರ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗುತ್ತಿದ್ದಾರೆ. ಏನೂ ಇಲ್ಲದವರ ಮಕ್ಕಳು, ಶ್ರೀಮಂತರಿಗೆ ಸ್ವಿಗ್ಗಿ ಡಿಲಿವರಿ ಮಾಡುತ್ತಾ ಇರಬೇಕಾಗಿದೆ. ಅಂತಹ ವೈರುಧ್ಯ ಇಲ್ಲಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ಸೌಜನ್ಯ ಅಂದ್ರೆ ಫ್ಲವರ್ ಅಲ್ಲ, ಫೈಯರ್: ಎಸ್. ಬಾಲನ್
“ಕಾನೂನುಗಳಿಗೆ ವಿರುದ್ಧವಾಗಿ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ. ಸ್ಲಮ್ ನಿವಾಸಿಗಳು ಮತ್ತು ಬೀದಿಬದಿ ವ್ಯಾಪಾರಿಗಳು ಕಾನೂನುಬಾಹಿರರು ಎಂಬ ಪರಿಕಲ್ಪನೆ ಅಧಿಕಾರಶಾಹಿ ವರ್ಗದಲ್ಲಿದೆ. ಬೀದಿಬದಿ ವ್ಯಾಪಾರಿಗಳಿಂದ ಅಪಘಾತ ಹೆಚ್ಚಾಗಿದೆ ಎನ್ನುವವರು ಕಳೆದ 10 ವರ್ಷಗಳಲ್ಲಿ 10 ಲಕ್ಷದಿಂದ 23 ಲಕ್ಷಕ್ಕೆ ಕಾರುಗಳ ಸಂಖ್ಯೆ ಹೆಚ್ಚಿದ್ದು ಹೇಗೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಈ ಅಧಿಕಾರಶಾಹಿಗಳ ಪ್ರಕಾರ ಬೀದಿಬದಿ ವ್ಯಾಪಾರಿಗಳೆಂದರೆ ತಳ್ಳೋ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿರಬೇಕು. ಉಚಿತವಾಗಿ ಕಾರ್ ಪಾರ್ಕಿಂಗ್ ಕೊಡುವ ನಗರದಲ್ಲಿ ತಳ್ಳೋಗಾಡಿ ಒಂದೇ ಕಡೆ ನಿಲ್ಲುವಂತಿಲ್ಲ” ಎಂದು ಟೀಕಿಸಿದರು.
ಜಾಗೃತ ಕರ್ನಾಟಕದ ಸದಸ್ಯರಾದ ಅಬ್ದುಲ್ಲಾ ರಾಜ್ ಮಾತನಾಡಿ ಮುಸ್ಲಿಂ ಸಮುದಾಯದ ತಲ್ಲಣಗಳನ್ನು ವಿವರಿಸಿದರು. “ಮುಸ್ಲಿಮರು ಮದ್ಯ ಸೇವನೆ ಮಾಡುವುದಿಲ್ಲ ಎಂಬ ನಂಬಿಕೆಯಲ್ಲಿ ಟ್ರಾಫಿಕ್ ಪೊಲೀಸರು ರಾತ್ರಿ ವೇಳೆ ಮುಸ್ಲಿಮರನ್ನು ಕಂಡಾಗ ಹಾಗೆಯೇ ಬಿಟ್ಟು ಕಳುಹಿಸುತ್ತಾರೆ. ದುರಾದೃಷ್ಟವಶಾತ್ ಅತಿಹೆಚ್ಚು ಮುಸ್ಲಿಂ ಯುವಕರು ಬೆಂಗಳೂರಿನಲ್ಲಿ ಡ್ರಗ್ ಅಡಿಕ್ಟ್ ಆಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
“ಮುಸ್ಲಿಂ ಸಮುದಾಯದವನಾಗಿ ಇಲ್ಲಿನ ಯುವಜನರ ಬಗ್ಗೆ ಯೋಚಿಸುತ್ತಿದ್ದೇನೆ. ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿರುವವರು ಮುಸ್ಲಿಂ ಸಮುದಾಯದ ಯುವಕರು. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಯುವಕರು ಡ್ರಗ್ ಅಡಿಕ್ಟ್ ಆಗುತ್ತಿರುವುದು ಹೆಚ್ಚಿದೆ. ಇದನ್ನು ಚಿಕ್ಕ ವಯಸ್ಸಿನಿಂದಲೂ ನೋಡುತ್ತಾ ಬಂದಿದ್ದೇನೆ. ಡಿ.ಜಿ. ಹಳ್ಳಿ ಮತ್ತು ಕೆ.ಜೆ. ಹಳ್ಳಿಯಲ್ಲಿ ಡ್ರಗ್ ವಿರೋಧಿ ಕಾರ್ಯಕ್ರಮಗಳು ಆಗಬೇಕಿದೆ” ಎಂದು ವಿನಂತಿಸಿದರು.
ಇದನ್ನೂ ಓದಿರಿ: ಅತ್ಯಾಚಾರ ಪ್ರಕರಣ | ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ
“ಬಡತನ ಎಂದರೆ ಏನೆಂದು ಗೊತ್ತಿಲ್ಲದ ಮುಸ್ಲಿಂ ಸಮುದಾಯದವರೂ ಬೆಂಗಳೂರಿನಲ್ಲಿ ಇದ್ದಾರೆ. ಇನ್ನೊಂದೆಡೆ ಪೇರೆಂಟ್ಸ್ ಮೀಟಿಂಗ್‌ಗೆ ಬನ್ನಿ ಎಂದರೆ ಒಂದು ದಿನದ ಕೂಲಿ ಯಾರು ಕೊಡುತ್ತಾರೆ ಎಂದು ಯೋಚಿಸುವ ಬಡ ಮುಸ್ಲಿಮರೂ ಇದ್ದಾರೆ” ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಾಗೃತ ಕರ್ನಾಟಕದ ಸಂಚಾಲಕರಾದ ರಾಜಶೇಖರ ಅಕ್ಕಿ, “ನಮ್ಮ ಪ್ರತಿಭಟನೆಯ ಹಕ್ಕನ್ನು ಫ್ರೀಡಂಪಾರ್ಕ್‌ಗೆ ಸೀಮಿತಗೊಳಿಸಿದ್ದು ಪ್ರಭುತ್ವವಲ್ಲ. ನಾವು ಅದನ್ನು ಬಿಟ್ಟುಕೊಟ್ಟಿದ್ದೇವೆ. ಅನೇಕ ವಿಷಯಗಳನ್ನು ನಾವಾಗಿಯೇ ಬಿಟ್ಟುಕೊಟ್ಟಿದ್ದೇವೆ” ಎಂದು ವಿಷಾದಿಸಿದರು.