ಮಾಲೆಗಾಂವ್ ಸ್ಫೋಟ | ಪ್ರಮುಖ ಸಾಕ್ಷಿಗಳನ್ನೇ ಕೈಬಿಟ್ಟಿದ್ದ ಪ್ರಾಸಿಕ್ಯೂಷನ್; ಅನುಮಾನಗಳಿದ್ದರೂ ಮುಗಿದು ಹೋದ ಪ್ರಕರಣ

Date:

Advertisements
ಪ್ರಮುಖ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುವುದು ಪ್ರಾಸಿಕ್ಯೂಷನ್‌ನ ಕರ್ತವ್ಯವಾದರೂ, ಪ್ರಾಸಿಕ್ಯೂಷನ್‌ ತನ್ನ ಕರ್ತವ್ಯವನ್ನು ಪಾಲಿಸಲಿಲ್ಲ. ಪ್ರಾಸಿಕ್ಯೂಷನ್ ಕೆಲವು ಪ್ರಮುಖ ಸಾಕ್ಷಿಗಳನ್ನು ಕೈಬಿಟ್ಟಿದ್ದಕ್ಕೆ ಅಥವಾ ಮರೆಮಾಚಿದ್ದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ.

2008ರಲ್ಲಿ ನಡೆದಿದ್ದ ಮಾಲೆಗಾಂವ್ ಭಯೋತ್ಪಾದಕ ಸ್ಫೋಟ ಪ್ರಕರಣದಲ್ಲಿ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ 7 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಅವರು ಅಪರಾಧಿಗಳಲ್ಲ ಎಂದು ತೀರ್ಪಿತ್ತಿದೆ. ಆದರೆ, 17 ವರ್ಷಗಳ ಹಿಂದೆ ನಡೆದ ಈ ಭೀಕರ ಸ್ಫೋಟಕ್ಕೆ ಕಾರಣ ಯಾರು? ಎಂಬ ಪ್ರಶ್ನೆ ಈಗ ಮುನ್ನಲೆಯಲ್ಲಿದೆ.

ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ 2008ರ ಮುಸ್ಲಿಮರ ರಂಜಾನ್ ಹಬ್ಬದ ತಿಂಗಳಾದ ಸೆಪ್ಟೆಂಬರ್ 19ರಂದು ಭೀಕರ ಬಾಂಬ್ ಸ್ಫೋಟಗೊಂಡಿತು. ಮೋಟರ್‌ಸೈಕಲ್‌ನಲ್ಲಿ ಸ್ಫೋಟಕವನ್ನು ಅಳವಡಿಸಿ, ಸಾರ್ವಜನಿಕ ಪ್ರದೇಶದಲ್ಲಿ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದರು. 101 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಸ್ಫೋಟ ನಡೆದ ಆರಂಭದಲ್ಲಿ ಪ್ರಕರಣವನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ತನಿಖೆ ನಡೆಸುತ್ತಿತ್ತು. ಆ ನಂತರ, ತನಿಖೆಯನ್ನು ಎನ್‌ಐಎಗೆ ವಹಿಸಲಾಯಿತು. ಪ್ರಕರಣದ ತನಿಖೆ ಸುದೀರ್ಘವಾಗಿ ನಡೆದು, 2018ರಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಆರಂಭಿಸಿತ್ತು. ವಿಚಾರಣೆ ಆರಂಭವಾದ ಈ ಏಳು ವರ್ಷಗಳ ಅವಧಿಯಲ್ಲಿ ಪ್ರಾಸಿಕ್ಯೂಷನ್ 323 ಸಾಕ್ಷಿಗಳನ್ನು ಪರಿಶೀಲಿಸಿತು. ಆದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ವಿವರಣೆ ನೀಡದೆ ಹಲವಾರು ಸಾಕ್ಷಿಗಳನ್ನು ಕೈಬಿಟ್ಟಿತು. ಕೈಬಿಟ್ಟ ಸಾಕ್ಷಿಗಳು ಘಟನೆಯ ಆರೋಪ ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಎನ್‌ಐಎ ನ್ಯಾಯಾಲಯ ಭಾವಿಸಿತ್ತು. ಹೀಗಾಗಿಯೇ, ʼʼಈ ಸಾಕ್ಷಿಗಳನ್ನು ಕೈಬಿಡುವ ನಿರ್ಧಾರವು ಪ್ರಾಸಿಕ್ಯೂಷನ್‌ಗೆ ʼಪ್ರತಿಕೂಲ ಊಹೆʼಯನ್ನು ಚಿತ್ರಿಸಲು ಅವಕಾಶ ನೀಡಿತುʼʼ ಎಂದು ವಿಶೇಷ ಎನ್‌ಐಎ ನ್ಯಾಯಾಧೀಶ ಎ.ಕೆ ಲಾಹೋಟಿ ಹೇಳಿದ್ದಾರೆ.

