ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ವಿಎಸ್ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಕನ್ನಡ ವಿಭಾಗ, ಈ ದಿನ.ಕಾಮ್ ಹಾಗೂ ಸವದತ್ತಿ ತಾಲೂಕಿನ ಛಾಯಾಗ್ರಾಹಕ ಮತ್ತು ವಿಡಿಯೋಗ್ರಾಫರ್ ಸಂಘದ ಸಂಯುಕ್ತ ಆಶ್ರಯದಲ್ಲಿ “ಛಾಯಾಗ್ರಹಣ, ಪತ್ರಿಕಾ ವರದಿ ಮತ್ತು ಡಿಜಿಟಲ್ ಮಾಧ್ಯಮ” ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ದಿ ಹಿಂದೂ ಪತ್ರಿಕೆಯ ವರದಿಗಾರ ಹೃಷಿಕೇಶ ಬಹದ್ದೂರ್ ದೇಸಾಯಿ ಅವರು, “ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡನ್ನೂ ಪ್ರಶ್ನಿಸುವ ಧೈರ್ಯ ಹೊಂದಿರಬೇಕು. ಹಾಗೂ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಸುದ್ದಿಗಳನ್ನು ಬರೆಯಬೇಕು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಈಗ ಎಐ ತಂತ್ರಜ್ಞಾನ ಮತ್ತು ರೋಬೋಟ್‌ಗಳ ಮೂಲಕವೂ ಪತ್ರಿಕಾ ವರದಿಗಳನ್ನು ತಯಾರಿಸಲಾಗುತ್ತಿದೆ” ಎಂದು ಹೇಳಿದರು.
ಅವರು ಟಿವಿ, ಮುದ್ರಿತ ಹಾಗೂ ಡಿಜಿಟಲ್ ಮಾಧ್ಯಮದ ಕಾರ್ಯವಿಧಾನವನ್ನು ಮತ್ತು ಮಾಧ್ಯಮದ ಬೆಳವಣಿಗೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಜೊತೆಗೆ ಪತ್ರಿಕಾ ವೃತ್ತಿಯ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು.
ಈ ದಿನ.ಕಾಮ್ ಕೇಂದ್ರ ಸಂಯೋಜಕರಾದ ಸಂತೋಷ ಎಚ್.ಎಮ್ ಅವರು ಡಿಜಿಟಲ್ ಮಾಧ್ಯಮದ ಮಹತ್ವ ಕುರಿತು ಮಾತನಾಡಿ, “ಸಮಾಜದ ಬದಲಾವಣೆಗೆ ಡಿಜಿಟಲ್ ಮಾಧ್ಯಮ ಅವಶ್ಯಕ. ಆದರೆ ಇಂದಿನ ಅನೇಕ ಮಾಧ್ಯಮಗಳು ಜನರ ಸಮಸ್ಯೆಗಳ ಕುರಿತು ಸುದ್ದಿಗಳನ್ನು ಮಾಡುತ್ತಿಲ್ಲ. ನಾವು ಜನರ ಸಮಸ್ಯೆಗಳಿಗೆ ಪರಿಹಾರ ಕಾಣುವ ಸುದ್ದಿಗಳನ್ನು ಮಾಡಬೇಕು ಹಾಗೂ ಸುಳ್ಳು ಸುದ್ದಿಗಳನ್ನು ಬಯಲು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು” ಎಂದು ಹೇಳಿದರು.

“ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವದತ್ತಿ ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ವಿಎಸ್ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ.ಎನ್ ಆರ್ ಸವತೀಕರ ಮಾತನಾಡಿ ಮಾಧ್ಯಮಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಶಕ್ತಿಶಾಲಿ ಸಾಧನವಾಗಿದ್ದು, ಅವು ಜನರ ಸಮಸ್ಯೆಗಳನ್ನು ಹೊತ್ತೊಯ್ಯುವಲ್ಲಿ ಹಾಗೂ ಸಕಾರಾತ್ಮಕ ಬದಲಾವಣೆ ತರಲು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.”

ಪ್ರೊ:ರಾಮರೆಡ್ಡಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಪೂರ್ಣಿಮಾ ಸಂಗಡಿಗರು ಸ್ವಾಗತ ಗೀತೆ ಹಾಡಿದರು, ಡಾ.ಅರುಂಧತಿ ಎಫ್ ಬಧಾಮಿ ವಂಧನಾರ್ಪಣೆ ಮಾಡಿದರು, ಪ್ರೀತಿ ಮಲ್ಲಾಡ ನಿರೂಪಿಸಿದರು.
ಸವದತ್ತಿ,ರಾಮದುರ್ಗ,ಬೈಲಹೊಂಗಲ,ಯರಗಟ್ಟಿ ತಾಲೂಕಿನ ಪದವಿ ಕಾಲೇಜುಗಳ ವಿಧ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಛಾಯಾಗ್ರಹಕರ ಸಂಘದ ಮಹಾಂತೇಶ ಹಾಗೂ ರಂಗ ಆರಾಧಾನಾ ಸಂಸ್ಥೆಯ ಝಾಕೀರ್ ನದಾಫ್ ಉಪಸ್ಥಿತರಿದ್ದರು.