ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಎನ್.ಪುರ ತಾಲೂಕಿನಲ್ಲಿ ಕಳೆದ ಆರು ತಿಂಗಳಿನಿಂದ ಬೀಡುಬಿಟ್ಟು ರೈತರ ಹೊಲಗದ್ದೆಗಳಿಗೆ ಘೀಳಿಟ್ಟು ಬೆಳೆ ಹಾನಿಮಾಡುತ್ತಿದ್ದ ಪುಂಡಾನೆಯನ್ನು ನಿನ್ನೆ ಸೆರೆ ಹಿಡಿಯಲಾಗಿದೆ. ಕಳೆದ ವಾರದ ಹಿಂದೆ ಇದೇ ಭಾಗದಲ್ಲಿ ಒಂದು ಕಾಡಾನೆಯನ್ನು ಸೆರೆಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ ಸಕ್ರೆಬೈಲು ಬಿಡಾರದಿಂದ ನಾಲ್ಕು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಕಾಡಾನೆ ಸೆರೆಹಿಡಿದ ನಂತರ ಕುಮ್ಕಿ ಆನೆಗಳು ಬಿಡಾರಕ್ಕೆ ವಾಪಸ್ಸಾಗಿದ್ದವು.
ಇದರ ಬೆನ್ನಲ್ಲೇ ಮತ್ತೆ ಕುಪ್ಪೂರು ಮಡಬೂರು ಬಳಿ ಕಾಡಾನೆ ಉಪಟಳ ನೀಡುತ್ತಿದ್ದರಿಂದ ಮಲೆನಾಡಿನ ಜನತೆ ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದಿದ್ದರು.ಆ ಭಾಗದಲ್ಲಿ ಕಾಡಾನೆ ದಾಳಿಗೆ ಮೂವರು ಬಲಿಯಾಗಿದ್ದಲ್ಲದೆ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಾಡಾನೆ ಸೆರೆಗೆ ಸ್ಥಳೀಯರು ಪಟ್ಟು ಹಿಡಿದು ಎನ್.ಪುರ ಖಾಂಡ್ಯ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಕಾಡಾನೆ ಸೆರೆಗೆ ಅನುಮತಿ ನೀಡಿತು. ಕಳೆದ ವಾರ ಇದೇ ಭಾಗದಲ್ಲಿ ಒಂದು ಕಾಡಾನೆ ಸೆರೆಯಾಗಿತ್ತು. ಇದಾದ ಬಳಿಕ 04-08-25 ರಂದು ಮಡಬೂರು ಮತ್ತು ಕುಪ್ಪೂರು ಬಳಿಯಿದ್ದ ಕಾಡಾನೆಯನ್ನು ಸೆರೆಹಿಡಿಯಲಾಯಿತು. ಕಳೆದ 6 ತಿಂಗಳಿಂದ ಮಡಬೂರು, ಕುಪ್ಪೂರು ಸೇರಿ ಸುತ್ತಮುತ್ತ ಕೃಷಿ ಭೂಮಿ ಹಾನಿಮಾಡಿದ್ದ ಪುಂಡಾನೆ ಸೆರೆಗೆ ಜನರಿಂದ ಭಾರಿ ಒತ್ತಡವಿತ್ತು.
ಡಿ.ಎಫ್.ಓ ಶಿವಶಂಕರ್, ಆರ್.ಎಫ್.ಓ. ಪ್ರವೀಣ್, ಸಕ್ರೆಬೈಲು ವೈದ್ಯ ಮುರುಳಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಮಾವುತ ಕಾವಾಡಿ ಟ್ರಾಕರ್ ಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.