Advertisements

ನ್ಯಾಯಾಲಯವು 1,036 ಪುಟಗಳ ತೀರ್ಪನ್ನು ಆಗಸ್ಟ್ 1ರಂದು ಪ್ರಕಟಿಸಿತು. ಇದರಲ್ಲಿ, ಬಿಜೆಪಿ ನಾಯಕಿ, ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಸೇವೆಯಲ್ಲಿರುವ ಸೇನಾ ಅಧಿಕಾರಿ ಪ್ರಸಾದ್ ಪುರೋಹಿತ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್ಕರ್, ಸಮೀರ್ ಕುಲಕರ್ಣಿ, ಸುಧಾಕರ್ ಚತುರ್ವೇದಿ– ಈ ಏಳು ಆರೋಪಿಗಳನ್ನು ಖುಲಾಸೆಗೊಳಿಸಿತು. ಆದಾಗ್ಯೂ, ತೀರ್ಪಿನಲ್ಲಿ, ಹಲವಾರು ಪ್ರಮುಖ ಸಾಕ್ಷಿಗಳನ್ನು ಪ್ರಾಸಿಕ್ಯೂಷನ್‌ ಕೈಬಿಟ್ಟಿದ್ದರ ಉದ್ದೇಶದ ಬಗ್ಗೆ ನ್ಯಾಯಾಲಯವು ಪ್ರಶ್ನಿಸಿದೆ. ಕೈಬಿಡಲಾದ ಸಾಕ್ಷಿಗಳು ಪ್ರಕರಣದ ಗೊಂದಲಗಳನ್ನು ಪರಿಹರಿಸಲು ನೆರವಾಗುತ್ತಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿದೆ.

“ಪ್ರಾಸಿಕ್ಯೂಷನ್ ಸಾಕಷ್ಟು ಸಾಕ್ಷ್ಯಗಳನ್ನು ರೂಪಿಸುವಲ್ಲಿ ವಿಫಲವಾದ ಕಾರಣ ಖುಲಾಸೆ ಮಾಡಲಾಗಿದೆ. ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದಂತೆ ಗಂಭೀರ ಅನುಮಾನಗಳು ಇದ್ದರೂ, ಕೇವಲ ಅನುಮಾನವು ಆರೋಪ ಸಾಬೀತಿಗೆ ಸಾಕಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪುರೋಹಿತ್ ಎಂಬವರು ‘ಹಿಂದು ರಾಷ್ಟ್ರ’ ಸ್ಥಾಪನೆಯ ಗುರಿಯೊಂದಿಗೆ ‘ಅಭಿನವ್ ಭಾರತ’ ಎಂಬ ಸಂಘಟನೆ ಸ್ಥಾಪಿಸಿದ್ದರು. ಹಿಂದು ರಾಷ್ಟ್ರ ಸ್ಥಾಪನೆಯ ಯೋಜನೆಯ ಭಾಗವಾಗಿ ಪುರೋಹಿತ್ ಮತ್ತು ಇತರ ಆರೋಪಿಗಳು ಒಟ್ಟುಗೂಡಿ ಮಾಲೆಗಾಂವ್‌ನಲ್ಲಿ ಭಯೋತ್ಪಾದಕ ಸ್ಫೋಟ ಎಸಗಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣದ ವಿಚಾರಣೆಯ ಆರಂಭದಲ್ಲಿ ಪ್ರಕರಣವನ್ನು ನ್ಯಾಯಾಲಯದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯನ್ ವಾದಿಸುತ್ತಿದ್ದರು. ಆದರೆ, ಅವರು “ನನಗೆ ಆರೋಪಿಗಳ ಮೇಲೆ ‘ಮೃದುತ್ವ (ಸಾಫ್ಟ್‌ಕಾರ್ನರ್‌)’ ಇರಲಿ’ ಎಂದು ಸೂಚಿಸಲಾಗಿದೆ” ಎಂಬುದಾಗಿ ಆರೋಪಿಸಿ, ಅವರು 2015ರಲ್ಲಿ ಪ್ರಕರಣದಿಂದ ಹೊರ ನಡೆದರು. ಬಳಿಕ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಸಾಲ್ ಅವರು ಪ್ರಕರಣವನ್ನು ಮುನ್ನಡೆಸಲು ನೇಮಕಗೊಂಡರು.

ಕಳೆದ 10 ವರ್ಷಗಳಿಂದ ರಸಾಲ್ ಅವರು ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕೈಬಿಟ್ಟ ಹಲವಾರು ಸಾಕ್ಷಿಗಳಲ್ಲಿ, ಸ್ಫೋಟಕ್ಕೂ ಮುನ್ನ ಆರೋಪಿತ ಬಾಂಬರ್‌ಗಳ ಚಲನವಲನವನ್ನು ಪಟ್ಟಿಮಾಡಲು ನೆರವಾಗಿದ್ದರು ಎಂದು ಹೇಳಲಾದ ಸಾಕ್ಷಿಯನ್ನೂ ಸೇರಿಸಿದ್ದಾರೆ.

ಕೈಬಿಟ್ಟ ಪ್ರಮುಖ ಸಾಕ್ಷಿಗಳಲ್ಲಿ ವಿಲೋಕ್ ಶರ್ಮಾ ಒಬ್ಬರು

ಪ್ರಾಸಿಕ್ಯೂಷನ್ ಯಾವುದೇ ಸ್ಪಷ್ಟ ವಿವರಣೆ ಇಲ್ಲದೆ ಕೈಬಿಟ್ಟ ಸಾಕ್ಷಿಗಳಲ್ಲಿ ವಿಲೋಕ್ ಶರ್ಮಾ ಒಬ್ಬರು. ಇವರು ತಮ್ಮ ‘ಯೂಸರ್‌ ಐಡಿ’ ಮತ್ತು ‘ಫೋನ್‌ ನಂಬರ್‌’ ಬಳಸಿ ಆರೋಪಿಗಳಿಗೆ ಟಿಕೆಟ್‌ ಬುಕ್‌ ಮಾಡಿದ್ದರು. ಎಟಿಎಸ್‌ ಪ್ರಕಾರ, 2016ರ ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಇದನ್ನು ದಾಖಲಿಸಿತ್ತು. ಅದರಲ್ಲಿ, “ವಿಲೋಕ್ ಶರ್ಮಾ ಅವರು ತನ್ನ ಖಾತೆ ಮತ್ತು ಫೋನ್ ನಂಬರ್‌ ಬಳಸಿ ಇಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳಾದ ರಾಮಚಂದ್ರ ಕಲ್ಸಾಂಗ್ರಾ ಮತ್ತು ಸಂದೀಪ್ ದಾಂಗೆಗೆ ಪುಣೆಯಿಂದ ಇಂದೋರ್‌ಗೆ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿದ್ದರು” ಎಂದು ಆರೋಪಿಸಲಾಗಿತ್ತು.

