ಮಿಜೋ ಲೇಖಕಿ ಮಾಲ್ ಸಾವ್ನಿ ಜೇಕಬ್ ಇಂಗ್ಲಿಷ್‌ನಲ್ಲಿ ಬರೆದಿರುವ ಮೊದಲ ಕೃತಿ ʼಜೊರಾಮಿʼಯನ್ನು ಭೂಮಿಕಾ ಆರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಪ್ರೊ. ಎನ್. ಮನು ಚಕ್ರವರ್ತಿ ಬರೆದಿರುವ ಮುನ್ನುಡಿ ಇಲ್ಲಿದೆ.
ಎಲ್ಲಾ ಕಾಲಗಳಲ್ಲೂ ಐತಿಹಾಸಿಕ ಕಥನ ಹಾಗೂ ಕಥನಾತ್ಮಕ ಇತಿಹಾಸ ಸಾಹಿತ್ಯ ವಿಮರ್ಶೆಯ ಮುಖ್ಯ ನೆಲೆ. ಸಮಯ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಸಾಹಿತ್ಯ ವಿಮರ್ಶಕರು ಎಚ್ಚರದಿಂದಲೇ ಈ ಅಂಶಗಳನ್ನು ಪರಾಮರ್ಶೆಗೆ ಒಳಪಡಿಸುತ್ತಿರುವುದು ಸಹಜ ನಡೆ. ಚಾರಿತ್ರಿಕ ಹಾಗೂ ರಾಜಕೀಯ ಘಟನಾವಳಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಕಥಾನಕಗಳನ್ನು ಇಂತಹ ಎಚ್ಚರದ ಕಣ್ಣಿನಿಂದಲೇ ಗಮನಿಸುವುದು ಸೂಕ್ತ. ಉದಾಹರಣೆಗೆ ಲಿಯೋ ಟಾಲ್‌ಸ್ಟಾಯ್ ವಿರಚಿತ ‘ವಾರ್ ಅಂಡ್ ಪೀಸ್’ ಹಾಗೂ ಚಾರ್ಲ್ಸ್ ಡಿಕೆನ್ಸ್ ವಿರಚಿತ ‘ಎ ಟೇಲ್ ಆಫ್ ಟೂ ಸಿಟೀಸ್’ ಸೇರಿದಂತೆ ಇನ್ನೂ ಹಲವಾರು ಪ್ರಮುಖ ಕೃತಿಗಳು ಪರಿಶೀಲನೆಗೆ ಅರ್ಹವಾಗಿದ್ದರೂ ಈ ಎರಡು ಕೃತಿಗಳಲ್ಲಿನ ಚಾರಿತ್ರಿಕ ಘಟನಾವಳಿಗಳ ಹಾಗೂ ರಾಜಕಾರಣದ ಬಿಕ್ಕಟ್ಟುಗಳ ವಿವಿಧ ಮುಖಗಳ ಪರಿಶೀಲಿಸಿದಾಗ ಸಾಹಿತ್ಯದ ಪರಾಮರ್ಶೆಯಲ್ಲಿ ಕಲೆ ಮತ್ತು ರಾಜಕೀಯ ಪೂರಕವಲ್ಲದ ಕ್ಷೇತ್ರಗಳಾಗಿದ್ದು ಅವುಗಳನ್ನು ಮೇಳೈಸಿ ಪರಿಗಣಿಸುವುದು ಸೂಕ್ತವಲ್ಲ ಎಂಬುದನ್ನು ಒಳ್ಳೆಯ ಸೂಕ್ಷ್ಮಜ್ಞ ಸಾಹಿತ್ಯ ವಿಮರ್ಶಕರು ಒಪ್ಪಲಾರರು.
