- ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ
- ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ
ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ವಿಸ್ತರಿತ ಮಾರ್ಗದಲ್ಲಿ ಸಿಗ್ನಲಿಂಗ್ ಸೇರಿದಂತೆ ಇತರೆ ಕಾಮಗಾರಿಗಳು ನಡೆಯಲಿವೆ. ಹಾಗಾಗಿ, ಆ.10, 11 ಹಾಗೂ 14 ರಂದು ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಆ. 10, 11 ಹಾಗೂ 14ರಂದು ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಬದಲಾವಣೆಯಿರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕಟಣೆ ಮೂಲಕ ತಿಳಿಸಿದೆ.
“ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸುವ ಸಲುವಾಗಿ, ನಿಗಮವು ಆ.9 ರವರೆಗೆ ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳವರೆಗೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಾಗಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ನಮ್ಮ ಕ್ಲಿನಿಕ್ | ನಂ.1 ಕ್ಲಿನಿಕ್‌ಗಳನ್ನಾಗಿ ಮಾರ್ಪಡಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಿಂತನೆ
“ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಎರಡು ದಿನ ಕಾಲಾವಕಾಶ ಬೇಕಾಗಿದ್ದು, ಆ.10 ಮತ್ತು 11 ರವರೆಗೆ ರೈಲು ಸಂಚಾರ ಸ್ಥಗಿತ ಇರಲಿದೆ. ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತದೆ” ಎಂದು ತಿಳಿಸಿದೆ.
“ಕೆಂಗೇರಿ ನಿಲ್ದಾಣದಿಂದ ಚಲ್ಲಘಟ್ಟ ನಿಲ್ದಾಣದವರೆಗೆ ರೈಲು ಸೇವೆಯನ್ನು ವಿಸ್ತರಿಸಲು ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಳು ನಡೆಯುತ್ತಿವೆ. ಹಾಗಾಗಿ, ಆ.14 ರಂದು ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಕೆಂಗೇರಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಇರುವುದಿಲ್ಲ. ಈ ಸಮಯದಲ್ಲಿ ಬೈಯಪ್ಪನಹಳ್ಳಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಇರುತ್ತದೆ ಎಂದು ಹೇಳಿದೆ.
ಬೆಳಿಗ್ಗೆ 7 ಗಂಟೆಯ ನಂತರ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲು ಸೇವೆಗಳು ರಾತ್ರಿ 11ರವರೆಗೆ ಇರುತ್ತವೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.