ಎಟಿಎಸ್ ಮತ್ತು ಎನ್‌ಐಎ ಪ್ರಕಾರ, ಈ ಇಬ್ಬರು ಮಾಲೆಗಾಂವ್‌ನಲ್ಲಿ ಮೋಟಾರ್‌ ಬೈಕ್‌ನಲ್ಲಿ ಬಾಂಬ್‌ಗಳನ್ನು ಇರಿಸಿದ ಆರೋಪಿಗಳು. ಅಲ್ಲದೆ, ಈ ಇಬ್ಬರೊಂದಿಗೆ ಮತ್ತೊಬ್ಬ ವ್ಯಕ್ತಿ ಪ್ರವೀಣ್ ತಕ್ಕಲ್ಕಿ ಎಂಬಾತ ಕೂಡ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಎಟಿಎಸ್ ಆರೋಪಿಸಿತ್ತು. ಆದರೆ, 2017ರಲ್ಲಿ ಎನ್‌ಐಎಗೆ ಯಾವುದೇ ಸಾಕ್ಷ್ಯಗಳು ಸಿಗದ ಕಾರಣ ಆತನನ್ನು ಪ್ರಕರಣದಿಂದ ಕೈಬಿಡಲಾಯಿತು.

ಈ ಲೇಖನ ಓದಿದ್ದೀರಾ?: ಮಾಲೆಗಾಂವ್ ಸ್ಫೋಟ ಪ್ರಕರಣ: 1,087 ವಿಚಾರಣೆಗಳು, ನಾನಾ ಆದೇಶಗಳ ನಡುವೆ ಸಂತ್ರಸ್ತರ ಹೋರಾಟ ನಡೆದದ್ದು ಹೀಗೆ!

ಎನ್‌ಐಎ ನ್ಯಾಯಾಲಯದ ತೀರ್ಪಿನಲ್ಲಿ; ಶರ್ಮಾ ಅವರು ರಾಮಚಂದ್ರ ಕಲ್ಸಾಂಗ್ರಾ ಮತ್ತು ಸಂದೀಪ್ ದಾಂಗೆ ಎಂಬ ನಿಜವಾದ ಹೆಸರುಗಳ ಬದಲಿಗೆ ಬಾಲವಂತ್ ಪಾಠಕ್ ಮತ್ತು ಮಾನ್‌ಸಿಂಗ್ ಎಂಬ ಕಾಲ್ಪನಿಕ ಹೆಸರುಗಳಲ್ಲಿ ಟಿಕೆಟ್‌ ಬುಕ್ ಮಾಡಿದ್ದರು ಎಂದು ವಿವರಿಸಲಾಗಿದೆ. ಈ ಇಬ್ಬರೂ ಕಲ್ಸಾಂಗ್ರಾ ಮತ್ತು ದಾಂಗೆ ಆಗಸ್ಟ್ 8 ರಿಂದ 11 ರವರೆಗೆ ಪುಣೆಯಲ್ಲಿದ್ದರು. ಬಳಿಕ, ಇಂದೋರ್‌ಗೆ ತೆರಳಿ, ಅಲ್ಲಿ ಪುರೋಹಿತ್‌ನಿಂದ ಆರ್‌ಡಿಎಕ್ಸ್‌ ಸ್ಪೋಟಕವನ್ನು ಪಡೆದಿದ್ದರು. ನಂತರದಲ್ಲಿ, ಆರೋಪಿಗಳು ಎಲ್‌ಎಂಎಲ್‌ ಫ್ರೀಡಂ ಮೋಟಾರ್‌ಸೈಕಲ್‌ನಲ್ಲಿ ಸ್ಪೋಟಕವನ್ನು ಜೋಡಿಸಿ, ಇರಿಸಿದ್ದರು ಎಂದು ಆರೋಪಿಸಲಾಗಿತ್ತು.

ಪುಣೆಯಿಂದ ಇಂದೋರ್‌ಗೆ ತಲೆಮರೆಸಿಕೊಂಡ ಆರೋಪಿಗಳ ಪ್ರಯಾಣ ಮತ್ತು ಚಲನವಲನವನ್ನು ಸ್ಥಾಪಿಸಲು ಮಾತ್ರವಲ್ಲ, ಸೇನಾ ಅಧಿಕಾರಿ ಪುರೋಹಿತ್‌ ಜೊತೆಗಿನ ಅವರ ಸಂಪರ್ಕವನ್ನು ಸಾಬೀತು ಮಾಡಲು ಕೂಡ ಶರ್ಮಾ ಪ್ರಮುಖ ಸಾಕ್ಷಿಯಾಗಿದ್ದರು.

