ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಯ ಹಾದಿ ತಪ್ಪಿಸುವ ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ, ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ದಿನೇಶ್ ಅವರು ಎಸ್ಐಟಿ ಗೆ ಇಂದು (ಆ. 4) ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ
ಅನಾಮಿಕ ವ್ಯಕ್ತಿಯೊಬ್ಬನ ದೂರಿನಂತೆ ಮಾನ್ಯ ನ್ಯಾಯಾಲಯದ ಆದೇಶದಂತೆ ಧರ್ಮಸ್ಥಳ ಠಾಣೆಯಲ್ಲಿ ಕ್ರಮ ಸಂಖ್ಯೆ 39/2025ರಂತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ಮಧ್ಯೆ ವ್ಯಕ್ತಿಯೊಬ್ಬ ತೋರಿಸಿದ ಜಾಗದಲ್ಲಿ ಹೆಣಗಳನ್ನು ಉತ್ಖನನ ಮಾಡುವ ಮಾಹಿತಿ ಇದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವಗೌಡ ಮತ್ತು ಈಗಿನ ಉಪಾಧ್ಯಕ್ಷ ಪಿ ಶ್ರೀನಿವಾಸ ಮತ್ತು ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರಾದ ಡಾ ಮಹಾಬಲ ಶೆಟ್ಟಿ ಅವರು ಈಗ ಅನಾಮಿಕ ತೋರಿಸಿದ ಜಾಗದಲ್ಲಿ ನಾವು ಈ ಹಿಂದೆ ಹಲವಾರು ಅಸ್ವಾಭಾವಿಕ ಶವಗಳನ್ನು ಹೂತಿದ್ದೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೇ ಈಗ ಅನಾಮಿಕ ವ್ಯಕ್ತಿ ತೋರಿಸುತ್ತಿದ್ದಾನೆ ಅದೇ ಸ್ಥಳದಲ್ಲಿ ನಾವೂ ಕೂಡ ಶವಗಳನ್ನು ಹೂತಿದ್ದೇವೆ ಎಂದು ಹೇಳುತ್ತಿದ್ದಾರೆ. ಇದು ಇಡೀ ಪ್ರಕರಣ ತನಿಖೆಗೆ ತೊಂದರೆಯಾಗುತ್ತಿರುವುದು ಕಂಡು ಬರುತ್ತಿದೆ. ಅವರ ಬಳಿ ಯಾವುದೇ ದಾಖಲಾತಿ ಇದ್ದರೆ ಅದನ್ನು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರುಪಡಿಸಲು ತಿಳಿಸಬೇಕು. ಅಲ್ಲದೆ ಇವರೆಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅವರು ಇನ್ನೂ ಬೇರೆ ಕಡೆ ಶವಗಳನ್ನು ಹೂತಿದ್ದರೆ ಮೊದಲು ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಗೌಡ, ಉಪಾಧ್ಯಕ್ಷ ಪಿ ಶ್ರೀನಿವಾಸ ಹಾಗೂ ಡಾ ಮಹಾಬಲ ಶೆಟ್ಟಿಯವರು ಹೇಳುವ ಸ್ಥಳವನ್ನು ತೋರಿಸಿ ಆ ಸ್ಥಳವನ್ನು ಉತ್ಖನನ ಮಾಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಇಲ್ಲವಾದಲ್ಲಿ ಭೀಮ ಮೊದಲು ತೋರಿಸಿದಲ್ಲಿ, ನಾವೂ ಕೂಡ ಶವ ಹೂತಿದ್ದೇವೆ ಎಂದು ಹೇಳಿ ತನಿಖೆಯ ದಿಕ್ಕನ್ನು ತಪ್ಪಿಸುವ ಸಾಧ್ಯತೆ ಇದೆ. ಆದುದರಿಂದ ತಾವು ಈ ಕೂಡಲೇ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಿಕೆ.
ಈ ಪ್ರಕರಣ ಇಡೀ ದೇಶವೇ ಬೆಚ್ಚಿಬೀಳುವಂತಹ ಪ್ರಕರಣವಾಗಿದ್ದು ದೇಶದ ಜನತೆ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ನೀವು ನ್ಯಾಯ ಕೊಡಿಸುತ್ತೀರಿ ಎಂಬ ನಂಬಿಕೆ ಭರವಸೆ ದೇಶದ ಜನತೆಗೆ ಇದೆ.

