ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಶಿವಗಂಗ ಗ್ರಾಮಕ್ಕೆ ಸರ್ಕಾರವು ಐದು ಎಕರೆ ಮೂವತ್ತ್ಮೂರು ಗುಂಟೆ ಗೋಮಾಳ ಜಾಗವನ್ನು ಸಾರ್ವಜನಿಕ ಸ್ಮಶಾನ ಭೂಮಿಗೆಂದು ಮೀಸಲಿರಿಸಿದೆ. ಆದರೆ, ಈ ಸ್ಮಶಾನ ಜಾಗವನ್ನು ಮೇಲ್ವರ್ಗದ ಪ್ರಭಾವಿಗಳು ಸುಮಾರು ಮೂರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಒತ್ತುವರಿಯಾಗಿದ್ದರೂ, ಅಧಿಕಾರಿಗಳು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಇದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಶಿವಗಂಗ ಗ್ರಾಮದ ಎರಡರಿಂದ ಮೂರು ಎಕರೆಯಷ್ಟು ಒತ್ತುವರಿ ಮಾಡಿಕೊಂಡ ಸ್ಮಶಾನದ ಜಾಗದಲ್ಲಿ ಅಡಿಕೆ ಬೆಳೆದಿದ್ದಾರೆ. ಅದನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರಭಾವಿಗಳಿಗೆ ನೋಟಿಸ್ ನೀಡಿ ಕೈತೊಳೆದುಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಸಾರ್ವಜನಿಕರ ಉದ್ದೇಶಕ್ಕಾಗಿ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ.
“ಒತ್ತುವರಿಯಾಗಿರುವ ಗ್ರಾಮದ ಸ್ಮಶಾನ ಹದ್ದುಬಸ್ತು ಮಾಡಿ ಒತ್ತುವರಿ ತೆರವು ಮಾಡಬೇಕು. ಸ್ಮಶಾನಕ್ಕೆ ಮೀಸಲಿಟ್ಟ ಜಾಗ ಒತ್ತುವರಿಯಾಗಿ ಬಹಳ ವರ್ಷಗಳಿಂದ ಪ್ರಭಾವಿಗಳು ತೋಟ ಬೆಳೆಸಿದ್ದು, ಮುಂದಿನ ದಿನಗಳಲ್ಲಿ ಅಂತ್ಯಸಂಸ್ಕಾರ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಕೂಡಲೇ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ” ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ಒತ್ತಾಯಿಸಿದ್ದಾರೆ.

“ಶಿವಗಂಗ ಗ್ರಾಮದ ಸರ್ವೆ ನಂ. 75ರಲ್ಲಿ 5 ಎಕರೆ 33 ಗುಂಟೆ 1 ಎಕರೆ ಖರಾಬು ಸೇರಿದಂತೆ 6 ಎಕರೆ 33 ಗುಂಟೆ ಜಮೀನು 2001-02ರಲ್ಲಿ ಸ್ಮಶಾನಕ್ಕೆಂದು ಖಾತೆ ಮಾಡಿ ಮೀಸಲಿರಿಸಲಾಗಿದೆ. ಸ್ಮಶಾನಕ್ಕೆ ಮಂಜೂರಾದ ಜಮೀನಿನಲ್ಲಿ ಒತ್ತುವರಿಯಾಗಿದೆ. 2020ರಲ್ಲಿ ಒತ್ತುವರಿ ತೆರವಿಗೆ ಗ್ರಾಮ ಪಂಚಾಯಿತಿ ನೋಟಿಸ್ ಜಾರಿಗೊಳಿಸಿದರೂ ಒತ್ತುವರಿ ಜಾಗದಲ್ಲಿ ಅಡಕೆ ತೋಟ ಬೆಳೆಸಿದ್ದು ಅವರ ಮೇಲೆ ತಾಲೂಕು ಆಡಳಿತ, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕೃತವಾಗಿ ದಾಖಲೆಗಳಲ್ಲಿ ಸ್ಮಶಾನ ಎಂದು ನಮೂದಿಸಿ ಮೀಸಲಿರಿಸಿ 25 ವರ್ಷಗಳಾದರೂ ಒತ್ತುವರಿ ತೆರವಾಗದಿರುವುದು ಅತ್ಯಾಶ್ಚರ್ಯ ಎನಿಸುತ್ತದೆ” ಎಂದು ಗ್ರಾಮದ ಹಿರಿಯರು ಅಸಮಾಧಾನ ವ್ಯಕ್ತಪಡಿಸಿದರು.
“ಹಲವಾರು ಬಾರಿ ಒತ್ತುವರಿ ತೆರವಿಗೆ ಮನವಿ ಮಾಡಿದರೂ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಡಳಿತ ಕ್ರಮಕೈಗೊಳ್ಳದೇ ಸಾಗುವಳಿಗೆ ಅವಕಾಶ ಕಲ್ಪಿಸಲಾಗಿದೆ. ಇದನ್ನು ನೋಡಿದರೆ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಮೂಡುತ್ತದೆ. ಜನರ ಒತ್ತಾಯದ ಮೇರೆಗೆ ನೋಟೀಸ್ ಜಾರಿ ಮಾಡಿ, ಒಮ್ಮೆ ತಾಲೂಕಿನ ಭೂಮಾಪನ ಇಲಾಖೆಯ ಅಧಿಕಾರಿಗಳು ಅಳತೆ ಮಾಡಿ ಒತ್ತುವರಿ ಜಾಗ ಗುರುತಿಸಿ ಕಲ್ಲು ಹಾಕಲಾಗಿದ್ದರೂ, ಸ್ಪಷ್ಟವಾಗಿ ಒತ್ತುವರಿ ಗುರುತಿಸಿದ್ದರೂ ಒತ್ತುವರಿ ತೆರವುಗೊಳಿಸಲು ವಿಫಲರಾಗಿದ್ದಾರೆ. ಇಡೀ ಗ್ರಾಮಸ್ಥರು ಒತ್ತುವರಿ ವಿರೋಧಿಸಿ ತೆರವಿಗೆ ಒತ್ತಾಯಿಸಿದರೂ ರಾಜಕೀಯ ಪ್ರಾಬಲ್ಯ ಹೊಂದಿರುವ ಅವರು ಒತ್ತುವರಿ ಜಾಗ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಕೂಡ ಸುಮ್ಮನೆ ಕೈಕಟ್ಟಿ ಕುಳಿತಿದ್ದಾರೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ಮಶಾನಕ್ಕೆ ಗುರುತಿಸಿರುವ ಸರ್ವೇ ನಂಬರ್ 75 ರಲ್ಲಿ ಗ್ರಾಮ ಪಂಚಾಯಿತಿಯವರು ಅಲ್ಪಸ್ವಲ್ಪ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಕಾಮಗಾರಿ ವಿವರ ಬರಹ, ನಾಮಫಲಕ ಅಳವಡಿಸಿದ್ದಾರೆ. ಪಕ್ಕದ ಪ್ರಭಾವಿ ಸವರ್ಣೀಯರು ಒತ್ತುವರಿ ಮಾಡಿಕೊಂಡಿದ್ದ ಕಾರಣ ಗ್ರಾಮಸ್ಥರು ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಬಹುತೇಕ ಅರ್ಧ ಅತಿಕ್ರಮಣವಾಗಿರುವ ಸ್ಮಶಾನ ಮುಂದಿನ ದಿನಗಳಲ್ಲಿ ಸಂಪೂರ್ಣ ಒತ್ತುವರಿಯಾದರೆ ಹೇಗೆ ಎನ್ನುವ ಪ್ರಶ್ನೆ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಸ್ಮಶಾನದ ಒತ್ತುವರಿಗೆ ಸಂಬಂಧಿಸಿದಂತೆ ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯೆ ನೀಡಿದ ಶಿವಗಂಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ್, “ಸರ್ವೆ ನಂಬರ್ 75ರಲ್ಲಿ 5 ಎಕರೆ 33 ಗಂಟೆ ಸ್ಮಶಾನಕ್ಕೆ ಮೀಸಲಿರಿಸಿದ್ದು, ಸಾಕಷ್ಟು ವರ್ಷಗಳಿಂದಲೂ ಒತ್ತುವರಿದಾರರು ಅಡಿಕೆ ಗಿಡಗಳನ್ನು ಬೆಳೆಸಿ ತೋಟ ಮಾಡಿಕೊಂಡಿದ್ದಾರೆ. ಈಗಾಗಲೇ ಅವರಿಗೆ ಸ್ಮಶಾನದ ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿದ್ದು, ಆದರೂ ಕೂಡ ತೆರವುಗೊಳಿಸಿಲ್ಲ. ಮುಂದಿನ ಕ್ರಮಕ್ಕಾಗಿ ತಾಲೂಕು ತಹಶೀಲ್ದಾರ್ ಅವರಿಗೆ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಒತ್ತುವರಿಯನ್ನು ತೆರವುಗೊಳಿಸುವ ಅಧಿಕಾರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ತಹಶೀಲ್ದಾರ್ ರವರಿಗೆ ಇರುತ್ತದೆ. ಹಾಗಾಗಿ ಅವರಿಗೆ ವರದಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ
ಸರ್ಕಾರ ಸ್ಮಶಾನಕ್ಕೆ ಮೀಸಲಿರಿಸಿದ ಜಾಗದ ತೆರವಿಗೆ ಹಲವು ಬಾರಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿದರೂ ಅಲ್ಲಿಯೇ ಒತ್ತುವರಿ ಮುಂದುವರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅದಾವ ಅಧಿಕಾರಿಗಳ ಅಥವಾ ರಾಜಕೀಯ ಪ್ರಭಾವಿಗಳ ಬೆಂಬಲ ಇವರ ಹಿಂದಿದೆ? ಎನ್ನುವ ಪ್ರಶ್ನೆ ಮೂಡುತ್ತದೆ. ಸಾಮಾನ್ಯ ರೈತನೊಬ್ಬನ ಸಣ್ಣ ಸಣ್ಣ ಹಿಡುವಳಿಗಳನ್ನು ದಬ್ಬಾಳಿಕೆಯಿಂದ ತೆರವುಗೊಳಿಸುವ ಅಧಿಕಾರಿಗಳು, ಸರ್ಕಾರದ ಸ್ಮಶಾನದ ಜಾಗವನ್ನೇ ಒತ್ತುವರಿ ಮಾಡಿಕೊಂಡಿರುವವರ ಬಗ್ಗೆ ಕ್ರಮ ಕೈಗೊಳ್ಳದಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇವುಗಳಿಗೆ ಉತ್ತರ ಕಂಡುಕೊಳ್ಳಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವ ಬಗ್ಗೆ ಶಿವಗಂಗ ಗ್ರಾಮಸ್ಥರಿಗೆ ಉತ್ತರಿಸಬೇಕಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು