ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಕೋಮುವಾದಿ, ಜಾತಿವಾದಿಗಳನ್ನು ಹಿಮ್ಮೆಟ್ಟಬೇಕು. ತಳಮಟ್ಟದ ಸಮುದಾಯದ ವರ್ಗದವರ ಹಿತಕ್ಕಾಗಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ರೈತರು, ಕೃಷಿ ಕಾರ್ಮಿಕರು ದನಿ ಎತ್ತಬೇಕು. ಆಗ ಮಾತ್ರ ಶೋಷಿತ ಸಮುದಾಯ ಆರ್ಥಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಸಮಾಜದ ಮುನ್ನೆಲೆಗೆ ಬರಲು ಸಾಧ್ಯ ಎಂದು ಭೀಮ್ ಆರ್ಮಿ ಭಾರತ್ ಏಕ್ತಾ ಮಿಷನ್‌ನ ಯಾದಗಿರಿ ಉಸ್ತುವಾರಿ ಶರಣರೆಡ್ಡಿ ಹತ್ತಿಗೂಡುರ್ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದ ಸಂಘಟನೆಯ ತಾಲೂಕು ಸಮಿತಿ ರಚನೆ ಸಭೆಯಲ್ಲಿ ಅವರು ಮಾತನಾಡಿದರು. “ಜಿಲ್ಲಾದ್ಯಂತ ಭೀಮ ಆರ್ಮಿಸಂಘಟನೆ ಬಲಪಡಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಸಮಾಜದ ಏಳಿಗೆಗಾಗಿ ಅಸ್ಪೃಶ್ಯತೆ, ಮೂಢನಂಬಿಕೆ, ಸಾಮಾಜಿಕ ಬಹಿಷ್ಕಾರ ವಿರುದ್ಧ ಹೋರಾಟ ಮಾಡಬೇಕು” ಎಂದರು.
“ಯುವಜನರು ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ಧಾಂತವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ನಾವು ಬಲಿಷ್ಠವಾಗಲು ಸಾಧ್ಯ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ದಲಿತರು ಮೇಲೆ ದಬ್ಬಳಿಕೆ, ದೌರ್ಜನ್ಯ, ಸಾಮಾಜಿಕ ಬಹಿಷ್ಕಾರಗಳು ನಡೆಯುತ್ತಲೇ ಇವೆ. ಅವುಗಳನ್ನು ತಡೆಗಟ್ಟುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ನಾವು ಒಗ್ಗಟ್ಟಾಗಿ ಹೋರಾಟ ಮಾಡಿ ಸರ್ಕಾರದ ಸೌಲಭ್ಯಗಳು ರಾಜಕೀಯ ಅಧಿಕಾರ ಪಡೆಯಬೇಕಾಗಿದೆ” ಎಂದು ಹೇಳಿದರು.
ಸಭೆಯಲ್ಲಿ ಸಂಘಟನೆಯ ಶಹಾಪುರ ತಾಲೂಕು ಅಧ್ಯಕ್ಷರಾಗಿ ಭೀಮರಾಯ ಜನ್ನ ಮದ್ರಿಕಿ, ತಾಲೂಕು ಉಸ್ತುವಾರಿಯಾಗಿ ಬಸಲಿಂಗ ಶಿರವಾಳ, ಉಪಾಧ್ಯಕ್ಷರಾಗಿ ಸುನಿಲ ರಾಥೋಡ, ಸಮಿತಿ ಸದಸ್ಯರಾಗಿ ಅಂಬರೀಷ್ ದೋರನಹಳ್ಳಿ, ಸುಭಾಷ್ ರಸ್ತಾಪುರ್, ಮಡಿವಾಳಪ್ಪ ಅಣಬಿ, ಸಿದ್ಧಾರ್ಥ ಹುಲ್ಕಲ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ರಾಜು ಅಣಬಿ, ಪ್ರಭು ಬುಕ್ಕಲ್, ಶರಣ ರೆಡ್ಡಿ ಹತ್ತಿಗೂಡುರ್, ಮಾನಪ್ಪ ರಸ್ತಪುರ್, ಬಸ್ಸು ನಟೇಕರ್, ಪರಶುರಾಮ್ ಚಲವಾದಿ, ಶಿವಕುಮಾರ್ ಬೀರ್ನೂರ್, ಅಂಬರೀಷ್ ಅಣಬಿ, ಮಾರುತಿ ದೋರಳ್ಳಿ, ಮಲ್ಲಿಕಾರ್ಜುನ್ ದೇವನಹಳ್ಳಿ, ಮಲ್ಲಿನಾಥ್ ಬಡಿಗೇರ, ದವಲ ಸಾಬ್ ದೋರನಹಳ್ಳಿ, ಹನುಮಂತ ಹಾಲಬಾವಿ, ಶಿವಮಾನಪ್ಪ ಹಾಲಬಾವಿ, ಶಮ್ಮು ರಸಾಪುರ್, ಮಮ್ಮದ್ ರಸ್ತಾಪುರ್, ಅಕ್ಬರ್ ರಸ್ತಾಪುರ್, ಮರಲಿಂಗಪ್ಪ ಘಂಟಿ ಸೇರಿದಂತೆ ಹಲವರು ಇದ್ದರು.