ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮೂಲಕ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸೂಕ್ತ ಯೋಜನೆ ರೂಪಿಸಬೇಕಿದೆ ಎಂದು ಜಲಸುರಕ್ಷಾ ಬೆಂಗಳೂರಿನ ನೋಡಲ್ ಅಧಿಕಾರಿ ಕೆ.ಎನ್ ರಾಜೀವ್ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ‘ಜಲಸುರಕ್ಷಾ/ತೃಪ್ತಿಕರ ಬೆಂಗಳೂರು’ ವಿಷಯಕ್ಕೆ ಸಂಬಂಧಿಸಿದಂತೆ ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯದ ಕಾನ್ಫರೆನ್ಸ್ ಹಾಲ್‌ನಲ್ಲಿ ಗುರುವಾರ ವಿಚಾರ ಸಂಕಿರಣ ನಡೆಯಿತು.
ಈ ವೇಳೆ ಮಾತನಾಡಿದ ಅವರು, “ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ವಿವಿಧ ವಿಷಯಗಳಲ್ಲಿ ಬರುವ ಜಲಸುರಕ್ಷಾ ಬೆಂಗಳೂರು ವಿಷಯಕ್ಕೆ ನಾಗರಿಕರಿಂದ 9,000ಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಇಂದಿನ ವಿಚಾರ ಸಂಕಿರಣದಲ್ಲಿ ಬಂದ ಸಲಹೆ ಸೇರಿದಂತೆ ಎಲ್ಲವನ್ನು ಒಟ್ಟುಗೂಡಿಸಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದರು.
“ಬೆಂಗಳೂರಿನಾದ್ಯಂತ ಜಲಮಂಡಳಿ ವತಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಅದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಜಲಮಂಡಳಿಯು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಜನರಿಗೆ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ದಿನದ 24 ಗಂಟೆಯೂ ಜಲಮಂಡಳಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ತಿಳಿಸಿದರು.
“ನಗರದಲ್ಲಿ ಹೆಚ್ಚಾಗಿ ಕಾವೇರಿ ನೀರಿನ ಮೆಲೆ ಅವಲಂಬಿತವಾಗಿದ್ದು, ಪರ್ಯಾಯ ವ್ಯವಸ್ಥೆಗಳಿಗೆ ಮುಂದಾಗಬೇಕಿದೆ. ಜನರಿಗೆ ಗುಣಮಟ್ಟದ ನೀರನ್ನು ನೀಡುವ ಸಲುವಾಗಿ ರಿಯಲ್ ಟೈಮ್ ಆನ್‌ಲೈನ್ ನೀರಿನ ಗುಣಮಟ್ಟ ಮಾನಿಟರಿಂಗ್ ಸ್ಟೇಷನ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಉಬರ್ ಕ್ಯಾಬ್ ಬುಕ್ ಮಾಡಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಚಾಲಕ
ಸಲಹೆಗಳು
• ಕೊಳಚೆ ನೀರುನ್ನು ರಾಜಕಾಲುವೆ ಹಾಗೂ ಕೆರೆಗಳಿಗೆ ಹರಿಯಲು ಬಿಡದೆ, ಒಳ ಚರಂಡಿಗಳಿಂದಲೇ ಕೊಳಚೆ ನೀರು ಹರಿಯುವಂತೆ ಮಾಡುವ ಜೊತೆಗೆ ಕೊಳಚೆ ನೀರನ್ನು ಸಂಪೂರ್ಣವಾಗಿ ಶುದ್ಧೀಕರಿಸಿ ಕೆರೆಗಳಿಗೆ ಬಿಡಬೇಕು.
• ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಇಂಗು ಗುಂಡಿಗಳ ನಿರ್ಮಾಣ ಮಾಡುವುದು.
• ಶುದ್ಧ/ಹೊಸ ನೀರನ್ನು ಉಳಿಸಲು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವಿಧಾನಗಳನ್ನು ಅನುಷ್ಠಾನಕ್ಕೆ ತರುವುದು.
• ಅಂತರ್ಜಲದ ವಿವೇಚನಾರಹಿತ/ಯಥೇಚ್ಛ ಬಳಕೆಯನ್ನು ನಿಯಂತ್ರಿಸುವುದು ಹಾಗೂ ನೀರಿನ ಮಿತ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
• ನೀರು ಪೂರೈಕೆಯ ಮೂಲವಾಗಿ ನಗರದ ಕೆರೆಗಳನ್ನು ಬಳಸುವುದು.
• ಅನಧಿಕೃತವಾಗಿ ಬೋರ್‌ವೆಲ್‌ಗಳು ಕೊರೆಯುವುದನ್ನು ತಡೆಯುವ ಜತೆಗೆ ಅಂತಹವರ ಮೇಲೆ ದುಪ್ಪಟ್ಟು ದಂಡವನ್ನು ವಿಧಿಸುವುದು.
• ಸೋರಿಕೆಯಾಗುವ ನೀರನ್ನು ತಡೆಯಲು ಸೂಕ್ತ ಕ್ರಮವಹಿಸುವುದು.
• ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್.ಟಿ.ಪಿ ನಿರ್ಮಿಸುವುದನ್ನು ಕಡ್ಡಾಯಗೊಳಿಸುವುದು.
• ವಿಕೇಂದ್ರೀಕೃತ ಪದ್ದತಿಯಲ್ಲಿ ಎಸ್.ಟಿ.ಪಿಗಳನ್ನು ನಿರ್ಮಿಸಲು ಕ್ರಮವಹಿಸುವುದು.
• ಕಲುಷಿತ ನೀರು ಶುದ್ಧೀಕರಿಸಿ ಸಂಸ್ಕರಿಸಿದ ನೀರನ್ನು ಮರು ಬಳಕೆ ಮಾಡಲು ನಾಗರಿಕರಲ್ಲಿ ಜಾಗೃತಿ ಮೂಡಿಸುವುದು.
• ಒಳ ಚರಂಡಿಗಳ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವುದು.
ಈ ವೇಳೆ ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ರಾಮರಾಜು, ಜಲಮಂಡಳಿಯ ಮುಖ್ಯ ಅಭಿಯಂತರರಾದ ವೆಂಕಟೇಶ್, ಸುರೇಶ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.