ಕಟ್ಟಡ ಕಾಮಗಾರಿ ಸ್ಥಳದಿಂದ ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳನ್ನು ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳರ ತಂಡವೊಂದನ್ನು ಹೊನ್ನಾವರ ಪೊಲೀಸರು ಬಂಧಿಸಿ ಆರೋಪಿಗಳಿಂದ ₹5 ಲಕ್ಷ ಮೌಲ್ಯದ ಕಳವು ಮಾಡಿದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತವೀರ ಅಹಮ್ಮದ್, ಷಹಾದ್-ಉಲ್ಲಾ, ಮಹ್ಮದ್ ಮನ್ಸೂರ್ ಮತ್ತು ಕಲೀಮುಲ್ಲಾ ಅಲಿಯಾಸ್ ಕಲೀಂ ಬಂಧಿತ ಆರೋಪಿಗಳು.
ಕಳೆದ ತಿಂಗಳು ಕಾಸರಕೋಡ ರೋಷನ್ ಮೊಹಲ್ಲಾದಲ್ಲಿನ ಮಸೀದಿ ಹತ್ತಿರ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದರ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳು ಕಳುವಾಗಿತ್ತು. ಜುಲೈ 15ರ ರಾತ್ರಿ 7 ಗಂಟೆಯಿಂದ ಜುಲೈ 16ರ ಬೆಳಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿತ್ತು. ಈ ಬಗ್ಗೆ ರಾಮ ಲಕ್ಷ್ಮಣ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹2 ಲಕ್ಷ ಮೌಲ್ಯದ 180 ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಕಳ್ಳತನವನ್ನು ಒಪ್ಪಿಕೊಂಡಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಹೊನ್ನಾವರ | ಸಾರಿಗೆ ನೌಕರರ ಮುಷ್ಕರ: ತಹಶೀಲ್ದಾರ್ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಸಭೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್ (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ. ಕೃಷ್ಣಮೂರ್ತಿ ಮತ್ತು ಎಂ. ಜಗದೀಶ್, ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮಹೇಶ ಕೆ, ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜಶೇಖರ ವಂದಲಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಜಾನನ ನಾಯ್ಕ, ವಿಠ್ಠಲ ಗೌಡ, ಮನೋಜ ಡಿ, ರವಿ ನಾಯ್ಕ, ಚಂದ್ರಶೇಖರ ನಾಯ್ಕ, ಅನಿಲ ಲಮಾಣಿ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.