ಶಹಾಪುರ ತಾಲೂಕಿನ ಹೊತ್ತಪೇಟ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಕ್ರಮ ಶುಲ್ಕ ಸಂಗ್ರಹ, ಕಳಪೆ ಮೊಟ್ಟೆ ಸೇರಿದಂತೆ ಬಿಸಿಯೂಟ ಅವ್ಯವಸ್ಥೆಯಲ್ಲಿನ ಅಕ್ರಮ ಖಂಡಿಸಿ ಎಸ್‌ಎಫ್‌ಐ ನೇತ್ರತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಇಮಾಮಸಾಬ್ ನದಾಫ್ ಮಾತನಾಡಿ, “ಹೊತಪೇಟ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ, ಗುಣಮಟ್ಟ ತರಕಾರಿ ಬಳಸಿ ಬಿಸಿಯೂಟ ನೀಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ಇಲ್ಲಿನ ಶಿಕ್ಷಕರು ಬೆದರಿಸುತ್ತಾರೆʼ ಎಂದು ದೂರಿದರು.
ʼಶಾಲಾಭಿವೃದ್ಧಿ ಹೆಸರಲ್ಲಿ ದೇಣಿಗೆ ಪೆಟ್ಟಿಗೆ ಇಟ್ಟು ಮಕ್ಕಳಿಂದ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಪ್ರತಿದಿನ ನೀವು ಹಣ ಹಾಕಲೇಬೇಕೆಂದು ಶಿಕ್ಷಕರು ಮಕ್ಕಳನ್ನು ಒತ್ತಾಯಿಸುತ್ತಿದ್ದಾರೆ. ಸರ್ಕಾರದಿಂದ ಉಚಿತ ಸಮವಸ್ತ್ರ ನೀಡಿದರೂ ಮಕ್ಕಳಿಂದ ಹಣ ಪಡೆಯುತ್ತಿದ್ದಾರೆ. ಇದರಿಂದ ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿʼ ಎಂದು ಆರೋಪಿಸಿದರು.
ʼಶಾಲಾ ಮುಖ್ಯಗುರು ಮತ್ತು ಸಿಬ್ಬಂದಿ ಮಕ್ಕಳಿಗೆ ಸರಿಯಾಗಿ ಬಿಸಿಯೂಟ ವಿತರಣೆ ಮಾಡುತ್ತಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುವ ಪರಿಸ್ಥಿತಿ ಉಂಟಾಗಿದೆ. ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಇಲ್ಲದೆ ನರಳುತ್ತಿದ್ದೇವೆ. ಇಂತಹ ತೊಂದರೆಗಳಿಂದ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ತಕ್ಷಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ‘ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಹೈಕ ಜನರ ಜೀವನ ನರಕ’
ಎಸ್‌ಎಫ್‌ಐ ಸಂಘಟನೆ ಶಾಲೆಯ ವಿದ್ಯಾರ್ಥಿ ಘಟಕದ ಮುಖಂಡರಾದ ಮಲ್ಲಯ್ಯ, ಭೀಮರಾಯ, ಮನು, ರಾಜೇಶ್ವರಿ, ಮಲ್ಲಮ, ಕೆಪಿಆರ್‌ಎಸ್ ತಾಲೂಕ ಕಾರ್ಯದರ್ಶಿ ಭೀಮರಾಯ ಪೂಜಾರಿ ಮತ್ತು ರೈತ ಮುಖಂಡ ದೇವು ಹಾಗೂ ಮಹಿಳಾ ಮುಖಂಡರಾದ ಗೀತಾ ಮತ್ತು ಗ್ರಾಮಸ್ಥರು ಇದ್ದರು.