ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಸಮೀಪವಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ ಅನಧಿಕೃತವಾಗಿ ದರ್ಗಾಗಳು ನಿರ್ಮಾಣ ಮಾಡಲಾಗಿದೆ ಎಂದು ಕನ್ನಡದ ಕೆಲವು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬಿತ್ತರಿಸಿದ ಸುದ್ದಿ ಇದೀಗ ಸುಳ್ಳು ಸುದ್ದಿ ಎಂಬುದಕ್ಕೆ ಸ್ಥಳೀಯರು ಸ್ಪಷ್ಟನೆ ನೀಡಿದ್ದಾರೆ.
ಇದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ವಿದ್ಯಾರ್ಥಿನಿಯೊಬ್ಬಳು ಜು.30ರಂದು ರಾತ್ರಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ಹಿನ್ನೆಲೆ ಕೇಂದ್ರೀಯ ವಿವಿ ಆಡಳಿತ ವ್ಯವಸ್ಥೆ ವಿರುದ್ಧ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ವಿವಿ ಆವರಣದಲ್ಲಿ ರಾತ್ರೋ ರಾತ್ರಿ ಹೊಸ ದರ್ಗಾಗಳನ್ನು ಕಟ್ಟಲಾಗಿದೆ ಎಂದು ರಿಪಬ್ಲಿಕ್ ಕನ್ನಡ, ಟಿವಿ9, ಪಬ್ಲಿಕ್ ಟಿವಿ ಹಾಗೂ ಬಿಟಿವಿ ಸೇರಿ ಕೆಲವು ಮಾಧ್ಯಮಗಳು ಸುದ್ದಿ ಹರಡಿಸಿ ಗೊಂದಲ ಸೃಷ್ಟಿಸಿದ್ದವು.

ಈ ಬಗ್ಗೆ ಈದಿನ.ಕಾಮ್ ಸ್ಥಳೀಯರಿಗೆ, ವಿವಿ ಮುಖ್ಯಸ್ಥರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ವಿಚಾರಿಸಿದಾಗ ಇದೊಂದು ಸುಳ್ಳು ಸುದ್ದಿಯಾಗಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಆ ರೀತಿ ಹೊಸ ದರ್ಗಾ ಕಟ್ಟಿರುವುದು ಕಂಡು ಬಂದಿಲ್ಲ. ಅಲ್ಲಿರುವ ದರ್ಗಾಗಳು ನೂರಾರು ವರ್ಷಗಳ ಹಳೆಯದು, ಅಷ್ಟೇ ಅಲ್ಲದೇ ಅಲ್ಲಿ ಎರಡು ದೇವಸ್ಥಾನಗಳೂ ಇವೆ ಎಂಬುದು ಬೆಳಕಿಗೆ ಬಂದಿದೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮ, ಪ್ರಾಮಾಣಿಕ ಕಾಳಜಿಯ ಫಲವಾಗಿ 2009ರಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿತ್ತು. ಕಲ್ಯಾಣ ಕರ್ನಾಟಕ ಭಾಗವನ್ನು ಶೈಕ್ಷಣಿಕವಾಗಿ ಸಬಲೀಕರಿಸುವ ಸದುದ್ದೇಶದಿಂದ, ‘ನಂಜುಂಡಪ್ಪ ವರದಿ’ಯನ್ನು ಆಧರಿಸಿ, ಈ ಭಾಗದ ಎಲ್ಲಾ ಸಮುದಾಯದ ಹೆಣ್ಣು ಮಕ್ಕಳನ್ನೂ ಒಳಗೊಂಡಂತೆ ಬಡವರು, ರೈತರು, ಕೂಲಿಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಸುಲಭವಾಗಿ ದೊರೆಯುವಂತಾಗಬೇಕೆಂಬ ಸದಾಶಯದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ. ದುರಂತದ ಸಂಗತಿ ಎಂದರೆ, ಇತ್ತೀಚೆಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಕೋಮು ಸಂಘಟನೆಗಳು ಒಳಹೊಕ್ಕಿ ಎಗ್ಗಿಲದೇ ತಮ್ಮ ಚಟುವಟಿಕೆಗಳು ನಡೆಸುತ್ತಿದ್ದು, ವಿಶ್ವವಿದ್ಯಾಲಯದ ಸದುದ್ದೇಶವನ್ನೇ ಮಣ್ಣುಪಾಲು ಮಾಡುವ ದುಸ್ಥಿತಿಗೆ ತಲುಪಿದೆ.

ಕೇಂದ್ರೀಯ ವಿವಿ ಕುಲಸಚಿವ ಆರ್.ಆರ್.ಬಿರಾದಾರ ʼಈದಿನ.ಕಾಮ್ʼ ಜೊತೆ ಮಾತನಾಡಿ, ʼ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ ಇರುವ ದರ್ಗಾಗಳು ವಿಶ್ವವಿದ್ಯಾಲಯ ಸ್ಥಾಪನೆಗೂ ಮುಂಚೆಯಿಂದ ಇವೆ. ಈ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರು ಭೂಮಿ ಕೊಟ್ಟಿದ್ದರು. ಅವರ ಜಮೀನಿನಲ್ಲಿ ನೂರಾರು ವರ್ಷಗಳಿಂದ ಇರುವ ದರ್ಗಾಗಳು ಈಗಲೂ ಹಾಗೇ ಇವೆ. ಅಲ್ಲದೇ ಅಲ್ಲಿ ಲಕ್ಷ್ಮೀ ದೇವಸ್ಥಾನ, ಬೀರಲಿಂಗೇಶ್ವರ ದೇವಸ್ಥಾನಗಳು ಇವೆ. ಆವರಣದಲ್ಲಿ ಹೊಸದಾಗಿ ಯಾವುದೇ ಗೋರಿಗಳು ನಿರ್ಮಾಣವಾಗಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಿದ್ದು ಅಕ್ಷರಶಃ ಸುಳ್ಳುʼ ಎಂದು ಸ್ಪಷ್ಟನೆ ನೀಡಿದ್ದಾರೆ.
ಸ್ಥಳೀಯರಾದ ಮೈಬೂಬ್ ಸಾಬ್ ಅವರು ಮಾತನಾಡಿ, ʼನಮ್ಮ ತಂದೆ ಪತ್ರುಸಾಬ್ ತೆಕ್ಕಡಿ ಅವರ ಹೆಸರಿನಲ್ಲಿರುವ ಐದು ಎಕರೆ ಜಮೀನಿನಲ್ಲಿ ಖಾಜಾ ಬಂದೇ ನವಾಝ್ ದರ್ಗಾ, ಗೈಬ್ ಪೀರ್ ಸೇರಿದಂತೆ ಎರಡು ಸಣ್ಣ ಸೂಫಿ ದರ್ಗಾಗಳು ಇವೆ. ಕೇಂದ್ರೀಯ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ನಾವೇ ಭೂಮಿ ಕೊಟ್ಟಿದ್ದೇವೆ. ಹಾಗಾಗಿ ಆ ಗೋರಿಗಳು ಹಾಗೇ ಉಳಿದಿವೆ. ಈಗಲೂ ವಿಶೇಷ ದಿನದಂದು ದರ್ಗಾಕ್ಕೆ ತೆರಳಿ ನಮಾಝ್ ಮಾಡುತ್ತೇವೆ. ಇಂದು ಕೇಂದ್ರೀಯ ವಿವಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಡಿಜಿಟಲ್ ಗ್ರಂಥಾಲಯದಲ್ಲಿ ಓದಿ ವಿದೇಶದಲ್ಲಿ ನೌಕರಿ : ಹಳ್ಳಿ ಹುಡುಗನ ಸಾಧನೆಗೆ ಎಲ್ಲರೂ ದಿಲ್ ಖುಷ್!
ಆಳಂದ ಡಿವೈಎಸ್‌ಪಿ ತಿಮ್ಮರಾಯ ಪಾಟೀಲ್ ಮಾತನಾಡಿ, ʼಕೇಂದ್ರೀಯ ವಿಶ್ವವಿದ್ಯಾಲಯ ವಿಸಿ ಅವರೊಂದಿಗೆ ಪೊಲೀಸ್ ತಂಡ ವಿವಿಯ ಆವರಣದಲ್ಲಿ ಪರಿಶೀಲನೆ ಮಾಡಿದೆ. ಯಾವುದೇ ಹೊಸದಾಗಿ ನಿರ್ಮಾಣವಾದ ದರ್ಗಾ ಕಾಂಪೌಂಡ್ ಕಂಡು ಬಂದಿಲ್ಲ. ವಿಶ್ವವಿದ್ಯಾಲಯ ನಿರ್ಮಾಣ ಆಗಿರುವ ಜಾಗ ಈ ಹಿಂದೆ ಮುಸ್ಲಿಂ ಸಮುದಾಯಕ್ಕೆ ಸೇರಿತ್ತು. ಹೀಗಾಗಿ ಆಗಿನ ಗೋರಿಗಳು ಹಾಗೇ ಉಳಿದಿವೆ. ಹೊಸ ದರ್ಗಾ, ಗೋರಿ ನಿರ್ಮಾಣ ಮಾಡಲಾಗಿದೆ ಎಂಬುದು ಸುಳ್ಳು ವದಂತಿ. ಇದಕ್ಕೆ ಯಾರೂ ಕಿವಿಗೊಡಬಾರದುʼ ಎಂದು ಸ್ಪಷ್ಟನೆ ನೀಡಿದ್ದಾರೆ.