ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದಾದ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಸಹೋದರ ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ನಿಜವಾದ ಭಾರತೀಯ ಯಾರು ಎಂದು ನಿರ್ಧರಿಸುವುದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಿಯಾಂಕಾ ಹೇಳಿದರು.
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಜೊತೆಗೆ ನಡೆದ ಘರ್ಷಣೆಯ ಬಗ್ಗೆ ಹೇಳಿಕೆ ನೀಡಿದ್ದ, ದೇಶದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ನೀವು ನಿಜವಾದ ಭಾರತೀಯರಾಗಿದ್ದರೆ ನೀವು ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ನಿಜವಾದ ಭಾರತೀಯರಾಗಿದ್ದರೆ ಈ ಹೇಳಿಕೆ ನೀಡುತ್ತಿರಲಿಲ್ಲ: ರಾಹುಲ್ ಗಾಂಧಿ ವಿರುದ್ದ ಸುಪ್ರೀಂ ತರಾಟೆ
ಇದನ್ನು ಟೀಕಿಸಿರುವ ಪ್ರಿಯಾಂಕಾ ಗಾಂಧಿ, “ತಮ್ಮ ಸಹೋದರನಿಗೆ ಸೇನೆಯ ಬಗ್ಗೆ ಅತ್ಯುನ್ನತ ಗೌರವವಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಸರ್ಕಾರವನ್ನು ಪ್ರಶ್ನಿಸುವುದು ರಾಹುಲ್ ಗಾಂಧಿ ಅವರ ಕರ್ತವ್ಯ. ನನ್ನ ಸಹೋದರ ಎಂದಿಗೂ ಸೇನೆಯ ವಿರುದ್ಧ ಏನನ್ನೂ ಹೇಳುವುದಿಲ್ಲ. ಯೋಧರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಮಾತ್ರವಲ್ಲ ಲಡಾಖ್‌ನ ಹೋರಾಟಗಾರರು ಕೂಡಾ ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಹಲವು ಬಾರಿ ಆರೋಪಿಸಿದ್ದಾರೆ. 2020ರಿಂದ ಚೀನಾದ ಎಷ್ಟು ಭೂಮಿಯನ್ನು ವಶಪಡಿಸಿಕೊಂಡಿದೆ ಎಂಬುದನ್ನು ತೋರಿಸಲು ಹೋರಾಟಗಾರ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಚುಂಗಾತುಂಗ್ ಗಡಿ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಮೆರವಣಿಗೆಗೆ ಕರೆ ನೀಡಿದ್ದರು.