ಹೀಗಾಗಿ, “ಟಿಕೆಟ್ ವಿವರಗಳು, ಬುಕಿಂಗ್ ವಿವರಗಳು ಹಾಗೂ ಪ್ರಯಾಣದ ಮಾಹಿತಿಗಳನ್ನು ವಿವರಿಸಲು ವಿಲೋಕ್ ಶರ್ಮಾ ಮಹತ್ವದ ಸಾಕ್ಷಿಯಾಗಿದ್ದರು. ಆದರೆ, ವಿಲೋಕ್ ಶರ್ಮಾವನ್ನು ಪ್ರಾಸಿಕ್ಯೂಷನ್ ಪ್ರಶ್ನಿಸಿಲ್ಲ. ಈ ಸಾಕ್ಷಿಯನ್ನು ಪ್ರಾಸಿಕ್ಯೂಷನ್ ಕೈಬಿಟ್ಟಿದೆ. ಆದ್ದರಿಂದ, ಈ ವಿಷಯದಲ್ಲಿ ಯಾವುದೇ ಸಾಕ್ಷ್ಯವಿಲ್ಲ. ಪರಿಣಾಮವಾಗಿ, ಆತನ ಖಾತೆಯಿಂದ ಎರಡು ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ ಎಂಬುದಾಗಿ ಖಚಿತವಾಗಿ ಹೇಳಲಾಗದು” ನ್ಯಾಯಾಲಯ ಹೇಳಿದೆ.

 “ಶರ್ಮಾ ಹೇಳಿಕೆ ಮಾತ್ರವಲ್ಲ, ಸಾಕ್ಷ್ಯಾಧಾರ ಕಾಯ್ದೆಯ ಸೆಕ್ಷನ್ 65ಬಿ ಅಡಿಯಲ್ಲಿ ಪಡೆಯಬೇಕಾದ ಅತ್ಯಗತ್ಯ ಪ್ರಮಾಣಪತ್ರವನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ. ಈ ಪ್ರಮಾಣಪತ್ರವಿಲ್ಲದೆ, ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಸ್ವೀಕಾರಾರ್ಹ ಎನ್ನಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಸತ್ಯಾಂಶಗಳು ಆರೋಪಿಗಳ ವಿರುದ್ಧ ‘ಗಂಭೀರ ಅನುಮಾನ’ ಹುಟ್ಟುಹಾಕಿವೆ. ಆದರೆ, ಕೇವಲ ಅನುಮಾನವು ಶಿಕ್ಷೆಗೆ ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಂತಿಮವಾಗಿ, ಆರೋಪಿಗಳು ‘ಅನುಮಾನದ ಲಾಭ’ ಪಡೆದಿದ್ದಾರೆ. ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ.

ಶರ್ಮಾನನ್ನು ಸಾಕ್ಷಿಗಳ ಪಟ್ಟಿಯಿಂದ ಕೈಬಿಡಲಾಯಿತು. ಆದರೂ, ಇತರ ಸಾಕ್ಷಿಗಳ ಪರಿಶೀಲನೆಯಲ್ಲಿ, ವಿಶೇಷವಾಗಿ ಹಿರಿಯ ರೈಲ್ವೆ ಕಾರ್ಯನಿರ್ವಾಹಕ ಮತ್ತು ಎಟಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಶರ್ಮಾ ಹೆಸರು ಕಾಣಿಸಿಕೊಂಡಿತು. ಆದ್ದರಿಂದ ತೀರ್ಪಿನಲ್ಲಿ ಹೇಳಲಾದ ಒಂದು ಪ್ಯಾರಾ ಹೀಗಿದೆ:

