ಮಲಿಕ್ ಅವರು ಮೂತ್ರಪಿಂಡ ಸಂಬಂಧಿತ ಕಾಯಿಲೆಗೆ ತುತ್ತಾಗಿ, 2025ರ ಫೆಬ್ರವರಿ 22ರಂದು ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾಗಲೇ, ಅವರ ನಿವಾಸ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತ್ತು.
ಸತ್ಯಪಾಲ್ ಮಲಿಕ್ – ಧೈರ್ಯ, ಸತ್ಯನಿಷ್ಠೆ ಹಾಗೂ ಸಾಮಾಜಿಕ ನ್ಯಾಯದ ಬದ್ಧತೆಗೆ ಹೆಸರಾಗಿದ್ದ ಪ್ರಬುದ್ಧ ರಾಜಕಾರಣಿ. ತಮ್ಮ ದೀರ್ಘಾವಧಿಯ ರಾಜಕೀಯದಲ್ಲಿ ಸಾಮಾಜಿಕ ಸೇವೆ, ರೈತ ಹೋರಾಟ ಹಾಗೂ ಸೂಕ್ಷ್ಮ ಸಂದರ್ಭಗಳಲ್ಲಿ ಆಡಳಿತ ನಿರ್ವಹಣೆಯಿಂದ ಹೆಸರಾದವರು. ಕೋಮುವಾದಿ ಅಲ್ಲದಿದ್ದರೂ, ಬಿಜೆಪಿಯಲ್ಲಿ ಪ್ರಮುಖ ಹುದ್ದೆಯಲ್ಲಿ ಇದ್ದವರು. ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕಿಳಿದು, ತಮ್ಮ ಕೊನೆಯ ದಿನಗಳಲ್ಲೂ ಸಂಕಷ್ಟ-ಸಂಘರ್ಷಗಳನ್ನು ಎದುರಿಸಿದವರು. ಮೋದಿ ಆಡಳಿತವನ್ನು ದಿಟ್ಟವಾಗಿ ಪ್ರಶ್ನಿಸಿ, ಬಯಲಿಗೆಳೆದವರು.
ಶಾಸಕರಾಗಿ, ಸಂಸದರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಸತ್ಯಪಾಲ್ ಮಲಿಕ್ ಆಗಸ್ಟ್ 5 (ಮಂಗಳವಾರ) ಕೊನೆಯುಸಿರೆಳೆದಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಸೇವೆ, ಚಿಂತನೆ, ಹೋರಾಟಯನ್ನು ಬಿಟ್ಟು ಅಗಲಿದ್ದಾರೆ.
ಮಲಿಕ್ ಅವರು ಮೂಲತಃ ಉತ್ತರ ಪ್ರದೇಶದವರು, ರೈತ ಕುಟುಂಬದಿಂದ ಬಂದವರು. 1946ರ ಜುಲೈ 24ರಂದು, ಬಾಗ್‌ಪತ್ ಜಿಲ್ಲೆಯ ಹಿಸಾವ್ದ ಗ್ರಾಮದಲ್ಲಿ ಜನಿಸಿದರು. ರಾಜ್ಯಶಾಸ್ತ್ರ ವಿಷಯದಲ್ಲಿ ಆಸಕ್ತಿ ಹೊಂದಿದ್ದ ಅವರು ಮೀರತ್‌ನಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು. ವಿದ್ಯಾರ್ಥಿ ಆಗಿದ್ದಾಗಲೇ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಅವರು, ಸಮಾಜವಾದಿ ಚಿಂತನೆಯಿಂದ ಪ್ರೇರಿತರಾಗಿದ್ದರು. 1970ರ ದಶಕದಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದರು. ರೈತ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು.