ಕಲೆಯ ದೃಷ್ಟಿಕೋನ ಇಲ್ಲವೇ ಕಲೆಯನ್ನು ಕೊಚ್ಚಿಕೊಂಡು ಹೋಗುವ ಶಕ್ತಿ ಇರುವ ರಾಜಕೀಯ ಹಾಗೂ ಚರಿತ್ರೆಯ ಸಾಮರ್ಥ್ಯವನ್ನು ಪರಿಗಣಿಸದವರು ಮಾತ್ರ ಸಾಹಿತ್ಯ ಕೃತಿಗಳು ಚರಿತ್ರೆ ಮತ್ತು ರಾಜಕಾರಣದ ಸಮಯ ಸಂದರ್ಭಗಳನ್ನು ಪ್ರತ್ಯೇಕಿಸುವ ವಾದವನ್ನು ಮಂಡಿಸಬಲ್ಲರು. ಆದರೆ, ಈ ವಿಚಾರದಲ್ಲಿ ರಾಜಕಾರಣ ಹಾಗೂ ಚರಿತ್ರೆಗಳು ಪರಸ್ಪರ ಅಂತರ್ಗತವಾಗಿ ಮಹಾ ಸಂಸ್ಕಾರಕ್ಕೆ ಒಳಗಾಗುವ ಸಂಗತಿಯನ್ನು ಎಚ್ಚರದಿಂದ ಗಮನಿಸಿ ಕಲಾಕೃತಿಗಳು ಯಾವ ರೂಪ ಪಡೆದು ಕಲ್ಪನಾ ಸಾಮರ್ಥ್ಯ ಹಾಗೂ ಸಂವೇದನೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಪರಿಶೀಲಿಸುವ ಅಗತ್ಯವಂತೂ ಇದೆ. ಕಲ್ಪನಾ ಸಾಮರ್ಥ್ಯ ಹಾಗೂ ಸಂವೇದನೆ ಕಲೆಯ ದೃಷ್ಟಿಕೋನದ ಪ್ರಮುಖ ಅಂಶಗಳು. ಚರಿತ್ರೆ ಹಾಗೂ ರಾಜಕಾರಣ ಒಂದು ಕಲಾಕೃತಿಯಾಗಿ ಹೊರಹೊಮ್ಮುವಾಗ ಮಹತ್ವಪೂರ್ಣ ಪರಿವರ್ತನೆ ಪ್ರಕ್ರಿಯೆಗೆ ನಾಂದಿ. ಇಂತಹ ಸಂಸ್ಕಾರದ ಪ್ರಕ್ರಿಯೆಯಲ್ಲಿ ಕಲ್ಪನೆ ಹಾಗೂ ಚರಿತ್ರೆ ಮತ್ತು ರಾಜಕಾರಣದ ಅಂಕಿ ಅಂಶಗಳ ಆಧಾರದ ಮೇಲೆ ರೂಪಕಾತ್ಮದ ಸ್ಥಿತಿಯನ್ನು ಕಲಾಕೃತಿಗೆ ಹಾಗೂ ಅಂತಃಸ್ಫೂರ್ತಿಯ ಮೂಸೆಯಲ್ಲಿ ಹಾದು ಹೋಗುವ ಕಲೆಯನ್ನು ರೂಪಿಸುವ ಎರಡು ಮಹತ್ವದ ಶಕ್ತಿಗಳು. ಚರಿತ್ರೆ ರಾಜಕಾರಣದ ವಾಸ್ತವ ಅಂಶಗಳು. ಸಮಯ ಹಾಗೂ ಸಂದರ್ಭಗಳ ಖಚಿತ ಮಿತಿಯೊಳಗೆ ಕಾಲಾತೀತವಾದ ಗುಣಮಟ್ಟ ನಿರೂಪಿಸಬಲ್ಲ ಸಾಮರ್ಥ್ಯ ಉಳ್ಳವು. ರಾಜಕಾರಣ ಮತ್ತು ಚರಿತ್ರೆ ಅತಿಭೌತಿಕ ಸಾಪೇಕ್ಷ ಅಂಶಗಳ ನಡುವೆಯೂ ವಾಸ್ತವತೆಯ ನೈತಿಕ ಸನ್ನಿವೇಶಗಳಿಂದ ಸೀಮಿತ ಗಡಿಗಳ ದಾಟಿ ಸರಳ ರೇಖೆಯ ಹಾಗೂ ಕ್ರಮಾಂಕದ ಕಾಲ ಹಾಗೂ ಸಂದರ್ಭದ ಅಡೆತಡೆಗಳ ನಡುವೆಯೂ ಇಂತಹ ವಾತಾವರಣ ಸೃಷ್ಟಿ ಸಾಧ್ಯ. ಇಂತಹ ಅಭಿವ್ಯಕ್ತಿಯ ಮೂಲಕ ಕಾಲ ಮೀರುವ ವಿಕಸನವನ್ನು ಸಾಧಿಸುತ್ತವೆ. ಒಂದು ಕಲಾಕೃತಿಯಲ್ಲಿ ಇತಿಹಾಸ ರಾಜಕೀಯದ ಒಂದು ನಿರ್ದಿಷ್ಟ ಕಾಲಘಟ್ಟವು ಅಮೂರ್ತ ಹಾಗೂ ಸೈದ್ಧಾಂತಿಕ ಅಂಶಗಳನ್ನು ಒಳಗೊಂಡು ವಾಸ್ತವದ ನೆಲೆಯ ಮೇಲೆ ಚಿಮ್ಮಿದರೂ, ಏಕರೇಖಾತ್ಮಕವಾದ ಕಾಲಬದ್ಧತೆಯ ಮಿತಿಗಳನ್ನು ಮೀರುತ್ತವೆ. ಪ್ರವಾದಿ ಸ್ವರೂಪದ ಕಲೆಯ ಗುಣಮಟ್ಟ ಮಾನವನ ಸ್ಥಿತಿಯ ಅರ್ಥವಂತಿಕೆಯ ಹಾಗೂ ಎಲ್ಲಾ ಅಮೂರ್ತಗಳ ಸಾಮಾನ್ಯೀಕರಣಗಳು ವಿಲೋಮಗೊಂಡು ಮಾನವನ ಅಸ್ತಿತ್ವದ ಸತ್ವ, ವಿವಿಧ ಆಯಾಮಗಳ ಮನುಷ್ಯತ್ವದ ಅಸ್ತಿತ್ವ, ವಿವಿಧ ಆಕಾರಗಳ ಮಾನವನ ಅನುಭವದ ಗ್ರಹಿಕೆಯ ಪ್ರಮಾಣವನ್ನು ಎಲ್ಲಾ ತಲೆಮಾರಿನವರಿಗೂ ವಿಸ್ತರಿಸಿ ಬಹುಮುಖತ್ವದ ನೆಲೆಗಳನ್ನು ಮುಖಾಮುಖಿಯಾಗಿಸುತ್ತದೆ.

ಮಿಜೋ ಲೇಖಕಿ ಮಾಲ್ ಸಾವ್ನಿ ಜೇಕಬ್ ಇಂಗ್ಲಿಷ್‌ನಲ್ಲಿ ಬರೆದಿರುವ ಮೊದಲ ಕೃತಿ ಜೊರಾಮಿಯನ್ನು ಭೂಮಿಕಾ ಆರ್ ಕನ್ನಡಕ್ಕೆ ಅನುವಾದಿಸಿದ್ದು ಈ ಕೃತಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅಮೂಲ್ಯವಾದ ಒಂದು ಕೊಡುಗೆ. ಕನ್ನಡ ಸಾಹಿತ್ಯ ಲೋಕ ಮೊದಲಿನಿಂದಲೂ ನೈತಿಕವಾದ ಹಾಗೂ ಸಹ್ಯವಲ್ಲದ ಸತ್ಯಗಳನ್ನು ಒಳಗೊಂಡ ಮಾನವೀಯ ಅನುಭವಗಳನ್ನು ಜ್ಞಾನ ಹಾಗೂ ಆಲೋಚನಾ ಮಾರ್ಗಗಳ ಮೂಲಕ ವಿಶ್ಲೇಷಿಸಿ ಹೊಸ ಸಿದ್ಧಾಂತಗಳನ್ನು ರೂಪಿಸುವ ಪರಂಪರೆಗೆ ಹೊರತಾಗಿದೆ. ಕನ್ನಡದಲ್ಲಿ ನೈತಿಕ ಪ್ರಜ್ಞೆ, ನೈತಿಕ ದೃಷ್ಟಿಗಳು ಭಾರತದ ಬೇರೆ ಭಾಷಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ನಿರ್ಲಕ್ಷ್ಯದ ಸ್ಥಿತಿಗೆ ಒಳಗಾದ ಸಂದರ್ಭಗಳ ನಡುವೆಯೂ ಸತತವಾಗಿ ಅಧಿಕಾರ ಹಾಗೂ ಅಧಿಕಾರಸ್ಥರ ಸ್ಥಾನಮಾನಗಳನ್ನು ಮಾನವೀಯ ಅನುಭವಗಳಾಗಿ ತುಲನೆ ಮಾಡುವ ಕೆಲಸವನ್ನು ಮುಂದುವರಿಸಿವೆ. ಈ ದೃಷ್ಟಿಯಿಂದ ಮುಖ್ಯವಾಗಿ ಸಾಹಿತ್ಯ ಕೃತಿಗಳು ಅಧಿಕಾರ ಹಾಗೂ ಆಡಳಿತಕ್ಕೆ ಮುಖಾಮುಖಿಯಾಗುತ್ತಲೇ ಮಾನವೀಯ ಸಂಬಂಧಗಳು ಹಾಗೂ ಮನುಷ್ಯರ ಮೂಲಭೂತ ಅಸ್ತಿತ್ವದ ಬಿಕ್ಕಟ್ಟುಗಳನ್ನು ಚರ್ಚಿಸಿ ಓದುಗ ಲೋಕದ ಮುಂದೆ ಸಾಮಾಜಿಕ ಲೋಕದ ವಿಭಿನ್ನ ಸತ್ಯಗಳನ್ನು ವಿಭಿನ್ನ ರೀತಿಯಲ್ಲಿ ಮುಂದಿಡುತ್ತದೆ. ಮನುಷ್ಯನ ಬದುಕಿನ ಅಸಹನೀಯ ಸತ್ಯಗಳನ್ನು ಜ್ಞಾನ ಹಾಗೂ ವಿಚಾರಕ್ಕೆ ಹೊರತಾದ ನೈತಿಕ ಸಿದ್ಧಾಂತಗಳನ್ನು ಆಕಾರರಹಿತ ತಾತ್ವಿಕತೆಯನ್ನು ಸಾಮಾನ್ಯವಾಗಿ ಕನ್ನಡ ಸಾಹಿತ್ಯ ಎತ್ತಿ ಹಿಡಿದಿದೆ. ಈ ಸಂದರ್ಭದಲ್ಲಿ ಮಾಲ್ ಸಾವ್ನಿ ಜೇಕಬ್‌ರವರ ಇಂಗ್ಲಿಷ್ ಕಾದಂಬರಿಯ ಭೂಮಿಕಾ ಆರ್. ಅವರ ಕನ್ನಡ ಅನುವಾದ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅಮೂಲ್ಯ ಕೊಡುಗೆ.