“ಹೀಗಾಗಿ, ಕೇವಲ ವಿಲೋಕ್ ಶರ್ಮಾ ಮಾತ್ರ ಟಿಕೆಟ್ ಬುಕಿಂಗ್‌ನ ಬಗ್ಗೆ ಮಾಹಿತಿ ನೀಡಬಹುದಾದ ಸಾಕ್ಷಿಯಾಗಿದ್ದರು. ಪ್ರಮುಖ ಸಾಕ್ಷಿಯಾದ ವಿಲೋಕ್ ಶರ್ಮಾನನ್ನು ಪ್ರಾಸಿಕ್ಯೂಷನ್ ವಿಚಾರಣೆಗೆ ಒಳಪಡಿಸಿಲ್ಲ – ಪ್ರಶ್ನಿಸಿಲ್ಲ. ಯಾವುದೇ ವಿವರಣೆ ಇಲ್ಲದೆ ಪ್ರಮುಖ ಸಾಕ್ಷಿಯನ್ನು ಪ್ರಶ್ನಿಸದೇ ಇರುವುದು ಪ್ರಾಸಿಕ್ಯೂಷನ್‌ನ ಪ್ರತಿಕೂಲ ಊಹೆಗೆ ಕಾರಣವಾಗಿದೆ”

ಮತ್ತೊಬ್ಬ ಸಾಕ್ಷಿಯಾದ ಪ್ರಮೋದ್ ದೇಶಮುಖ್, ತನಿಖಾ ಸಂಸ್ಥೆಯ ಪ್ರಕಾರ ಆಗಸ್ಟ್ 8 ಮತ್ತು 11ರಂದು ಪುಣೆಯಲ್ಲಿ ಕಲ್ಸಾಂಗ್ರಾ ಮತ್ತು ದಾಂಗೆಯನ್ನು ಕಣ್ಣಾರೆ ನೋಡಿದ್ದ ‘ಐ ವಿಟ್ನೆಸ್‌’ ಆಗಿದ್ದರು. ಆದರೆ. ಪ್ರಕರಣದ ಸಾಕ್ಷ್ಯಗಳಿಂದ ಅವರನ್ನೂ ಪ್ರಾಸಿಕ್ಯೂಷನ್ ಕೈಬಿಟ್ಟಿತು.

ನ್ಯಾಯಾಲಯವು ಗಮನಿಸಿದ ಮತ್ತೊಂದು ಪ್ರಮುಖ ಸಾಕ್ಷಿಯೆಂದರೆ, ಡಿಟೋನೇಟರ್‌ಅನ್ನು ನಿಷ್ಕ್ರಿಯಗೊಳಿಸಿದ ಪೊಲೀಸ್ ಅಧಿಕಾರಿ. ಆದರೆ, ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿಲ್ಲ.

ತಮ್ಮ ತೀರ್ಪಿನಲ್ಲಿ ನ್ಯಾಯಾಧೀಶ ಲಾಹೋಟಿ ಅವರು ಹೀಗೆ ಬರೆದಿದ್ದಾರೆ:

“ಪ್ರಾಸಿಕ್ಯೂಷನ್‌ ರಚಿಸಿದ ಪ್ರಕರಣದಂತೆ, ಡಿಟೋನೇಟರ್‌ನ್ನು ನಿಷ್ಕ್ರಿಯಗೊಳಿಸಿದ ಅಧಿಕಾರಿ ಎಪಿಐ ಸಚಿನ್ ಗವಾಡೆಯನ್ನು ಸಾಕ್ಷಿಯಾಗಿ ಪ್ರಶ್ನಿಸಲಾಗಿಲ್ಲ. ಡಿಟೋನೇಟರ್‌ನ ನಿಖರ ಸ್ಥಿತಿ, ಅದನ್ನು ನಿಷ್ಕ್ರಿಯಗೊಳಿಸಲು ಅನುಸರಿಸಿದ ಕಾರ್ಯವಿಧಾನ ಹಾಗೂ ಶೇಷಗಳ ಸಂಗ್ರಹಣೆಯನ್ನು ವಿವರಿಸಬಹುದಾದ ಏಕೈಕ ವ್ಯಕ್ತಿ ಸಚಿನ್ ಆಗಿದ್ದರು. ಪ್ರಮುಖ ಸಾಕ್ಷಿಗಳನ್ನು ಪರಿಶೀಲಿಸದಿರುವುದು ಪ್ರತಿಕೂಲ ಊಹೆಗೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.

