ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸುತ್ತಿದೆ. ತರಬೇತಿ ಪಡೆದವರು ಶಿಶು ಪಾಲನೆ ಕೇಂದ್ರದಲ್ಲಿ ಎಲ್ಲರ ಮಕ್ಕಳನ್ನು ಲಾಲನೆ ಪಾಲನೆ ಮಾಡಬೇಕು ಎಂದು ರಾಯಚೂರು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಹೇಳಿದರು.
ರಾಯಚೂರಿನಲ್ಲಿ ಜಿಲ್ಲಾ ಪಂಚಾಯತಿ ಆಯೋಜಿಸಿದ್ದ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಆರೈಕೆದಾರರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. “ಶಿಶು ಪಾಲನಾ ಕೇಂದ್ರದಲ್ಲಿ ಮಕ್ಕಳ ಆರೈಕೆದಾರರು ತಮ್ಮ ಮಕ್ಕಳಂತೆ ಇತರರ ಮಕ್ಕಳನ್ನು ಆರೈಕೆ ಮಾಡಬೇಕು. ಮನೆಯ ಮೊದಲು ಗುರು ತಾಯಿಯಾದರೆ, ಎರಡನೇ ಗುರು ಅಂಗನವಾಡಿ ಸಹಾಯಕರಾಗಿದ್ದರು. ಇದೀಗ ಎರಡನೇ ಗುರು ಶಿಶು ಪಾಲನಾ ಕೇಂದ್ರದ ಆರೈಕೆದಾರರಾಗಲಿದ್ದಾರೆ” ಎಂದರು.
“ಆರೈಕೆದಾರರು ತರಬೇತಿ ಪಡೆದು ಮಕ್ಕಳ ಲಾಲನೆ ಪಾಲನೆ ಮಾಡಬೇಕು. ಅರ್ಧದಲ್ಲೆ ಬಿಟ್ಟು ಹೋಗಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ತರಬೇತಿಯಲ್ಲಿ ನೀಡುವ ಮಾಹಿತಿಯನ್ನು ಪಡೆದುಕೊಂಡು ಮಕ್ಕಳ ಪಾಲನೆಗೆ ಮುಂದಾಗಬೇಕು. ಮಕ್ಕಳಿಗೆ ಹಾಡು, ಆಟ, ಕತೆಗಳನ್ನು ಹೇಳುತ್ತಾ ಪಾಲನೆ ಮಾಡಬೇಕು. ಮಕ್ಕಳನ್ನು ನೋಡಿಕೊಳ್ಳುವುದು ಪುಣ್ಯದ ಕೆಲಸವಾಗಿದೆ. ಇದಕ್ಕೆ ಸರ್ಕಾರದಿಂದ ವೇತನ ನೀಡಲಾಗುತ್ತದೆ” ಎಂದು ತಿಳಿಸಿದರು.
“ಮನರೇಗಾದಲ್ಲಿ ಕೆಲಸ ಮಾಡುವ ಕೂಲಿಕಾರರ ಮಕ್ಕಳು ಮತ್ತು ಗ್ರಾಮಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರ ಮಕ್ಕಳನ್ನು ಪಾಲನೆ ಮಾಡಬೇಕಾಗಿದೆ. ಉತ್ತಮ ಕೆಲಸ ಮಾಡಿದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತದೆ” ಎಂದು ತಿಳಿಸಿದರು.
“ರಾಯಚೂರು, ಮಾನವಿ, ಸಿರವಾರ, ಮತ್ತು ದೇವದುರ್ಗ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳ ಆರೈಕೆದಾರರಿಗೆ ತರಬೇತಿ ನೀಡಲಾಗುತ್ತಿದೆ. ಆಗಸ್ಟ್ 15ರಂದು ಶಿಶು ಪಾಲನಾ ಕೇಂದ್ರವನ್ನು ಆರಂಭಿಸಲಾಗುತ್ತದೆ. ಶಿಶು ಪಾಲನಾ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಶೌಚಾಲಯ, ಕುಡಿಯುವ ನೀರು, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿಕೊಡಲಾಗುವುದು” ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮುಖ್ಯ ಲೆಕ್ಕಾಧಿಕಾರಿ ನಾಗರಾಜ, ತಾಪಂ ಎಡಿ ವೆಂಕಟೇಶ ದೇಸಾಯಿ, ಇಒ ಚಂದ್ರಶೇಖರ ಸೇರಿದಂತೆ ಸಿಬ್ಬಂದಿಗಳು ಆರೈಕೆದಾರರು ಭಾಗವಹಿಸಿದ್ದರು.