ಜೊರಾಮಿ ಕೃತಿ ಈ ನಿಟ್ಟಿನಲ್ಲಿ ಮೇಲೆ ಪ್ರಸ್ತಾಪಿಸಿದ ಅಂಶಗಳನ್ನು ಪ್ರಾಮಾಣಿಕವಾಗಿ ಪ್ರತಿಧ್ವನಿಸಿದೆ. ಈ ಕಾದಂಬರಿಯು ಮಿಜೋರಂನ ಸಾಂಸ್ಕೃತಿಕ ಲೋಕದ ಚಹರೆಯನ್ನು ದಾಖಲಿಸಿ ಮಿಜೋರಂ ಜನರ ಬಿಕ್ಕಟ್ಟುಗಳ ನಡುವಣ ಅಸ್ತಿತ್ವವನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಜೊರಾಮಿ ಕೃತಿಯ ಕಥಾನಾಯಕಿ ಜೊರಾಮಿಯ ವೈಯಕ್ತಿಕ ಬದುಕಿನಲ್ಲಿ ಪತಿ ಸಂಗ ಜೊತೆಗಿನ ಸೂಕ್ಷ್ಮ ಸಂಬಂಧ ಹದಿವಯಸ್ಸಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಘಾಸಿಯಾಗಿರುವ ಅನುಭವ, ಆಕೆಯ ಒಂಟಿತನ, ಇವು ದುಃಸ್ವಪ್ನದಂತೆ ನಿರಂತರವಾಗಿ ಕಾಡುತ್ತವೆ. ಈ ಕೃತಿಯಲ್ಲಿ ಜೊರಾಮಿಯ ಆತ್ಮೀಯ ಗೆಳತಿ ಕಿಮಿ ನೋವಿನ ಧ್ವನಿಯೂ ಇದೆ. ಈ ಇಬ್ಬರು ಮಹಿಳೆಯರು ಅನುಭೂತಿ ಹಾಗೂ ಅನುಕಂಪದಿಂದ ಪರಸ್ಪರ ಜೊತೆಗೂಡುವುದು ಹಲವು ಅಂಶಗಳ ಪ್ರತಿಧ್ವನಿಯ ಸಂಕೇತ. ಜೊರಾಮಿ ಕೃತಿಯು ಮನುಷ್ಯರ ವೈಯಕ್ತಿಕ ಬದುಕಿನ ತಲ್ಲಣಗಳು, ಭಾವನಾತ್ಮಕ ಹಾಗೂ ನೈತಿಕ ಸಂಘರ್ಷಗಳ ನಡುವೆ ಕೆಲ ಸಂದರ್ಭಗಳಲ್ಲಿ ನಿಟ್ಟುಸಿರು ಬಿಡುವ ಘಟನಾವಳಿಗಳನ್ನು ದಾಖಲಿಸಿದೆ. ಈ ಕೃತಿಯು ಒಂದು ರೀತಿಯಲ್ಲಿ ಅಧ್ಯಾತ್ಮಿಕವಾಗಿ ನೋಡಿದಾಗ ಪ್ರತಿಕೂಲ ಸ್ಥಿತಿಯಲ್ಲಿ ಮಾನವೀಯತೆಯ ವಿರುದ್ಧ ದಿಗ್ವಿಜಯದ ಸಂಕೇತವೂ ಆಗಿದೆ. ಹಾಗೆ ನೋಡಿದರೆ, ಇದು ಈ ಕೃತಿಯ ಅಧ್ಯಾತ್ಮಿಕ ದೃಷ್ಟಿಕೋನವೂ ಹೌದು.
