ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ 13 ವರ್ಷದ ಬಾಲ್ಯವಿವಾಹ ಪೀಡಿತೆಯನ್ನು ಅಪಹರಿಸಿದ ಆರೋಪಿ ಚಂದ್ರಕಾಂತ ಲಾವಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಿಯನ್ನು ಜುಲೈ 25ರಂದು ರಕ್ಷಿಸಿ ಆಶ್ರಯ ಕೇಂದ್ರದಲ್ಲಿ ಇರಿಸಿದ್ದರು. ಜುಲೈ 30ರಂದು ಆಶ್ರಯ ಕೇಂದ್ರಕ್ಕೆ ಬಂದ ಆರೋಪಿ, ತಾನು ಬಾಲಕಿಯ ಚಿಕ್ಕಪ್ಪ ಎಂದು ಹೇಳಿ ಮಾತ್ರೆ ಕೊಡಬೇಕಿದೆ ಎಂದು ಸಿಬ್ಬಂದಿಗೆ ತಿಳಿಸಿದ್ದಾನೆ. ನಂತರ ಚಾಕು ತೋರಿಸಿ ಬೆದರಿಸಿ, ಬೈಕ್‌ನಲ್ಲಿ ಬಾಲಕಿಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.
ಈ ಕುರಿತು ಜುಲೈ 31ರಂದು ಅಪಹರಣ ಪ್ರಕರಣ ದಾಖಲಾಗಿತ್ತು. ಸೋಮವಾರ ಆರೋಪಿ ಬಂಧನಕ್ಕೊಳಗಾಗಿದ್ದು, ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎನ್. ಚೇತನ್‌ಕುಮಾರ್ ತಿಳಿಸಿದ್ದಾರೆ.
ಇಂತಹ ಘಟನೆಗಳನ್ನು ತಪ್ಪಿಸಲು ಆಶ್ರಯ ಕೇಂದ್ರಗಳಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ತಿಳಿಸಿದ್ದಾರೆ.