ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್ಗೆ ಬಿಜೆಪಿ ಮಾಜಿ ವಕ್ತಾರೆ ಆರತಿ ಸಾಠೆ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕದ ಬಗ್ಗೆ ವಿಪಕ್ಷಗಳು ಆಕ್ಷೇಪ, ಅನುಮಾನ ವ್ಯಕ್ತಪಡಿಸಿದ್ದು, ವಿವಾದ ಹುಟ್ಟಿಕೊಂಡಿದೆ.
ಸಾಠೆ ಅವರು 2023ರ ಫೆಬ್ರವರಿಯಲ್ಲಿ ಮಹಾರಾಷ್ಟ್ರ ಬಿಜೆಪಿಯ ಅಧಿಕೃತ ವಕ್ತಾರೆಯಾಅಗಿ ನೇಮಕಗೊಂಡಿದ್ದರು. ಒಂದು ವರ್ಷ ಬಿಜೆಪಿ ವಕ್ತಾರೆಯಾಗಿದ್ದ ಸಾಠೆ, 2024ರ ಜನವರಿಯಲ್ಲಿ ವೃತ್ತಿಪರ ಕಾರಣಗಳನ್ನು ನೀಡಿ, ಬಿಜೆಪಿ ವಕ್ತಾರೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಅವರು ಬಿಜೆಪಿ ತೊರೆದ 19 ತಿಂಗಳಲ್ಲಿಯೇ ಅವರನ್ನು ಬಾಂಬೆ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಿಸಲು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ. ಸಾಠೆ ಅವರು ಶೀಘ್ರವೇ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಅವರ ಆಯ್ಕೆಗೆ ವಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಆಡಳಿತ ಪಕ್ಷದ ಹುದ್ದೆಯಲ್ಲಿದ್ದವರು ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತಾಗ, ಅವರ ತೀರ್ಪುಗಳು ರಾಜಕೀಯ ಪ್ರೇರಿತವಾಗುವ ಸಾಧ್ಯತೆಗಳೇ ಹೆಚ್ಚು ಎಂದು ವಾದಿಸಿವೆ.
ಅಂದಹಾಗೆ, ಆರತಿ ಸಾಠೆ ಅವರು ಸುಮಾರು 20 ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ನಿರ್ವಹಿಸಿದ್ದಾರೆ. ಅವರು ಪ್ರತ್ಯಕ್ಷ ತೆರಿಗೆ ವಿಷಯಗಳಲ್ಲಿ ಪರಿಣತಿಯನ್ನೂ ಹೊಂದಿದ್ದಾರೆ. ಆದಾಗ್ಯೂ, ಅವರು ಬಿಜೆಪಿಯಲ್ಲಿ ಸಕ್ರಿಯವಾಗಿದ್ದರು. ಮಾತ್ರವಲ್ಲದೆ, ಅವರ ತಂದೆ ಅರುಣ್ ಸಾಠೆ ಕೂಡ ಆರ್ಎಸ್ಎಸ್ ಮತ್ತು ಬಿಜೆಪಿ ಜೊತೆಗೆ ದೀರ್ಘಾವಧಿಯ ಸಂಬಂಧ ಹೊಂದಿದ್ದರು. ಹೀಗಾಗಿ, ಆರತಿ ಸಾಠೆ ಮತ್ತು ಅವರ ಕುಟುಂಬವು ದೀರ್ಘಕಾಲದಿಂದ ಬಿಜೆಪಿ ಜೊತೆ ಗುರುತಿಸಿಕೊಂಡಿದೆ.
ಈ ಲೇಖನ ಓದಿದ್ದೀರಾ?: ಯುವತಿಯ ಅಪಹರಣ- ಪ್ರತ್ಯಕ್ಷ ಸಾಕ್ಷಿಯಿಂದ ಎಸ್ಐಟಿಗೆ ದೂರು; ಅಲ್ಲಿದ್ದ ಆ ವ್ಯಕ್ತಿ ಯಾರು ಗೊತ್ತೇ?
ಹೀಗಿರುವಾಗ, ಆರತಿ ಸಾಠೆ ಅವರನ್ನು ಬಾಂಬೆ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಿಸಿವುದು ನ್ಯಾಯಾಂಗ ವ್ಯವಸ್ಥೆಯನ್ನು ರಾಜಕೀಯಗೊಳಿಸಿದಂತೆ ಆಗುತ್ತದೆ ಎಂದು ವಿಪಕ್ಷಗಳು ಆರೋಪಿಸಿವೆ. ಅವರನ್ನು ನ್ಯಾಯಾಧೀಶ ಹುದ್ದೆಗೆ ನೇಮಿಸುವ ನಿರ್ಧಾರವನ್ನು ಹಿಂಪಡೆಯುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ನಿಷ್ಪಕ್ಷಪಾತತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿವೆ.
ಸಾಠೆ ಅವರ ನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಸಿಪಿ (ಶರದ್ ಬಣ) ಶಾಸಕ ರೋಹಿತ್ ಪವಾರ್, “ನಾನು ಆರತಿ ಸಾಠೆ ಅವರ ವೃತ್ತಿಪರ ಅರ್ಹತೆಗಳನ್ನು ಪ್ರಶ್ನಿಸುವುದಿಲ್ಲ. ಆದರೆ, ಅವರು ದೀರ್ಘಕಾಲದವರೆಗೆ ಒಂದು ರಾಜಕೀಯ ಪಕ್ಷದಲ್ಲಿ ತೊಡಗಿಸಿಕೊಂಡಿದ್ದವರು. ಅವರ ರಾಜಕೀಯ ಹಿನ್ನೆಲೆಯು ನ್ಯಾಯಾಂಗದ ನಿಷ್ಪಕ್ಷಪಾತಕ್ಕೆ ಧಕ್ಕೆತರುತ್ತದೆ. ಆಡಳಿತ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ ನ್ಯಾಯಪೀಠದಲ್ಲಿ ಕುಳಿತಾಗ, ಅವರ ತೀರ್ಪುಗಳು ರಾಜಕೀಯ ಪ್ರೇರಿತವಾಗಿರುವುದಿಲ್ಲ ಎಂಬುದಕ್ಕೆ ಖಾತಿ ಇಲ್ಲ. ಈ ನೇಮಕಾತಿ, ಇಡೀ ನ್ಯಾಯದಾನ ಪ್ರಕ್ರಿಯೆಯ ಮೇಲೆಯೇ ಅನುಮಾನ ಹುಟ್ಟಿಸುತ್ತದೆ. ಈ ಶಿಫಾರಸನ್ನು ಮರುಪರಿಶೀಲಿಸಬೇಕು” ಎಂದು ಒತ್ತಾಯಿಸಿದ್ದಾರೆ.