ಗಾಂಜಾ ಸೊಪ್ಪು ಸೇವನೆ ಮತ್ತು ಮಾರಾಟ ಮಾಡಿದ ಆರೋಪದಡಿ ಮೂವರು ಯುವಕರನ್ನು ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ತುರುವೇಕೆರೆ ಪಟ್ಟಣದ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ (21), ತಿಪಟೂರು ಟೌನ್ ನಿವಾಸಿ ಪಿ.ರಾಕೇಶ್ (25), ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರು ಹೆಬ್ಬಾಳದ ಸುಮಂಗಲಿ ಸೇವಾಶ್ರಮದ ನಿವಾಸಿ ಆರ್. ತ್ರಿನೇಶ್ (22) ಎಂದು ಹೇಳಲಾಗಿದೆ.
ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರ ಫ್ಯಾಕ್ಟರಿಯ ಬಳಿ ಇರುವ ನೀಲಗಿರಿ ತೋಪಿನಲ್ಲಿ ಆರೋಪಿ ಅಭಿಷೇಕ್ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ತುರುವೇಕೆರೆ ಸಿಪಿಐ ಲೋಹಿತ್ ಮತ್ತು ದಂಡಿನಶಿವರ ಪಿಎಸ್ಐ ಕೆ.ವಿ.ಮೂರ್ತಿ ನೇತೃತ್ವದ ಪೊಲೀಸ್ ತಂಡ ಆರೋಪಿ ಅಭಿಷೇಕ್ ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವನಲ್ಲಿ ಸುಮಾರು 615 ಗ್ರಾಂ ಗಾಂಜಾ ಸೊಪ್ಪು ಪತ್ತೆಯಾಯಿತು. ಆರೋಪಿ ಅಭಿಷೇಕ್ ನನ್ನು ಹೆಚ್ಚು ವಿಚಾರಣೆ ಮಾಡಿದ ವೇಳೆ ರಾಕೇಶ್ ಮತ್ತು ತ್ರಿನೇಶ್ ಎಂಬುವವರು ತಿಪಟೂರು ಮತ್ತು ಬೆಂಗಳೂರಿನಿಂದ ತಂದು ತುರುವೇಕೆರೆಗೆ ಗಾಂಜಾ ಸೊಪ್ಪು ಮಾರುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ. ಗಾಂಜಾ ಸೊಪ್ಪು ಮಾರಿದ್ದ ರಾಕೇಶ್ ಮತ್ತು ತ್ರಿನೇಶ್ ನನ್ನು ಪೊಲೀಸರು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.