ಮೈಸೂರಿನ ಡಾ. ವಿಜಯಲಕ್ಷ್ಮಿ ಬಸವರಾಜ್ ಚಾರಿಟಬಲ್ ಸೊಸೈಟಿ ಮತ್ತು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಸಹಯೋಗದಲ್ಲಿ ‘ ಹೊಯ್ಸಳ ಶಿಲ್ಪಗಳ ನೃತ್ಯ – ನಾದದ ಪ್ರತಿಬಿಂಬ ಕುರಿತಾದ ವಿಶೇಷ ಉಪನ್ಯಾಸವು ಸಂಸ್ಥೆಯ ಸೆಮಿನಾರ್ ಸಭಾಂಗಣ, ನಾಲೆಡ್ಜ್ ಉದ್ಯಾನವನದಲ್ಲಿ ನಡೆಯಿತು.
ಮಹಾರಾಜ ಕಾಲೇಜಿನ ಪ್ರಾಚೀನ ಇತಿಹಾಸ, ಪುರಾತತ್ತ್ವ ಮತ್ತು ಮ್ಯೂಸಿಯಾಲಜಿ ವಿಭಾಗದ ಪ್ರಾದ್ಯಾಪಕ ರೋಹಿತ್ ಈಶ್ವರ್ ಮಾತನಾಡಿ ‘ 11 ನೇ ಶತಮಾನದಿಂದ 14 ನೇ ಶತಮಾನದವರೆಗೆ ಅರಳಿದ ಹೊಯ್ಸಳ ವಂಶದ ಶಿಲ್ಪಕಲೆ ಮತ್ತು ಅದರ ಸಾಂಸ್ಕೃತಿಕ ಮಹತ್ವವನ್ನು ವಿವರಿಸುತ್ತ, ” ಬೇಲೂರಿನ ಚನ್ನಕೇಶವ ದೇವಾಲಯದ ಮದನಿಕೆಗಳು ಹೊಯ್ಸಳ ನೃತ್ಯ ಶಿಲ್ಪಗಳ ಅಮೂಲ್ಯ ಉದಾಹರಣೆಗಳಾಗಿದ್ದು, ನಾಟ್ಯ ಶಾಸ್ತ್ರದ ಕರಣ – ಮುದ್ರೆಗಳ ಸುಂದರ ಭಂಗಿಯನ್ನು ಪ್ರತಿಬಿಂಬಿಸುತ್ತವೆ. ಚಲನೆಯ ಕೌಶಲ್ಯ ಕಲ್ಲಿನಲ್ಲೇ ಚಲನಶೀಲತೆ, ಭಾವ ಭಂಗಿ ಮತ್ತು ನೃತ್ಯದ ಲಯವನ್ನು ಮೂಡಿಸುವ ಹೊಯ್ಸಳ ಶಿಲ್ಪಿಗಳ ಕೌಶಲ್ಯ ಅಪರೂಪವಾಗಿದೆ. “
” ಸಂಗೀತದ ಪ್ರತಿಫಲನೆ, ಶಿಲ್ಪಗಳಲ್ಲಿ ವೀಣೆ, ಮೃದಂಗ, ಬಾಸುರಿ, ಶಂಖ, ತಾಳಗಳು ಮುಂತಾದ ವಾದ್ಯಗಳನ್ನು ವಾದಿಸುತ್ತಿರುವ ವಿಗ್ರಹಗಳು ಕಂಡು ಬರುತ್ತವೆ. ಕೆಲವೆಡೆ ನೃತ್ಯಗಾರಿಕೆಯೊಂದಿಗೆ ಗಾಯಕರನ್ನೂ, ವಾದ್ಯಗಾರರನ್ನೂ ಸೇರಿಸಿ ಕೆತ್ತಿರುವುದರಿಂದ ಆ ಕಾಲದ ಸಮೂಹ ನೃತ್ಯ – ಸಂಗೀತ ಸಮರ್ಪಣೆಗಳು ಪ್ರತಿಫಲಿಸುತ್ತವೆ. ಸಾಂಸ್ಕೃತಿಕ ಮಹತ್ವ, ಹೊಯ್ಸಳ ಶಿಲ್ಪಗಳು ಕೇವಲ ಅಲಂಕಾರಿಕವಲ್ಲ, ಅವು ಆ ಕಾಲದ ಧಾರ್ಮಿಕ, ಐತಿಹಾಸಿಕ ಮತ್ತು ಕಲಾತ್ಮಕ ಜೀವನದ ಜೀವಂತ ದಾಖಲೆಗಳಾಗಿವೆ ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಗೀತ – ಸಾಹಿತ್ಯದ ಮಿಲನ; ಜನರಲ್ಲಿ ಪ್ರೀತಿ, ಸೌಹಾರ್ದತೆ, ಜನಜೀವನವನ್ನು ಉಲ್ಲೇಖಿಸುವ ಕ್ಷೇತ್ರ : ವೈ ಕೆ ಮುದ್ದುಕೃಷ್ಣ

ಕಾರ್ಯಕ್ರಮದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ. ಎಂ. ಪುಷ್ಪಾವತಿ, ಡಾ. ವಿಜಯಲಕ್ಷ್ಮಿ ಬಸವರಾಜ್, ರಂಗಕರ್ಮಿ ಪ್ರೊ. ಎಚ್. ಎಸ್. ಉಮೇಶ್, ರಾಮೇಶ್ವರಿ ವರ್ಮ, ಇಂದಿರಾ ನಾಯರ್, ರತ್ನ ಮಿರ್ಲೆ, ಪ್ರೊ. ರಂಗರಾಜು, ನಿರಂತರದ ನಿರ್ದೇಶಕ ಶ್ರೀನಿವಾಸ ಪಾಲಹಳ್ಳಿ, ಕೆಂಪರಾಜು, ಪ್ರೊ. ಕೆ. ಸಿ. ಬಸವರಾಜು, ಪತ್ರಕರ್ತ ಒಂಕಾರ್, ರವೀಸ್, ಧನಂಜಯ ಹಾಗು ಡಾ. ವಿಜಯಲಕ್ಷ್ಮಿ ಬಸವರಾಜ್ ಸೇರಿದಂತೆ ಇನ್ನಿತರರು ಇದ್ದರು.