ರೈತ ನಾಯಕ, ಮಾಜಿ ಪ್ರಧಾನಿ ಚರಣ್ ಸಿಂಗ್ ಅವರು ಸ್ಥಾಪಿಸಿದ್ದ ‘ಭಾರತೀಯ ಕ್ರಾಂತಿ ದಳ’ (ಬಿಕೆಡಿ) ಮೂಲಕ ರಾಜಕೀಯ ಆರಂಭಿಸಿದ ಸತ್ಯಪಾಲ್ ಮಲಿಕ್, ರಾಜಕೀಯಕ್ಕೆ ದುಮುಕಿದ ನಾಲ್ಕೇ ವರ್ಷಗಳಲ್ಲಿ, 1974ರಲ್ಲಿ ಬಾಗ್‌ಪತ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಯುವ ಶಾಸಕರಾಗಿದ್ದ ಮಲಿಕ್, ತಮ್ಮ ಬಾಗ್‌ಪತ್ ಕ್ಷೇತ್ರದಲ್ಲಿ ಕೃಷಿ, ನೀರಾವರಿ, ಕೃಷಿ ಸಾಲ, ಬೆಲೆಗಳಿಗೆ ನ್ಯಾಯಯುತ ಬೆಲೆ ಹಾಗೂ ಗ್ರಾಮೀಣಾಭಿವೃದ್ಧಿ-ಮೂಲಸೌಕರ್ಯಗಳಿಗಾಗಿ ಶ್ರಮಿಸಿದ್ದರು. ವಿಧಾನಸಭೆಯಲ್ಲಿ ಭೂಸುಧಾರಣೆಗಾಗಿ ಮತ್ತು ಜಮೀನ್ದಾರಿಕೆ ವಿರುದ್ಧ ಸಕ್ರಿಯವಾಗಿ ದನಿ ಎತ್ತಿದ್ದರು. ರೈತ ಸಂಘಟನೆಗಳನ್ನು ಬಲಪಡಿಸುವ ಮೂಲಕ ಸ್ಥಳೀಯ ನಾಯಕತ್ವವನ್ನು ಉತ್ತೇಜಿಸಿದ್ದರು. ಯುವಜನರಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸಿದ್ದರು.
ಕೇಂದ್ರ ರಾಜಕಾರಣದಲ್ಲಿ ಸಕ್ರಿಯರಾದ ಮಲಿಕ್, 1980 ಮತ್ತು 1986ರಲ್ಲಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿ, ಸೇವೆ ಸಲ್ಲಿಸಿದ್ದರು. 1989ರಲ್ಲಿ ಬಿಕೆಡಿ ತೊರೆದು ಜನತಾ ದಳ ಸೇರಿದ ಮಲಿಕ್, 1989ರ ಲೋಕಸಭಾ ಚುನಾವಣೆಯಲ್ಲಿ ಅಲಿಘರ್ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆದ್ದರು. ಆ ನಂತರ, ಸಮಾಜವಾದಿ ಪಕ್ಷ ಸೇರಿದ ಮಲಿಕ್, 1996ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲುಂಡರು. ಅಲ್ಲಿಂದ ಮುಂದಿನ ದಿನಗಳಲ್ಲಿ ಚುನಾವಣೆಗಳಿಂದ ದೂರ ಉಳಿದರು. ಆದಾಗ್ಯೂ, ಸಮಾಜವಾದಿ ಪಕ್ಷದಲ್ಲಿ ಸಕ್ರಿಯರಾಗಿದ್ದರು. 2004ರಲ್ಲಿ ಎಸ್‌ಪಿ ತೊರೆದು ಬಿಜೆಪಿ ಸೇರಿದರು. 2009ರಿಂದ 2012ರವರೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿ, ಪಕ್ಷವನ್ನು ಮುನ್ನಡೆಸಿದ್ದರು.
