ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ಗುರುತಿಸಿದ 11ನೇ ಸ್ಥಳದಲ್ಲಿ ಆ. 4ರಂದು ಕಳೇಬರಕ್ಕಾಗಿ ಶೋಧ ಕಾರ್ಯ ನಡೆಯಲಿದೆ.
ಅನಾಮಿಕ ವ್ಯಕ್ತಿ ತಿಳಿಸಿರುವಂತೆ ಜು. 28ರಿಂದ ಸ್ಥಳ ಮಹಜರು ಪ್ರಕ್ರಿಯೆಯಿಂದ ಆರಂಭವಾಗಿತ್ತು. ಎಸ್‌ಐಟಿಯ ಕಾರ್ಯಾಚರಣೆ ಆ. 4ಕ್ಕೆ 8ನೇ ದಿನಕ್ಕೆ ತಲುಪಿದೆ. ಭಾನುವಾರ ರಜಾ ದಿನ ಅದ್ದರಿಂದ ಯಾವುದೇ ಕಾರ್ಯಾಚರಣೆ ನಡೆದಿಲ್ಲ. ಈಗಾಗಲೇ ಶೋಧ ಕಾರ್ಯ ನಡೆದ ಸ್ಥಳ ಹಾಗೂ ಮುಂದೆ ಶೋಧ ನಡೆಸಲಿರುವ 11, 12 ಮತ್ತು 13ನೇ ಸ್ಥಳಕ್ಕೆ ಯಾರೂ ತೆರಳದಂತೆ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆ ಈ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು | ಅಕ್ರಮ ಕೆಂಪು ಕಲ್ಲು ಸಾಗಾಟ; ಲಾರಿ, ಇಬ್ಬರು ಚಾಲಕರು ವಶಕ್ಕೆ

ಅನಾಮಿಕ ವ್ಯಕ್ತಿಯು ಪ್ರತೀದಿನ ಬೆಳಿಗ್ಗೆ ಎಸ್‌ಐಟಿ ಕಚೇರಿಗೆ ಹಾಜರಾಗಿ ಮತ್ತೆ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ವಕೀಲರ ಜತೆ ಆತನನ್ನು ಕಳುಹಿಸಲಾಗುತ್ತಿದೆ. ಈ ಮಧ್ಯೆ ತನಿಖಾಧಿಕಾರಿ ಮಂಜುನಾಥ್ ಗೌಡ ಅವರ ಮೇಲೆಯೇ ಅನಾಮಿಕ ದೂರು ನೀಡಿದ್ದರಿಂದ ಅವರು ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗವಹಿಸದೆ ಕಚೇರಿಯಲ್ಲಿಯೇ ಇರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಮತ್ತೊಂದು ದೂರು ಇಂದು ಪರಿಗಣನೆ ಸಾಧ್ಯತೆ
ಧರ್ಮಸ್ಥಳ ಗ್ರಾಮದಲ್ಲಿ ಸುಮಾರು 15 ವರ್ಷಗಳ ಹಿಂದೆ ಕೊಲೆ ನಡೆದಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ನೀತಿ ಸಂಘಟನೆಯ ಮುಖ್ಯಸ್ಥ ಜಯಂತ್ ಟಿ ಎಂಬವರು ಆ. 2ರಂದು ಎಸ್‌ಐಟಿ ಕಚೇರಿಗೆ ದೂರು ನೀಡಲು ಆಗಮಿಸಿದ್ದರು. ಆ. 4ರಂದು ಅವರ ಪ್ರಕರಣ ಸ್ವೀಕರಿಸುವ ಸಾಧ್ಯತೆಯಿದೆ.