ರಾಜ್ಯದಲ್ಲಿ ಎಸ್ಮಾ ಜಾರಿಗೊಂಡರೂ ಆದೇಶ ಧಿಕ್ಕರಿಸಿ ಮುಷ್ಕರ ಮಾಡುತ್ತಿರುವ ಸಾರಿಗೆ ನೌಕರರನ್ನು ಬಂಧಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಬೆನ್ನಲ್ಲಿಯೇ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಖಂಡ ಅನಂತ ಸುಬ್ಬರಾವ್ ಅವರು ಸಾರಿಗೆ ನೌಕರರಿಗೆ ಮುಷ್ಕರ ಮೊಟಕುಗೊಳಿಸಿದ್ದಾಗಿ ತಿಳಿಸಿದ್ದಾರೆ. ಜೊತೆಗೆ, ಎಲ್ಲ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದು, ಮುಂದಿನ ಹೋರಾಟದ ದಿನಾಂಕ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ವೇತನ ಪರಿಷ್ಕರಣೆ ಮತ್ತು ಹಿಂಬಾಕಿ ಪಾವತಿ ಒಳಗೊಂಡಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ಕೊಟ್ಟಿತ್ತು. ಹೈಕೋರ್ಟ್ ನಿರ್ದೇಶನದ ನಡುವೆಯೂ ಮುಷ್ಕರ ನಡೆದಿದೆ. ಮುಷ್ಕರಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠಿದಂದ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಅವರು, “ರಾಜಿ ಸಂಧಾನದ ಮಾತುಕತೆ ಏನಾಗಿದೆ’ ಎಂದು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ದೀಕ್ಷಾ ಎನ್.ಅಮೃತೇಶ್, ‘ಮಂಗಳವಾರ (ಆ.5) ನಡೆಸಬೇಕಿದ್ದ ಉದ್ದೇಶಿತ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿ. ಸರ್ಕಾರದ ಜೊತೆಗಿನ ಮಾತುಕತೆಯ ಫಲಶೃತಿ ಗಮನಿಸಿ ಮುಂದುವರೆಯಬಹುದು ಎಂದು ಹೈಕೋರ್ಟ್ ನಿನ್ನೆಯಷ್ಟೇ ಮುಷ್ಕರ ನಿರತ ಸಂಘಟನೆಗೆ ನಿರ್ದೇಶನ ನೀಡಿತ್ತು. ಆದರೆ, ಇದನ್ನು ಲೆಕ್ಕಿಸದೆ ಮುಷ್ಕರ ಮುಂದುವರೆಸಲಾಗಿದೆ” ಎಂದು ಆರೋಪಿಸಿದರು.
“ಮುಷ್ಕರ ಸ್ಥಗಿತಗೊಂಡಿದೆ ಎಂಬ ಬಗ್ಗೆ ನಾಳೆ ಮಾಹಿತಿ ನೀಡಬೇಕು. ಇಲ್ಲವಾದರೆ, ನಾಳೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು. ಸಾರಿಗೆ ಸಂಘಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು. ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರು ಬಳಲುವಂತೆ ಮಾಡುವುದನ್ನು ಸಹಿಸುವುದಿಲ್ಲ” ಎಂದು ಎಚ್ಚರಿಸಿದರು.
ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಿ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಿದರು.