ಸರಕಾರಿ ಸಾರಿಗೆ ನೌಕರರ ಮುಷ್ಕರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಮುಷ್ಕರದಿಂದ ಬಸ್ ಸಿಗದೇ ಗ್ರಾಮೀಣ ಭಾಗದಲ್ಲಿ ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆ ಆಗಿದೆ. ಸರಕಾರಿ ಬಸ್ಸಿಲ್ಲದೆ ಕಾಲೇಜು, ಶಾಲಾ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಗ್ಯಾರಂಟಿ ಕಾರಣಕ್ಕಾಗಿ ಗ್ರಾಮೀಣ ಭಾಗದ ಬಸ್ ಓಡಾಟವನ್ನು ಕಡಿತಗೊಳಿಸಿದ್ದಾರೆ” ಎಂದು ಆಕ್ಷೇಪಿಸಿದರು.
“ಕೆಎಸ್‍ಆರ್‌ಟಿಸಿ ಮತ್ತಿತರ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಕೊಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳ ತಿಂಗಳುಗಳಿಂದ ಆರ್ಥಿಕ ಮುಗ್ಗಟ್ಟು ಇದ್ದು, ಸಮಸ್ಯೆ ಉಲ್ಬಣವಾಗಿದೆ. ಹಾಗಾಗಿ ಅವರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ” ಎಂದು ತಿಳಿಸಿದರು.
“ಮುಖ್ಯಮಂತ್ರಿಗಳು ತಡ ಮಾಡದೇ, ತಕ್ಷಣವೇ ಕಾರ್ಮಿಕರ ಮತ್ತು ಅಧಿಕಾರಿಗಳ ಸಭೆ ಕರೆಯಬೇಕು. ಅವರ ಸಮಸ್ಯೆಗೆ ಪರಿಹಾರ ನೀಡಬೇಕು. ಜನಸಾಮಾನ್ಯರಿಗೆ ತೊಂದರೆ ಆಗುವುದನ್ನು ತಪ್ಪಿಸಬೇಕು. ಇದು ಮುಖ್ಯಮಂತ್ರಿಗಳ ಕರ್ತವ್ಯ. ಸಾರಿಗೆ ಸಚಿವರೂ ಕುಳಿತು ಸಮಸ್ಯೆಗೆ ಪರಿಹಾರ ನೀಡಬೇಕೆಂದು ಆಗ್ರಹವನ್ನು ಮುಂದಿಟ್ಟರು. ರಾಹುಲ್ ಗಾಂಧಿಯವರ ಬೆಂಗಳೂರು ಭೇಟಿ ಕಾರಣಕ್ಕಾಗಿ ಮುಖ್ಯಮಂತ್ರಿಗಳು ನಿನ್ನೆ ಸಾರಿಗೆ ನೌಕರರ ಸಭೆ ಕರೆದಿದ್ದರು” ಎಂದು ಆರೋಪಿಸಿದರು.
ಏನು ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ?