ಅವರಿಗೆ 2017ರಲ್ಲಿ ಬಿಜೆಪಿ ರಾಜ್ಯಪಾಲ ಹುದ್ದೆಯನ್ನು ಕರುಣಿಸಿತು. 2017ರಿಂದ 18ವರೆಗೆ ಅವರು ಬಿಹಾರದ ರಾಜ್ಯಪಾಲರಾಗಿದ್ದರು. ಜೊತೆಗೆ, ಒಡಿಶಾ ರಾಜ್ಯಪಾಲರ ಜವಾಬ್ದಾರಿಯನ್ನೂ ನಿರ್ವಹಿಸಿದರು. ಬಳಿಕ, 2018ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯಪಾಲರಾಗಿ ನೇಮಕಗೊಂಡರು. ಅವರು ಜಮ್ಮು-ಕಾಶ್ಮೀರ ರಾಜ್ಯಪಾಲರಾಗಿದ್ದ ಸಮಯದಲ್ಲಿಯೇ, 2019ರ ಫೆಬ್ರವರಿ 14ರಂದು ಪುಲ್ವಾಮ ದಾಳಿ ನಡೆಯಿತು. (ಈ ದಾಳಿಯು ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಸರಾಗವಾಗಿ ಅಧಿಕಾರಕ್ಕೇರಲು ನೆರವಾಯಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.) 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು (370ನೇ ವಿಧಿ) ಕೇಂದ್ರ ಸರ್ಕಾರ ರದ್ದುಗೊಳಿಸಿತು. ಈ ಸಂದರ್ಭದಲ್ಲಿ, ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶವನ್ನು ನಿಭಾಯಿಸುವಲ್ಲಿ ಮತ್ತು ಆಡಳಿತದಲ್ಲಿ ಸ್ಥಿರತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇಂದ್ರ ಸರ್ಕಾರದ ವಿರುದ್ಧದ ಜನಾಕ್ರೋಶವನ್ನು ಶಮನ ಮಾಡಲು ಯತ್ನಿಸಿದರು.
ಬಳಿಕ, 2019-2020ರಲ್ಲಿ ಗೋವಾ ರಾಜ್ಯಪಾಲರಾಗಿ ಮತ್ತು 2020-2022ರ ನಡುವೆ ಮೇಘಾಲಯದ 19ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಈ ನಡುವೆ, 2020-21ರಲ್ಲಿ ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತ ಹೋರಾಟವನ್ನು ಮಲಿಕ್ ಬೆಂಬಲಿಸಿದರು. ಆ ಕಾರಣಕ್ಕಾಗಿ, ಅವರು ಮೇಘಾಲಯ ನಂತರ ರಾಜ್ಯಪಾಲ ಹುದ್ದೆಯನ್ನು ಕಳೆದುಕೊಂಡರು. ರಾಜಕೀಯದಿಂದ ದೂರ ಉಳಿದರು. ಆದರೂ, ಸಕ್ರಿಯರಾಗಿದ್ದ ಮಲಿಕ್, ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ನಡೆದ ಪ್ರತಿಭಟನೆಗಳನ್ನು ಬೆಂಬಲಿಸಿದ್ದರು.