1960 ರಿಂದ 80ರ ದಶಕದ ನಡುವೆ ಸ್ವತಂತ್ರ ಭಾರತ ಅದಕ್ಕೂ ಮುನ್ನಾ ದಿನಗಳ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮಿಜೋರಂ ಕಂಡ ಚಾರಿತ್ರಿಕ ಮತ್ತು ರಾಜಕೀಯ ಆಯಾಮಗಳಿಗೆ ಘಟನಾವಳಿಗೆ ನಿದರ್ಶನಗಳಿವೆ. ಈ ಸಂದರ್ಭದಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತದ ಸೈನ್ಯದ ಕ್ರೌರ್ಯದ ಮೂಲಕ ಮಿಜೋರಂ ಜನರ ಆಶೋತ್ತರಗಳು ಹಾಗೂ ಸ್ವಾಯತ್ತ ಸ್ವತಂತ್ರ ದೇಶದ ಕನಸು ಹೇಗೆ ಅತ್ಯಂತ ಹೀನಾಯವಾಗಿ ನುಚ್ಚು ನೂರಾಯಿತು ಎಂಬುದರ ಚಿತ್ರಣವಿದೆ. ಮಿಜೋರಂ ಜನರ ಅಪೇಕ್ಷೆಗಳನ್ನು ಧಿಕ್ಕರಿಸಿ ಭಾರತ ದೇಶ ನಡೆದುಕೊಂಡ ರೀತಿಯ ಬಗ್ಗೆ ಹಲವಾರು ನಿದರ್ಶನಗಳಿವೆ. ವಸಾಹತುಶಾಹಿ ಆಡಳಿತದಲ್ಲಿ ಸ್ಥಳೀಯ ಮಿಜೋಗಳ ಬಗ್ಗೆ ತಾತ್ಸಾರವಿದ್ದರೂ ಆಧುನಿಕ ಭಾರತದ ಆಡಳಿತವೂ ಕೂಡಾ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಮಿಜೋರಂ ಹಾಗೂ ಅಲ್ಲಿನ ಜನರ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಅವಕಾಶ ನಿರಾಕರಿಸಿರುವ ಸಂಗತಿಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಭಾರತದ ಒಕ್ಕೂಟದಲ್ಲಿ ಮಿಜೋರಂ ಎಂಬುದು ಒಂದು ಭೌಗೋಳಿಕ ಪ್ರದೇಶವಾಗಿ ಮಾತ್ರ ಅಸ್ತಿತ್ವ ಇಟ್ಟುಕೊಂಡಿತ್ತು. ‘ಭಾರತೀಯರಾದ ನಾವು’ ಎಂದು ಭಾರತದ ಸಂವಿಧಾನದ ಆರಂಭದಲ್ಲಿ ಪ್ರಸ್ತಾಪಿಸುವ ಮಹತ್ವಾಕಾಂಕ್ಷೆ ಮಿಜೋರಂ ಜನರಿಗೆ ಅನ್ವಯವಾಗಲಿಲ್ಲ. ಈ ಹಂತದಲ್ಲಿ ಈ ಕೃತಿ ಮಿಜೋಗಳ ಸ್ವಾತಂತ್ರ್ಯದ ಕನಸು ಹಾಗೂ ಸ್ವತಂತ್ರ ಮಿಜೋರಂ ಸ್ಥಾಪನೆ ಗುರಿಯ ಪ್ರಾಮುಖ್ಯತೆಯ ಎಚ್ಚರಿಕೆಯ ಗಂಟೆ.

