ಸ್ಥಳೀಯವಾಗಿ ಕೆಲವೇ ಬೆರಳೆಣಿಕೆಯಷ್ಟು ಬಸ್ ಗಳ ಸಂಚಾರ, ದೂರದೂರುಗಳಿಗೆ ತೆರಳಲು ಮುಂಜಾನೆಯಿಂದಲೇ ಆಗಮಿಸುತ್ತಿದ್ದ ಪ್ರಯಾಣಿಕರು, ಸರ್ಕಾರದ ಮಾತುಕತೆ, ಎಸ್ಮಾ ಅಸ್ತ್ರಕ್ಕೂ ಬಗ್ಗದೇ ಮುಷ್ಕರ ಮುಂದುವರೆಸಿರುವ ಕೆಎಸ್ಸಾರ್ಟಿಸಿ ನೌಕರರು. ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಸಾಮಾನ್ಯವಾಗಿ ಇಂದು ಮುಂಜಾನೆಯಿಂದಲೇ ಕಂಡು ಬಂದ ದೃಶ್ಯಗಳು. ಬಸ್ ಸಂಚಾರ ವಿರಳವಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲದ ಬಿಸಿ ತಟ್ಟಲಾರಂಬಿಸಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರಾರಂಭಿಸಿರುವ ಧರಣಿ ಇಂದು ಮುಂಜಾನೆಯಿಂದಲೇ ಪ್ರಾರಂಭವಾಗಿದ್ದು, ಬೇರೆ ಬೇರೆ ಊರುಗಳಿಗೆ ತೆರಳಿದ್ದ ಬಸ್ ಗಳು ಮಾತ್ರ ತಮ್ಮ ತಮ್ಮ ವಿಭಾಗಗಳಿಗೆ ತೆರಳಲು ಆಗಮಿಸುತ್ತಿದ್ದುದು ಹೊರತುಪಡಿಸಿ ದೂರದ ನಗರಗಳಿಗೆ ಯಾವುದೇ ಬಸ್ ಗಳು ಸಂಚಾರಕ್ಕಿಳಿಯದೇ ನಿಲ್ದಾಣದಲ್ಲಿ ಪ್ರಯಾಣಿಕರು ಮಾತ್ರ ಕಾಯುವಂತಹ ದೃಶ್ಯ ಸಾಮಾನ್ಯವಾಗಿತ್ತು. ಬೆಳಿಗ್ಗೆ 9 ಗಂಟೆಯ ನಂತರ ಗ್ರಾಮಾಂತರ ಬಸ್ ಗಳ ಸಂಚಾರ ಕೆಲ ಮಟ್ಟಿಗೆ ಪ್ರಾರಂಭವಾಗಿದೆ. ಆದರೆ ಬೆಂಗಳೂರು, ಮೈಸೂರು, ಬೆಳಗಾವಿ, ಸೇರಿದಂತೆ ಬಹುತೇಕ ದೂರದ ಪ್ರಯಾಣದ ಬಸ್ ಗಳು ಸಂಚಾರ ನಿಲ್ಲಿಸಿವೆ.

ಕೆಎಸ್ಸಾರ್ಟಿಸಿ ನೌಕರರ ಮುಷ್ಕರ ಎಂದು ತಿಳಿದು ತುರ್ತಾಗಿ ಬೇರೆಡೆಗೆ ಹೋಗಬೇಕಿದ್ದವರು, ತಿಳಿಯದೇ ಬಂದಿದ್ದ ಹಲವು ಪ್ರಯಾಣಿಕರು ಬಸ್ ಗಳ ನಿರೀಕ್ಷೆಯಲ್ಲಿ ನಿಂತು ಕಾಯುವ ಆಗೊಮ್ಮೆ ಈಗೊಮ್ಮೆ ಟ್ರಾಫಿಕ್ ಕಂಟ್ರೋಲರ್ ಹತ್ತಿರ ಹೋಗಿ ವಿಚಾರಿಸುವ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಸಾರಿಗೆ ನೌಕರರ ಮುಷ್ಕರ ಸಾರ್ವಜನಿಕರಿಗೆ ಪ್ರಯಾಣದ ಅವ್ಯವಸ್ಥೆ, ಬಿಸಿ ಮುಟ್ಟುವ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಇದರ ಮಧ್ಯೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಖಾಸಗಿ ಬಸ್ಸುಗಳು ಸಾಮಾನ್ಯವಾಗಿ ಸಂಚರಿಸುತ್ತಿದ್ದು, ದೂರದ ನಗರಗಳಿಗೆ ಪ್ರಯಾಣದ ದರವನ್ನು ಬೇಕಾಬಿಟ್ಟಿಯಾಗಿ ಏರಿಸಿವೆ. 287 ರೂ. ಇರುವ ಚಿತ್ರದುರ್ಗ ಬೆಂಗಳೂರು ಪ್ರಯಾಣದ ದರಕ್ಕೆ 500 ರೂ ಗೆ ಏರಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಹೊರೆ ಬೀಳಲಿದೆ.

ಬಸ್ ಗಳ ಸಂಚಾರವಿಲ್ಲದ ಶಕ್ತಿ ಯೋಜನೆಯಡಿ ಉತ್ತಮ ಪ್ರಯಾಣದ ವ್ಯವಸ್ಥೆ ಪಡೆದಿದ್ದ ಮಹಿಳೆಯರು ಇಂದು ಸಂಚಾರದ ವ್ಯತ್ಯಯದಿಂದಾಗಿ ಪರ್ಯಾಯ ವ್ಯವಸ್ಥೆಗೆ ಹುಡುಕಾಟ ನೆಡೆಸುತ್ತಿದ್ದುದು ಕಂಡು ಬರುತ್ತಿತ್ತು. ಮುಷ್ಕರದ ಪ್ರಚಾರದಿಂದಾಗಿ ಕೂಡ ಪ್ರಯಾಣಿಕರ ಸಂಖ್ಯೆ ಕೂಡ ಅರ್ಧದಷ್ಟು ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ
ಮುಷ್ಕರ ಮತ್ತು ಬಸ್ ಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ದಾವಣಗೆರೆ ವಿಭಾಗೀಯ ನಿಯಂತ್ರಣಿಧಿಕಾರಿ ಕಿರಣ್ ಕುಮಾರ್, “ದಾವಣಗೆರೆ ವಿಭಾಗದಿಂದ ಇಂದು ಶೇ.40ರಷ್ಟು ಬಸ್ ಗಳು ಕಾರ್ಯಿಚರಣೆಗಿಳಿದಿವೆ. ಗ್ರಾಮಾಂತರ ಮಟ್ಟದಲ್ಲಿ ಹೆಚ್ಚು ಓಡಾಟ ನಡೆಸಿವೆ. ದೂರದ ನಗರಗಳಿಗೆ ಕೆಲವು ಬಸ್ ಗಳು ಮಾತ್ರ ತೆರಳುತ್ತಿವೆ. ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆ ಇದ್ದು ಹೆಚ್ಚು ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ವಾಯುವ್ಯ, ಈಶಾನ್ಯ ಸಾರಿಗೆ ಸಂಸ್ಥೆಗಳ ಕೆಲವು ಬಸ್ಸುಗಳು ಕೂಡ ನಿಲ್ದಾಣಕ್ಕೆ ಬಂದು ಹೋಗಿ ಸಂಚರಿಸುತ್ತಿವೆ” ಎಂದು ಮಾಹಿತಿ ನೀಡಿದರು.