ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸೋಮವಾರ ಸ್ವೀಕರಿಸಿದರು.
ಈ ಹಿಂದಿನ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರ ವರ್ಗಾವಣೆಯಿಂದ ಖಾಲಿಯಾದ ಸ್ಥಳಕ್ಕೆ ಜೂನ್ ತಿಂಗಳಲ್ಲಿ ಪ್ರಕಾಶ ಉಳಾಗಡ್ಡಿ ಅವರು ವರ್ಗಾವಣೆಯಾಗಿ ಬಂದು ಅಧಿಕಾರ ಸ್ವೀಕರಿಸಿದರು. ಆದರೆ, ಒಂದು ತಿಂಗಳಲ್ಲೇ ಎಡಿಸಿ ಪ್ರಕಾಶ ಉಳ್ಳಾಗಡ್ಡಿ ಅವರು ಬೇರೆಡೆ ವರ್ಗಾವಣೆಯಾದರು.
ಎಡಿಸಿ ಪ್ರಕಾಶ ಉಳ್ಳಾಗಡ್ಡಿ ಅವರ ವರ್ಗಾವಣೆಯಿಂದ ಖಾಲಿಯಾದ ಜಾಗಕ್ಕೆ ಬೀದರ್ ವಿಶ್ವವಿದ್ಯಾಲಯ ಕುಲಸಚಿವರಾಗಿರುವ ಸುರೇಖಾ ಅವರು ಪ್ರಭಾರಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಶಿವಾನಂದ ಬಿ.ಕರಾಳೆ ಅವರನ್ನು ಜುಲೈ 29ರಂದು ಬೀದರ್ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಇಂದು (ಆ.4) ಪ್ರಭಾರಿ ಅಪರ ಜಿಲ್ಲಾಧಿಕಾರಿ ಸುರೇಖಾ ಅವರು ನೂತನ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಇದನ್ನೂ ಓದಿ : ಬೀದರ್ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ಸ್ವಾಗತ ಸಮಿತಿ ಅಧ್ಯಕ್ಷರಾಗಿ ಬಸವರಾಜ ಧನ್ನೂರ ನೇಮಕ
ಶಿವಾನಂದ ಬಿ.ಕರಾಳೆ ಅವರು 2010ನೇ ಸಾಲಿನ ಕೆಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಕಾರವಾರ ಜಿಲ್ಲೆಯ ಸಹಾಯಕ ಆಯುಕ್ತರಾಗಿ ಹಾಗೂ ಗದಗ, ಧಾರವಾಡ, ತುಮಕೂರ ಜಿಲ್ಲೆಗಳಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.