ವಸಾಹತುಶಾಹಿ ಭಾರತದಿಂದ ಸ್ವಾತಂತ್ರ್ಯೋತ್ತರ ಮಿಜೋ ರಾಷ್ಟ್ರೀಯ ಒಕ್ಕೂಟದ ಚಿಂತಕ ಲಾಲ್‌ಡೆಂಗಾ ಭಾರತ ಸಾಮ್ರಾಜ್ಯದ ವಿರುದ್ಧ ನಡೆಸಿದ ಸಶಸ್ತ್ರ ಹೋರಾಟದಿಂದಾಗಿ ಜನರು ಎದುರಿಸಿದ ಹಸಿವೆ, ಅವಮಾನ ಹಾಗೂ ಸಾಂಸ್ಕೃತಿಕ ದೌರ್ಜನ್ಯದ ಮೂಲಕ ಶರಣಾಗುವ ಸ್ಥಿತಿಯನ್ನು ಸೃಷ್ಟಿಸಿದ ಬೆಳವಣಿಗೆಯೂ ಜೊರಾಮಿ ಕೃತಿಯಲ್ಲಿ ಪ್ರಸ್ತಾಪವಾಗಿದೆ. ವಸಾಹತು ಆಡಳಿತಗಾರರು ಹಾಗೂ ಸ್ವತಂತ್ರ ಭಾರತದ ಆಡಳಿತಗಾರರ ಕಾಲದಲ್ಲಿಯೂ ತಮ್ಮ ತಾಯ್ನಾಡಿಗಾಗಿ ಹೋರಾಡಿದ ಘಟನಾವಳಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆದರೂ ಮಿಜೋಗಳ ಸಾಂಸ್ಕೃತಿಕ ಚಹರೆಯೇ ಮರೆಯಾಯಿತೆಂಬುದನ್ನು ಅನಾವರಣಗೊಳಿಸಿದೆ. ಮಿಜೋಗಳ ಬಿಕ್ಕಟ್ಟಿನ ಅಸ್ತಿತ್ವವನ್ನು ಈ ಕೃತಿಯಲ್ಲಿ ಕಟ್ಟಿಕೊಡುವಾಗ ರಾಜಕೀಯ ನಿರ್ಬಂಧಗಳನ್ನು ಮೀರಿದ ಸ್ವತಂತ್ರವಾದ ಆಲೋಚನಾಕ್ರಮವಿದೆ. ಭಾಷೆ ಹಾಗೂ ಪ್ರಾದೇಶಿಕ ವ್ಯಾಮೋಹವನ್ನು ನಿವಾರಿಸಿಕೊಂಡು ಸೃಜನಶೀಲ ಸ್ವಾಯತ್ತವಾದ ಈ ಕೃತಿ ವಸ್ತುನಿಷ್ಠವಾದ ಹಾಗೂ ಮುಕ್ತವಾದ ರಾಜಕೀಯ ನಿಲುವನ್ನು ಒಳಗೊಂಡಿದೆ. ಮಿಜೋ ಜನರ ಅಸ್ತಿತ್ವದ ತಲ್ಲಣಗಳ ದ್ಯೋತಕ. ಇದೊಂದು ರೀತಿಯಲ್ಲಿ ಉರಿಯುತ್ತಿರುವ ದೀಪ. ದೆಹಲಿ ಆಡಳಿತಗಾರರ ಏಕಮುಖ ದೃಷ್ಟಿ ಹಾಗೂ ದೌರ್ಜನ್ಯದ ನಡೆಯ ಮೂಲಕ ಮಿಜೋ ಸಾಮಾಜಿಕ ಪರಿಸ್ಥಿತಿ ಬಹುತೇಕ ನಿರ್ನಾಮದ ಹಂತ ತಲುಪಿದ್ದನ್ನು ಈ ಬೆಳವಣಿಗೆಗಳು ತೋರಿಸಿವೆ. ೧೯೬೦ರ ಕಾಂಗ್ರೆಸ್ ಪಕ್ಷದ ಆಡಳಿತದಿಂದ ೧೯೭೦ರ ಜನತಾ ಸರ್ಕಾರದಲ್ಲಿ ಮೊರಾರ್ಜಿ ದೇಸಾಯಿ ಆಡಳಿತ ಅಧಿಕಾರಕ್ಕೆ ಬಂದ ನಂತರ ಮಿಜೋರಂ ಜನರ ಬದುಕಿನಲ್ಲಿ ಯಾವುದೇ ರೀತಿಯ ಸುಧಾರಣೆಯೂ ಆಗಲಿಲ್ಲ. ಭಾರತೀಯ ವಾಯುಸೇನೆ ಹಾಗೂ ಸೈನಿಕ ಪಡೆಯ ಬಾಂಬ್ ದಾಳಿ ಹಾಗೂ ಇನ್ನಿತರ ದೌರ್ಜನ್ಯಗಳ ಜೊತೆ ಅಮಾಯಕ ಮಹಿಳೆಯರ ಅತ್ಯಾಚಾರ ಹಾಗೂ ಪುರುಷರನ್ನು ಶಂಕೆಯ ಕಾರಣ ಚಿತ್ರಹಿಂಸೆಗೆ ಗುರಿಪಡಿಸಿ ಭಯೋತ್ಪಾದನಾ ವಾತಾವರಣ ಸೃಷ್ಟಿಸಿದ ಮನಕರಗುವ ಚಿತ್ರಣ ಇಲ್ಲಿದೆ.
