ಜುಲೈ 19ರಂದು ಒಡಿಶಾದ ಪುರಿ ಜಿಲ್ಲೆಯಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು ಎಂದು ಆರೋಪಿಸಲಾಗಿದ್ದ 15 ವರ್ಷದ ಬಾಲಕಿ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಶನಿವಾರ ದೃಢಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಒಡಿಶಾ ಸಿಎಂ, “ಬಲಂಗ ಘಟನೆಯಲ್ಲಿ ಬಲಿಯಾದವರ ಸಾವಿನ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ. ಸರ್ಕಾರದ ಎಲ್ಲಾ ಪ್ರಯತ್ನಗಳು ಮತ್ತು ದೆಹಲಿಯ ಏಮ್ಸ್‌ನ ತಜ್ಞ ವೈದ್ಯಕೀಯ ತಂಡದ ನಿರಂತರ ಪ್ರಯತ್ನಗಳ ಹೊರತಾಗಿಯೂ ನಮಗೆ ಬಾಲಕಿಯ ಜೀವವನ್ನು ಉಳಿಸಲು ನಮಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ಬಾಲಕಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಒಡಿಶಾ | 15ರ ಬಾಲಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಶೇ. 70ರಷ್ಟು ಸುಟ್ಟ ದೇಹ
ಕಳೆದ ತಿಂಗಳ 19ರಂದು ಬಾಲಕಿ ತನ್ನ ಸ್ನೇಹಿತರ ಮನೆಯಿಂದ ಹಿಂತಿರುಗುತ್ತಿದ್ದಾಗ ಬಲಂಗಾ ಪೊಲೀಸ್ ಠಾಣೆಯ ಬಯಾಬರ್ ಗ್ರಾಮದ ಬಳಿಯ ಭಾರ್ಗಬಿ ನದಿಯ ದಡದಲ್ಲಿ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಯುವಕರು ಬಾಲಕಿಯನ್ನು ಬಲವಂತವಾಗಿ ಭಾರ್ಗವಿ ನದಿಯ ದಡಕ್ಕೆ ಕರೆದೊಯ್ದು ಆಕೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯರು ಬಾಲಕಿಯ ಬೆಂಕಿ ನಂದಿಸಿ ಆಕೆಯನ್ನು ಪಿಪಿಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಆಕೆಯನ್ನು ಭುವನೇಶ್ವರದ ಏಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಬಳಿಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಇನ್ನು ಒಡಿಶಾ ಪೊಲೀಸರು ತಮ್ಮ ತನಿಖೆಯಲ್ಲಿ ಘಟನೆಯಲ್ಲಿ ಬೇರೆ ಯಾವುದೇ ವ್ಯಕ್ತಿಯ ಪಾತ್ರದ ಬಗ್ಗೆ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. “ಬಲಂಗಾ ಘಟನೆಯಲ್ಲಿ ಸಂತ್ರಸ್ತ ಬಾಲಕಿಯ ಸಾವಿನ ಸುದ್ದಿ ಕೇಳಿ ನಮಗೆ ತುಂಬಾ ದುಃಖವಾಗಿದೆ. ಪೊಲೀಸರು ಅತ್ಯಂತ ಪ್ರಾಮಾಣಿಕತೆಯಿಂದ ತನಿಖೆ ನಡೆಸಿದ್ದಾರೆ. ತನಿಖೆ ಅಂತಿಮ ಹಂತವನ್ನು ತಲುಪಿದೆ. ಇಲ್ಲಿಯವರೆಗೆ ನಡೆಸಿದ ತನಿಖೆಯ ಪ್ರಕಾರ, ಬೇರೆ ಯಾರೂ ಭಾಗಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಈ ಘಟನೆ ಬಗ್ಗೆ ಯಾವುದೇ ಸೂಕ್ಷ್ಮ ಹೇಳಿಕೆಗಳನ್ನು ನೀಡದಂತೆ ನಾವು ಎಲ್ಲರನ್ನೂ ವಿನಂತಿಸುತ್ತೇವೆ” ಎಂದು ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ବଳଙ୍ଗା ଘଟଣାରେ ପୀଡ଼ିତା ଝିଅଟିର ମୃତ୍ୟୁ ଖବର ଶୁଣି ମୁଁ ଗଭୀର ଭାବେ ମର୍ମାହତ। ସରକାରଙ୍କ ସମସ୍ତ ପ୍ରୟାସ ଏବଂ ଏମ୍ସ ଦିଲ୍ଲୀରେ ବିଶେଷଜ୍ଞ ଡାକ୍ତରୀ ଦଳଙ୍କ ଅହୋରାତ୍ର ଚେଷ୍ଟା ସତ୍ତ୍ୱେ ତାଙ୍କ ଜୀବନ ରକ୍ଷା କରାଯାଇ ପାରିଲା ନାହିଁ।
— Mohan Charan Majhi (@MohanMOdisha) August 2, 2025
ମୁଁ ଝିଅଟିର ଅମର ଆତ୍ମାର ସଦଗତି କାମନା କରୁଛି ଏବଂ ଏହି ଅପୂରଣୀୟ କ୍ଷତିକୁ ସହିବା ପାଇଁ ତାଙ୍କ…
ಶುಕ್ರವಾರ, ಒಡಿಶಾ ಪೊಲೀಸರು ದೆಹಲಿಯ ಏಮ್ಸ್‌ನಲ್ಲಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಈ ನಡುವೆ “ನನ್ನ ಮಗಳ ಸಾವಿನ ಬಗ್ಗೆ ರಾಜಕೀಯ ಮಾಡಬೇಡಿ. ಸರ್ಕಾರ ಸಾಧ್ಯವಾದಷ್ಟು ಸಹಕರಿಸಿದೆ. ನನ್ನ ಮಗಳು ಮಾನಸಿಕ ಖಿನ್ನತೆಯಿಂದ ಪ್ರಾಣ ಕಳೆದುಕೊಂಡಿದ್ದಾಳೆ” ಎಂದು ಬಾಲಕಿಯ ತಂದೆ ಹೇಳಿಕೊಂಡಿದ್ದಾರೆ.