ಕಾಣೆಯಾದ ಇತರ ಸಾಕ್ಷಿಗಳು

2016ರಲ್ಲಿ, ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ ಮುಂದೆ ದಾಖಲಿಸಲಾದ 13 ಸಾಕ್ಷಿಗಳ ಹೇಳಿಕೆಗಳು ಕಾಣೆಯಾಗಿವೆ ಎಂದು ನ್ಯಾಯಾಲಯಕ್ಕೆ ಎನ್‌ಐಎ ತಿಳಿಸಿತು.

ಈ ದಾಖಲೆಗಳ ಆಕಸ್ಮಿಕ ಮತ್ತು ಅನುಮಾನಾಸ್ಪದ ಕಣ್ಮರೆಯು ‘ವಿಚಾರಣೆ ಮತ್ತು ಉನ್ನತ ನ್ಯಾಯಾಲಯಗಳಿಗೆ ದಾಖಲೆಗಳ ನಿರಂತರ ಸಾಗಾಟದಿಂದ ಆಗಿದೆ’ ಎಂದು ಎನ್‌ಐಎ ಸಮಜಾಯಿಷಿ ನೀಡಿತು. ಅಲ್ಲದೆ, ಮೂಲ ಪ್ರತಿಗಳು ಕಾಣೆಯಾದರೂ, ದಾಖಲೆಗಳ ಫೋಟೊಕಾಪಿಗಳನ್ನು ಬಳಸಲು ಎನ್‌ಐಎ ಅನುಮತಿ ಕೋರಿತು. ಇದಕ್ಕೆ ನ್ಯಾಯಾಲಯವು ಒಪ್ಪಿಗೆ ನೀಡಿತು. ಆದರೆ, ಈ ಅನುಮತಿಯನ್ನು ಓರ್ವ ಆರೋಪಿ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್‌, ವಿಚಾರಣಾ ನ್ಯಾಯಾಲಯದ ಸಮ್ಮತಿ ಆದೇಶಕ್ಕೆ ತಡೆನೀಡಿತು. ಫೋಟೊಕಾಪಿಗಳು ಮೂಲ ಪ್ರತಿಗಳ ನಕಲು ಎಂದು ದೃಢೀಕರಿಸಲು ಎನ್‌ಐಎಗೆ ಹೊಸ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿತು.

ಆಶ್ಚರ್ಯಕರವಾಗಿ, ಎನ್‌ಐಎ ಹೊಸ ಅರ್ಜಿಯನ್ನು ಸಲ್ಲಿಸಲೇ ಇಲ್ಲ. ಜೊತೆಗೆ, ಸಾಕ್ಷಿಗಳನ್ನು ಕೇವಲ ಸೆಕ್ಷನ್ 164ರ ಅಡಿಯಲ್ಲಿ ದಾಖಲಾದ ಹೇಳಿಕೆಗಳ ಆಧಾರದ ಮೇಲೆ ಪರಿಶೀಲಿಸಲಾಯಿತು.

ಈ 13 ಹೇಳಿಕೆಗಳು ಷಡ್ಯಂತ್ರದ ಸಭೆಗಳು, ಆರೋಪಿತ ಬಾಂಬರ್‌ಗಳ ಚಲನವಲನ ಹಾಗೂ ಪ್ರಕರಣದ ಇತರ ಪ್ರಮುಖ ಅಂಶಗಳನ್ನು ಸಾಬೀತುಪಡಿಸಲು ನಿರ್ಣಾಯಕವಾಗಿತ್ತು. ಕನಿಷ್ಠ ಎರಡು ಸಾಕ್ಷಿಗಳು ‘ಆರೋಪಿಗಳು ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳುವ ಕುರಿತು ಸಂಭಾಷಣೆ ನಡೆಸಿರುವ ಮತ್ತು ಷಡ್ಯಂತ್ರ ಸಭೆಗಳನ್ನು ನಡೆಸಿದ್ದಾರೆ’ ಎಂಬುದನ್ನು ಸಾಬೀತುಪಡಿಸಲು ಅಗತ್ಯವಾಗಿದ್ದವು.

