ಡೆತ್‌ನೋಟ್ ಬರೆದಿಟ್ಟು ಜಾನಪದ ಗಾಯಕಿಯೊಬ್ಬರ 14 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ ಮೂರನೇ ಹಂತದ ಬನಗಿರಿ ನಗರದಲ್ಲಿ ನಡೆದಿದೆ. ಮೃತ ಬಾಲಕನನ್ನು ಸಂಗೀತ ಕಲಾವಿದ ಗಣೇಶ್ ಪ್ರಸಾದ್, ಜಾನಪದ ಗಾಯಕಿ ತಾಯಿ ಸವಿತಾ ಅವರ ಮಗ ಗಂಧಾರ್ ಜಿ. ಪ್ರಸಾದ್ (14) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ ಬಾಲಕನ ಕೊಠಡಿಗೆ ಹೋಗಿ ನೋಡಿದಾಗ ಆತ ಆತ್ಮಹತ್ಯೆ ಮಾಡಿರುವುದು ತಿಳಿದುಬಂದಿದೆ. ಡೆತ್‌ನೋಟ್ ಸಿಕ್ಕಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ಮಾತ್ರ ತಿಳಿದುಬಂದಿಲ್ಲ.
ಇದನ್ನು ಓದಿದ್ದೀರಾ? ಬೆಳಗಾವಿ | ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆರೋಪಿ ಆತ್ಮಹತ್ಯೆ
ಈ ಬಗ್ಗೆ ತಂದೆ ಗಣೇಶ್ ಪ್ರಸಾದ್ ದೂರು ನೀಡಿದ್ದು, “ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದ್ದ. ಬೆಳಿಗ್ಗೆ ಎಷ್ಟು ಹೊತ್ತಾದರೂ ಕೋಣೆಯಿಂದ ಹೊರಗೆ ಬರಲಿಲ್ಲ. ಶಾಲೆಗೆ ತಡವಾಗುತ್ತದೆ ಎಂದು ಮಗನನ್ನು ಎಬ್ಬಿಸಲು ಕೋಣೆಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಆತನ ಯಾವುದೋ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸಾವಿನ ಬಗ್ಗೆ ಅನುಮಾನವಿಲ್ಲ” ಎಂದು ತಿಳಿಸಿದ್ದಾರೆ.

ಬಾಲಕ ಇಂಗ್ಲೀಷ್‌ನಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದಾನೆ. “ಪ್ರೀತಿಯ ಕುಟುಂಬ ಸದಸ್ಯರೇ, ಈ ಪತ್ರವನ್ನು ಯಾರೇ ಓದುತ್ತಿದ್ದರೂ ದಯವಿಟ್ಟು ಅಳಬೇಡಿ, ಯಾಕೆಂದರೆ ನಾನು ಈಗಾಗಲೇ ಸ್ವರ್ಗದಲ್ಲಿದ್ದೇನೆ. ನನ್ನನ್ನು ತಪ್ಪಾಗಿ ತಿಳಿಯಬೇಡಿ. ನಿಮಗೆ ನೋವಾಗುತ್ತಿದೆ ಎಂದು ನನಗೆ ತಿಳಿದಿದೆ. ಈ ಮನೆ ಚೆನ್ನಾಗಿರಬೇಕೆಂದು ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ನಿಮಗೆ ಸಿಟ್ಟು ಬರಿಸಿದ್ದೇನೆ, ಬೇಸರ ಪಡಿಸಿದ್ದೇನೆ. ಆದರೆ, ನನ್ನ ಉದ್ದೇಶ ನಿಮ್ಮನ್ನು ನೋಯಿಸುವುದು ಆಗಿರಲಿಲ್ಲ” ಎಂದು ಬರೆದಿದ್ದಾನೆ.
“ನನ್ನ ಮೇಲೆ ಕೋಪವಿದ್ದರೆ ಕ್ಷಮೆ ಕೇಳುತ್ತೇನೆ. ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ. 14 ವರ್ಷ ಬದುಕಿದ್ದು, ಅದರಲ್ಲೇ ತೃಪ್ತಿಯಿದೆ. ಸ್ವರ್ಗದಲ್ಲಿ ನಾನು ಖುಷಿಯಾಗಿರುತ್ತೇನೆ. ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ ಎಂದು ಅವರಿಗೂ ತಿಳಿಸಿ. ಐ ಮಿಸ್ ಯೂ ಆಲ್ – ಗುಡ್ಬೈ ಅಮ್ಮ” ಎಂದು ಪತ್ರದಲ್ಲಿ ಬರೆಯಲಾಗಿದೆ.
ಇನ್ನು ತಾಯಿ ಸವಿತಾ ಅವರು ಕಳೆದ ಶುಕ್ರವಾರ ಕಾರ್ಯಕ್ರಮಕ್ಕೆಂದು ಆಸ್ಟ್ರೇಲಿಯಾಗೆ ತೆರಳಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