ಈ ಕೃತಿಯು ಮಿಜೋರಂ ಬಂಡಾಯವನ್ನು ತೆರೆದಿಡುತ್ತಲೇ ಬಂಡಾಯವನ್ನು ಗುರುತಿಸಿ ಹಿಂಸೆ ಹಾಗೂ ರಕ್ತಪಾತವನ್ನು ವೈಭವೀಕರಿಸದೆ ಮಿಜೋ ನ್ಯಾಷನಲ್ ಫ್ರಂಟ್ ಚಟುವಟಿಕೆಗಳ ದಾಖಲೆ ಮಾಡಿರುವುದು ನಿಜಕ್ಕೂ ಮಾರ್ಮಿಕ. ಅತ್ಯಂತ ಸಂಯಮದ ನಿರ್ವಿಕಾರ ಶೈಲಿಯಲ್ಲಿ ಕ್ರೌರ್ಯ, ಎಣೆಯಿಲ್ಲದ ಹಿಂಸಾಚಾರ, ರಕ್ತಪಾತಗಳ ಘಟನಾವಳಿಗಳು ಈ ಕೃತಿಯಲ್ಲಿ ಚಿತ್ರಣಗೊಂಡಿವೆ. ರಾಷ್ಟ್ರೀಯತೆ ಹಾಗೂ ರಾಷ್ಟ್ರದ ಸ್ವರೂಪಕ್ಕೆ ಸಂಬಂಧಿಸಿದಂತೆ ರವೀಂದ್ರನಾಥ ಟ್ಯಾಗೂರ್ ಹಾಗೂ ಮಹಾತ್ಮಗಾಂಧಿ ಅವರ ದೃಷ್ಟಿಕೋನದ ಬೆಳಕಿನ ನಡುವೆ ರಾಷ್ಟ್ರೀಯತೆ ಹೆಸರಿನಲ್ಲಿ ದೇಶವು ಅಮಾನುಷವಾಗಿ ವರ್ತಿಸಿರುವುದರ ವಿರೋಧದ ದನಿ ಕೃತಿಯಲ್ಲಿ ಪರಿಣಾಮಕಾರಿ.
ಮನುಷ್ಯ ವಿರೋಧಿಯಾಗಿರುವ ಹಿಂಸಾತ್ಮಕ ನಾಗರಿಕತೆಯು ಹಂತಹಂತವಾಗಿ ದುರ್ಬಲಗೊಳ್ಳುವ ಬೈಬಲ್‌ನ ‘ದ ಗುಡ್ ಸಾಮರಿಟಾನ್’ ಕೃತಿಯನ್ನು ನೆನಪಿಗೆ ತರುತ್ತದೆ. ಭಾರತೀಯ ಸೈನ್ಯದ ಹವಾಲ್ದಾರ್ ತನ್ನ ಮೇಲಧಿಕಾರಿ ಸುಬೇದಾರನ ಕ್ರೂರ ಆಜ್ಞೆಯನ್ನು ನಿರಾಕರಿಸುವಾಗ ರಿಂಜುವಾಲನಿಗೆ ಇದು ಅನುಭವಕ್ಕೆ ಬರುತ್ತದೆ. ಹಿಂಸೆ ಹಾಗೂ ಕ್ರೌರ‍್ಯದ ಗೋಡೆಗಳು ಸಂಪೂರ್ಣವಾಗಿ ನಿರ್ನಾಮವಾಗುವ ವಿಹಂಗಮ ದೃಶ್ಯಾವಳಿಯ ಪರಿಣಾಮ ಹವಾಲ್ದಾರ, ಸರ್ದಾಜಿ, ಹಾಗೂ ಮಿಜೋ ಕೈದಿಗಳನ್ನು ಭಾರತೀಯ ಸೇನೆ ಅಸಹನೀಯವಾಗಿ ನಡೆಸಿಕೊಂಡಾಗ ಅವರು ಪರಸ್ಪರರ ಮುಖಗಳನ್ನು ದಿಟ್ಟಿಸಿ ನೋಡುವ ಸಂದರ್ಭದಲ್ಲಿ ಎದ್ದು ಕಾಣುತ್ತದೆ. ರಿಂಜೂವಾಲ ಮೂಲಕ ನಮಗೆ ಪ್ರೀತಿ ಅಂತಃಕರಣದ ಮಿಂಚಿನ ಅನುಭವ ತಟ್ಟುತ್ತದೆ.