ಪ್ರಮುಖ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುವುದು ಪ್ರಾಸಿಕ್ಯೂಷನ್‌ನ ಕರ್ತವ್ಯವಾದರೂ, ಪ್ರಾಸಿಕ್ಯೂಷನ್‌ ತನ್ನ ಕರ್ತವ್ಯವನ್ನು ಪಾಲಿಸಲಿಲ್ಲ. ಪ್ರಾಸಿಕ್ಯೂಷನ್ ಕೆಲವು ಪ್ರಮುಖ ಸಾಕ್ಷಿಗಳನ್ನು ಕೈಬಿಟ್ಟಿದ್ದಕ್ಕೆ ಅಥವಾ ಮರೆಮಾಚಿದ್ದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಆದಾಗ್ಯೂ, ಸಿಆರ್‌ಪಿಸಿಯ ಸೆಕ್ಷನ್ 311ರ ಅಡಿಯಲ್ಲಿ ನ್ಯಾಯಾಲಯವು ಪ್ರಕರಣಕ್ಕೆ ಅಗತ್ಯವೆಂದು ಭಾವಿಸುವ ಸಾಕ್ಷಿಗಳನ್ನು ಸಮನ್ಸ್‌ ನೀಡಿ ಕರೆಸಿಕೊಳ್ಳುವ ಅಧಿಕಾರವಿದೆ. ಆದರೆ, ನ್ಯಾಯಾಲಯವು ಈ ಸಾಕ್ಷಿಗಳನ್ನು ಕರೆದು ಪ್ರಶ್ನಿಸಲು ತನ್ನ ಅಧಿಕಾರವನ್ನು ಏಕೆ ಬಳಸಲಿಲ್ಲ ಎಂಬುದು ಕೂಡ ಸ್ಪಷ್ಟವಾಗಿಲ್ಲ.

ಪ್ರಾಸಿಕ್ಯೂಷನ್ ಒಟ್ಟು 323 ಸಾಕ್ಷಿಗಳನ್ನು ಪರಿಶೀಲಿಸಿದೆ. ಇದರಲ್ಲಿ 39 ಮಂದಿ ಸಾಕ್ಷಿಗಳು ಪ್ರಕರಣದಲ್ಲಿ ಆರಂಭದಲ್ಲಿ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿ ಆರೋಪಿಗಳಿಗೆ ಅನುಕೂಲವಾಗುವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಇದಕ್ಕಾಗಿ, ಪಬ್ಲಿಕ್ ಪ್ರಾಸಿಕ್ಯೂಟರ್ ರಸಾಲ್ ಅವರ ವಿರುದ್ಧ ಸುಳ್ಳು ಸಾಕ್ಷ್ಯ ರೂಪಿಸಿದ ಆರೋಪದಲ್ಲಿ ವಿಚಾರಣೆ ನಡೆಸಲಿಲ್ಲ. ತಮ್ಮ ಮೂಲ ಹೇಳಿಕೆಗಳಿಗೆ ಬದ್ಧರಾಗದ ಸಾಕ್ಷಿಗಳ ಬಗ್ಗೆ ನ್ಯಾಯಾಲಯವು ಯಾವುದೇ ಗಮನಾರ್ಹ ಟೀಕೆ-ಟಿಪ್ಪಣಿಗಳನ್ನು ಮಾಡಲಿಲ್ಲ. ಇಂತಹ ಹಲವಾರು ಗೊಂದಲಗಳು, ಪ್ರಶ್ನೆಗಳು ಇರುವಾಗಲೂ, ಅನುಮಾನಾಸ್ಪದವಾಗಿ ಸಾಕ್ಷಿಗಳ ಕಣ್ಮರೆ, ಕೈಬಿಡುವಿಕೆ ನಡೆಸಿದ್ದರೂ ಪ್ರಕರಣವನ್ನು ಮುಚ್ಚಲಾಗಿದೆ. ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X