“ನಿನ್ನೆ ಸುತ್ತೋಲೆಯನ್ನೂ ಹೊರಡಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್‍ಗಳೂ ಬೇಕೆಂದು ನಿನ್ನೆ ಪತ್ರ ಬರೆದಿದ್ದಾರೆ. ಮೊದಲೇ ವ್ಯವಸ್ಥೆ ಹಾಳು ಮಾಡಲು ಹೊರಟಿದ್ದಾರೆ. ಈಗ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಸಮಸ್ಯೆ ಹುಟ್ಟಿಸಲು ಹೊರಟಿದ್ದೀರಿ? ಗಡ್ಡಕ್ಕೆ ಬೆಂಕಿ ಹತ್ತಿಕೊಂಡಾಗ ಸಮಸ್ಯೆ ಪರಿಹರಿಸಲು ಹೊರಟಿದ್ದಾರೆ. ಈಗಲೂ ಕಾಲ ಮಿಂಚಿಲ್ಲ; ಮುಷ್ಕರ ಈಗಾಗಲೇ ಪ್ರಾರಂಭವಾಗಿದೆ. ಸಂಬಂಧಿತರನ್ನು ಕರೆದು ಸಮಸ್ಯೆ ಪರಿಹರಿಸಬೇಕು” ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಸಾರಿಗೆ ನೌಕರರಿಗೆ ವೇತನ ಕೊಡಲು ಸಾಧ್ಯವಾಗದ ಪಾಪರ್ ಹಂತಕ್ಕೆ ಬಂದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
“ಇಡೀ ದೇಶವೇ ಕೋವಿಡ್ ವೇಳೆ ಆರ್ಥಿಕವಾಗಿ ತತ್ತರಿಸಿತ್ತು. ಅಂತ ಸಂದರ್ಭದಲ್ಲೂ ನಮ ಸರ್ಕಾರ ಸಾರಿಗೆ ನೌಕರರಿಗೆ ಸಂಕಷ್ಟದ ಸಂದರ್ಭದಲ್ಲೂ ಅರ್ಧ ವೇತನವನ್ನು ನೀಡಿತ್ತು. ಎಲ್ಲವೂ ಸರಿಯಾಗಿರುವಾಗ ಬೇಡಿಕೆ ಈಡೇರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು.
“ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಘೋಷಣೆ ಮಾಡಿಬಿಡಿ. ಆಗ ನಿಮನ್ನು ಯಾರೂ ಕೂಡ ಏನೂ ಕೇಳುವುದಿಲ್ಲ. ನೌಕರರ ಬೇಡಿಕೆ ಈಡೇರಿಸದಿದ್ದರೆ ಇದೊಂದು ನಾಗರಿಕ ಸರ್ಕಾರ ಎನ್ನಬೇಕೇ” ಎಂದು ಅಶೋಕ್ ತರಾಟೆಗೆ ತೆಗೆದುಕೊಂಡರು.
ಸರಕಾರಿ ಸಾರಿಗೆ ನೌಕರರ ಮುಷ್ಕರದ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು. ಕಾಂಗ್ರೆಸ್ಸಿನವರು ಮಾತು ಕೊಟ್ಟಂತೆ ನಡೆದಿಲ್ಲ. ಅಧಿಕಾರಕ್ಕೆ ಬಂದ ದಿನವೇ ಸಾರಿಗೆ ನೌಕರರ ಬಗ್ಗೆ ಆಡಿದ್ದನ್ನು ಮರೆತಿದ್ದಾರೆ. ಸಾರಿಗೆ ನೌಕರರ ವಿಚಾರದಲ್ಲಿ ನಾನೂ ಸದನದಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದೆ. ನೌಕರರ ಸಮಸ್ಯೆ ಪರಿಹರಿಸುವುದಾಗಿ ಸರಕಾರವೂ ತಿಳಿಸಿತ್ತು. ನೌಕರರ ಹಿಂಬಾಕಿಯನ್ನೂ ಕೊಡುತ್ತಿಲ್ಲ; ನಿವೃತ್ತರಿಗೂ ಗ್ರಾಚ್ಯುಟಿ ಮತ್ತಿತರ ಸೌಲಭ್ಯ ಕೊಟ್ಟಿಲ್ಲ. ಬಾಕಿ ಹಣ ಕೊಡುವಲ್ಲಿ ಸರಕಾರ ವಿಫಲವಾಗಿದೆ. ಶಕ್ತಿ ಯೋಜನೆ ಅನುಷ್ಠಾನವಾಗಿದೆ. ಬಸ್‍ಗಳು ತುಂಬಿ ತುಳುಕುತ್ತಿವೆ. ಟಿಕೆಟ್ ಹಣವನ್ನು ಪಾವತಿ ಮಾಡಿಲ್ಲವೇ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.