ಜೊರಾಮಿ ಕೃತಿಯ ಮೂಲಕ ಅತಿಭೌತಿಕ ದೃಷ್ಟಿಯ ದರ್ಶನ ಒದಗಿಸಿರುವ ಭೂಮಿಕಾ ಆರ್. ಅವರಿಗೆ ಕನ್ನಡ ಸಾಂಸ್ಕೃತಿಕ ಲೋಕ ಋಣಿಯಾಗಿರಬೇಕು. ಈ ನಾಡಿನ ಭವಿಷ್ಯ ಹಾಗೂ ಮಾನವೀಯ ನಾಗರಿಕತೆಯ ಸಲುವಾಗಿ ಇಂತಹ ಮನೋಧರ್ಮವನ್ನು ರೂಡಿಸಿಕೊಳ್ಳುವುದು ವರ್ತಮಾನದ ಅಗತ್ಯ. ಈಶಾನ್ಯ ಭಾರತ ಹಾಗೂ ಬಹುಮುಖ್ಯವಾಗಿ ಮಣಿಪುರದಲ್ಲಿ ಜರುಗಿರುವ ರುದ್ರ ಭಯಾನಕ ಅನುಭವಗಳ ಸರಮಾಲೆ ಹಾಗೂ ಜಗತ್ತಿನಾದ್ಯಂತ ಮಾನವೀಯ ಸಮುದಾಯಗಳು ಅಂತಹ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ ಕರುಳು ಕಿತ್ತುಬರುವಂತಹ ಅನುಭವ ಆಗುವುದು ಸಹಜ. ಇಂತಹ ಸಂದರ್ಭದಲ್ಲಿ ಔದಾರ್ಯದ ದೃಷ್ಟಿಕೋನ ಎಲ್ಲೆಡೆ ಮೂಡುವುದೆಂಬುದು ನಮ್ಮೆಲ್ಲರ ಸದಾಶಯ.

ಕ್ರೌರ್ಯ ಹಾಗೂ ದುರಾಕ್ರಮಣಗಳು ಎಲ್ಲಿಯೇ ಜರುಗಿದರೂ ಅಂತಹ ಹೀನ ಕೃತ್ಯಗಳನ್ನು ನೈತಿಕವಾಗಿ ಹಿಮ್ಮೆಟ್ಟಿಸುವ ಅಗತ್ಯ ಬಹಳವಾಗಿದೆ. ನೆಮ್ಮದಿ, ಭದ್ರತೆ ಹಾಗೂ ಜೋಭದ್ರತನಗಳ ಸೌಧದಲ್ಲಿ ಓಲಾಡುತ್ತಿರುವವರ ಆತ್ಮಸಾಕ್ಷಿಯನ್ನು ಮೀಟುವ ಮೂಲಕ ಇಂತಹ ಕ್ರೌರ್ಯವನ್ನು ಹಿಮ್ಮೆಟ್ಟಿಸುವುದು ಈಗಿನ ಅಗತ್ಯ. ನ್ಯಾಯ ಹಾಗೂ ಸಮಾನತೆಯ ಸಂವೇದನೆ ಇರುವ ಯಾರೊಬ್ಬರೂ ಇಂತಹ ಪ್ರಮುಖ ಬೆಳವಣಿಗೆಗಳಿಂದ ನುಣುಚಿಕೊಳ್ಳುವಂತಿಲ್ಲ.
ಕಗ್ಗೊಲೆಯ ಕಾಲಘಟ್ಟದಲ್ಲಿ ಜೊರಾಮಿಯಂತಹ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಭೂಮಿಕಾ ಅವರ ನೈತಿಕ ಸ್ಥೈರ್ಯವನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು. ಮೂಲ ಇಂಗ್ಲಿಷ್ ಕೃತಿಯ ಗುಣಮಟ್ಟಕ್ಕೆ ಪೂರಕವಾಗುವ ರೀತಿಯಲ್ಲಿ ಕನ್ನಡದ ಅನುವಾದದಲ್ಲಿ ಸಂಯಮ, ಸಮತೋಲನ ಹಾಗೂ ಗಾಂಭೀರ್ಯದ ಗುಣಗಳು ಓದುಗರ ಅನುಭವ ಮನೋಜ್ಞವಾಗುವಂತೆ ಮಾಡಿದೆ. ಹಾಗೆ ನೋಡಿದರೆ, ಕನ್ನಡ ಅನುವಾದದ ಕೃತಿ ಮಾಲ್ ಸಾವ್ನಿ ಜೇಕಬ್ ಅವರ ನೈತಿಕ ದೃಷ್ಟಿಕೋನಕ್ಕೆ ಗೌರವಾರ್ಪಣೆಯಂತಿದೆ. ಹಾಗೆಯೇ, ಇದು ಭೂಮಿಕಾ ಆರ್. ಅವರ ನೈತಿಕತೆಯ ನೆಲೆಯೂ ಕೂಡಾ.
ಮುನ್ನುಡಿ : ಪ್ರೊ. ಎನ್. ಮನು ಚಕ್ರವರ್ತಿ