2023ರ ಏಪ್ರಿಲ್‌ನಲ್ಲಿ ಖಾಸಗಿ ಸುದ್ದಿವಾಹಿನಿವೊಂದಕ್ಕೆ ಸಂದರ್ಶನ ನೀಡಿದ್ದ ಸತ್ಯಪಾಲ್ ಮಲಿಕ್, 2019ರ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
“ಪುಲ್ವಾಮ ದಾಳಿಯು ಸರ್ಕಾರದ ನಿರ್ಲಕ್ಷ್ಯ ಮತ್ತು ಸುರಕ್ಷಾ ವೈಫಲ್ಯದ ಫಲಿತಾಂಶವಾಗಿದೆ. ದಾಳಿಗೆ ಬಳಸಲಾದ 300 ಕೆ.ಜಿ RDX ಬಾಂಬ್‌ಅನ್ನು ಹೊತ್ತ ಕಾರು 10–15 ದಿನಗಳ ಕಾಲ ಕಾಶ್ಮೀರದ ರಸ್ತೆಗಳಲ್ಲಿಯೇ ಸಂಚರಿಸುತ್ತಿತ್ತು. ಆದರೆ ಯಾವುದೇ ಗುಪ್ತಚರ ಸಂಸ್ಥೆ ಅಥವಾ ಭದ್ರತಾ ಪಡೆಗಳು ಇದನ್ನು ಪತ್ತೆಹಚ್ಚಲಿಲ್ಲ. ಸಿಆರ್‌ಪಿಎಫ್ ಯೋಧರ ಪ್ರಯಾಣಕ್ಕೆ ವಿಮಾನ ಒದಗಿಸುವಂತೆ ಕೇಂದ್ರ ಗೃಹಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ನಿರಾಕರಿಸಿತು. ಪರಿಣಾಮವಾಗಿ, ಯೋಧರು ಭದ್ರತೆ ಇಲ್ಲದ ರಸ್ತೆಯಲ್ಲಿ ಪ್ರಯಾಣಿಸಬೇಕಾಯಿತು. ಇದರಿಂದ 40 ಯೋಧರು ಜೀವ ಕಳೆದುಕೊಂಡರು” ಎಂದು ಆರೋಪಿಸಿದ್ದರು.
ಅಲ್ಲದೆ, “ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಭದ್ರತಾ ವೈಫಲ್ಯವನ್ನು ಮರೆಮಾಚಿ, ದಾಳಿಯ ಸಂಪೂರ್ಣ ಹೊಣೆಗಾರಿಕೆಯನ್ನು ಪಾಕಿಸ್ತಾನದ ಮೇಲೆ ಹಾಕುವುದು ಇದರ ಉದ್ದೇಶವಾಗಿತ್ತು” ಎಂದು ಮಲಿಕ್ ಆರೋಪಿಸಿದ್ದರು. ಜೊತೆಗೆ, ಪುಲ್ವಾಮ ದಾಳಿಯ ಸಂದರ್ಭದಲ್ಲಿ ನಡೆದ ಗುಪ್ತಚರ ವೈಫಲ್ಯಗಳು ಮತ್ತು ಆಡಳಿತಾತ್ಮಕ ಲೋಪಗಳ ಬಗ್ಗೆ ಸತ್ಯವನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರವು ಶ್ವೇತಪತ್ರವನ್ನು ಹೊರಡಿಸಬೇಕೆಂದು ಆಗ್ರಹಿಸಿದ್ದರು.
ಪುಲ್ವಾಮ ದಾಳಿ ವಿಚಾರವಾಗಿ, ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಕ್ಕಾಗಿ ಮಲಿಕ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದರು. ಸರ್ಕಾರದ ‘ಪಂಜರದ ಗಿಳಿ’ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಸಿಬಿಐ, 2024ರಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮಲಿಕ್ ಅವರ ಮನೆಗೆ ಮೇಲೆ ದಾಳಿ ನಡೆಸಿತು.
ಈ ಲೇಖನ ಓದಿದ್ದೀರಾ?: ಸತ್ಯ ಹೇಳಿದ್ದಕ್ಕೆ ಸಂಕಷ್ಟ: ಭ್ರಷ್ಟಾಚಾರ ಬಯಲು ಮಾಡಿದ ‘ಮಲಿಕ್’ ವಿರುದ್ಧವೇ ಮೋದಿ ಸರ್ಕಾರ ದಾಳಿ?
ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ, 2019ರಲ್ಲಿ, ಕಿಶ್ತ್ವಾರ್ ಜಿಲ್ಲೆಯಲ್ಲಿ ಹರಿಯುವ ಚೆನಾಬ್ ನದಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಗುತ್ತಿಗೆಯನ್ನು ‘ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್’ಗೆ (ಸಿವಿಪಿಪಿಪಿಎಲ್) ನೀಡುವಲ್ಲಿ ಮತ್ತು ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ. ಯೋಜನೆಯ ಸಿವಿಲ್ ಕೆಲಸಗಳಿಗಾಗಿ ಖಾಸಗಿ ಕಂಪನಿಗೆ 2,200 ಕೋಟಿ ರೂ.ಗಳ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ. ಈ ಯೋಜನೆಯ ಎರಡು ಕಡತಗಳಿಗೆ ಸಹಿ ಹಾಕಲು ಮಲಿಕ್ 300 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ನಡುವೆ, ಮಲಿಕ್ ಅವರು ಮೂತ್ರಪಿಂಡ ಸಂಬಂಧಿತ ಕಾಯಿಲೆಗೂ ತುತ್ತಾಗಿದ್ದರು. 2025ರ ಫೆಬ್ರವರಿ 22ರಂದು ಮಲಿಕ್ ಅವರು ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾಗಲೇ, ಅವರ ನಿವಾಸಗಳು ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತ್ತು.
ಆ ದಾಳಿಗೆ ಆಸ್ಪತ್ರೆಯಲ್ಲಿದ್ದುಕೊಂಡೇ ಪ್ರತಿಕ್ರಿಯಿಸಿದ್ದ ಮಲಿಕ್, “ನನ್ನ ಸ್ಥಿತಿ ತುಂಬಾ ಗಂಭೀರವಾಗುತ್ತಿದೆ. ನಾನು ಬದುಕುಳಿಯುವೆನೋ ಅಥವಾ ಇಲ್ಲವೋ, ನನ್ನ ದೇಶದ ಒಡನಾಡಿಗಳಿಗೆ ಸತ್ಯವನ್ನು ಹೇಳಲು ಬಯಸುತ್ತೇನೆ – ನಾನು ರಾಜ್ಯಪಾಲನಾಗಿದ್ದಾಗ, ನನಗೆ 150 ರೂಪಾಯಿಯಿಂದ 150 ಕೋಟಿ ರೂ.ವರೆಗೆ ಲಂಚ ನೀಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ನಾನು ನನ್ನ ರಾಜಕೀಯ ಮಾರ್ಗದರ್ಶಕ, ದಿವಂಗತ ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಹಾದಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನನ್ನ ಬದ್ಧತೆಯನ್ನು ಎಂದಿಗೂ ಅಲುಗಾಡಿಸಲು ಸಾಧ್ಯವಿಲ್ಲ. ನನ್ನ 50ಕ್ಕೂ ಹೆಚ್ಚು ವರ್ಷಗಳ ರಾಜಕೀಯ ಜೀವನದಲ್ಲಿ ಉನ್ನತ ಹುದ್ದೆಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದೇನೆ. ಹೀಗಿದ್ದರೂ, ನಾನು ಇನ್ನೂ ಒಂದೇ ರೂಮ್ ಇರುವ ಪುಟ್ಟ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ. ಸಾಲದ ಹೊರೆಯೂ ಇದೆ. ಇಂದು ನನ್ನ ಬಳಿ ಸಂಪತ್ತು ಇದ್ದಿದ್ದರೆ, ನಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿರಲಿಲ್ಲ” ಎಂದು ಹೇಳಿದ್ದರು
ಅಂದಿನಿಂದಲೂ ಆರೋಗ್ಯದಲ್ಲಿ ಸಂಪೂರ್ಣವಾಗಿ ಚೇತರಿಕೆ ಕಾಣದ ಮಲಿಕ್ ಅವರು ಆಗಸ್ಟ್ 5ರಂದು ಕೊನೆಯುಸಿರೆಳೆದಿದ್ದಾರೆ. ಕಡೆಯ ದಿನಗಳಲ್ಲಿಯೂ ಕೇಂದ್ರ ಸರ್ಕಾರದ ದ್ವೇಷಪೂರಿತ ದಾಳಿ, ಹಿಂಸೆ, ದಮನ, ನೋವನ್ನು ಅನುಭವಿಸಿ, ತಮ್ಮ ಜೀವನ ಪ್ರಯಾಣ ಮುಗಿಸಿದ್ದಾರೆ.