ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಮೇಲೆ 11ನೇ ತರಗತಿಯ 7 ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿ ನಡೆದಿದೆ. 7 ಮಂದಿ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ಕಾಮರೂಪದ ರಂಗಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಘಟನೆ ನಡೆದಿದೆ. ಸಂತ್ರಸ್ತ ಬಾಲಕ ಮತ್ತು ಆರೋಪಿಗಳು ಎಲ್ಲರೂ ಆಪ್ತಾಪ್ತರು. ಭಾರತದಾದ್ಯಂತ ಜವಾಹರ ನವೋದಯ ವಿದ್ಯಾಲಯಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ನವೋದಯ ವಿದ್ಯಾಲಯ ಸಮಿತಿ ನಡೆಸುತ್ತಿದೆ.
ಬಾಲಕನ ದೌರ್ಜನ್ಯದ ಬಗ್ಗೆ ಶಾಲೆಯ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಹುಡುಗರನ್ನು ಬಂಧಿಸಿದ್ದಾರೆ.
ದೂರಿನ ಪ್ರಕಾರ, 6ನೇ ತರಗತಿಯ ಬಾಲಕ ಮತ್ತು ಆರೋಪಿಗಳು ರಂಗಿಯಾದ ಜವಾಹರ ನವೋದಯ ವಿದ್ಯಾಲಯದ ಬಾಲಕರ ಹಾಸ್ಟೆಲ್‌ನ ವಾಸಿಸುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಬಾಲಕನ ಮೇಲೆ ಮೂರು ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತ ಬಾಲಕ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಪೋಷಕರು ಶಾಲಾ ಪ್ರಾಂಶುಪಾಲರಿಗೆ ತಿಳಿಸಿದ ಬಳಿಕ, ಪ್ರಕರಣ ದಾಖಲಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಮಾಲೆಗಾಂವ್ ಸ್ಫೋಟ ಪ್ರಕರಣ: 1,087 ವಿಚಾರಣೆಗಳು, ನಾನಾ ಆದೇಶಗಳ ನಡುವೆ ಸಂತ್ರಸ್ತರ ಹೋರಾಟ ನಡೆದದ್ದು ಹೀಗೆ!
ಆರೋಪಿಗಳ ವಿರುದ್ಧ ರಂಗಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಾಲಕರನ್ನು ಬಂಧಿಸಲಾಗಿದ್ದು, ಬಾಲಾಪರಾಧಿ ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ಬಾಲಾಪರಾಧ ಗೃಹಕ್ಕೆ ಕಳುಹಿಸಿದೆ. ಸಂತ್ರಸ್ತ ಬಾಲಕನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಗಳು ಮತ್ತು ಶಾಲಾ ಅಧಿಕಾರಿಗಳ ಹೇಳಿಕೆಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.