ನ್ಯಾಯಾಲಯಗಳ ಕಲಾಪಗಳಲ್ಲಿ ದಿನನಿತ್ಯ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ನ್ಯಾಯಾಧೀಶರು, ವಕೀಲರು ಹಾಗೂ ವಕೀಲರ ಭವನದ ಸಿಬ್ಬಂದಿ ವರ್ಗದವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಕೀಲರ ಸಂಘದ ವತಿಯಿಂದ ನ್ಯಾಯಾಂಗ ಇಲಾಖೆ ಸಹಯೋಗದಲ್ಲಿ ಎಂಟು ದಿನಗಳ ಕ್ರೀಡಾ ಕೂಟ ಆಯೋಜಿಸಲಾಗಿದೆ.
ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಸಿವಿವಿ ಕ್ಯಾಂಪಸ್ ಕ್ರೀಡಾಂಗಣದಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಮೊದಲ ದಿನವಾದ ನಿನ್ನೆ (ಆ.7) ಹಿರಿಯ ವಕೀಲ ದಿವಂಗತ ಹರಿಕುಮಾರ್ ಅವರ ಸ್ಮರಣಾರ್ಥ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿತ್ತು.
ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರ ಭಾವನಿ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಉತ್ತಮ ಆರೋಗ್ಯಕ್ಕೆ ದೈಹಿಕ ಚಟುವಟಿಕೆ ಬಹಳ ಮುಖ್ಯ. ನಿರಂತರ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಬಹುದು. ಎಷ್ಟೇ ಕೆಲಸಗಳಿರಲಿ ಪ್ರತಿ ದಿನ ಒಂದಿಷ್ಟು ಸಮಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮೀಸಲಿಡಬೇಕು” ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, “ಒತ್ತಡ ನಿವಾರಣೆಗೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ. ಹಾಗಾಗಿ ವಕೀಲರು ಹಾಗೂ ನ್ಯಾಯಾಂಗ ಸಿಬ್ಬಂದಿಗೆ ಪ್ರತಿ ವರ್ಷ ಸಂಘದ ವತಿಯಿಂದ ಕ್ರೀಡಾ ಕೂಟ ಆಯೋಜಿಸಲಾಗುತ್ತಿದೆ. ಎಲ್ಲ ಸಿಬ್ಬಂದಿ ವರ್ಗದವರು ಒಂದು ಕಡೆ ಸೇರಿ ಪರಸ್ಪರ ಪರಿಚಯ, ಕೆಲಸಗಳ ಬಗ್ಗೆ ಸಮಾಲೋಚನೆ ಮಾಡಲು ಈ ವೇದಿಕೆ ಅವಕಾಶ ಒದಗಿಸಿದೆ. ಕ್ರೀಡಾ ಕೂಟ ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸಿವಿವಿ ದತ್ತಿ ದಿನಾಚರಣೆ: ರಕ್ತದಾನ ಶಿಬಿರಕ್ಕೆ 1500 ವಿದ್ಯಾರ್ಥಿಗಳಿಂದ ಜಾಗೃತಿ
ವಕೀಲ ಸಂಘದ ಕ್ರೀಡಾ ಸಮಿತಿ ಅಧ್ಯಕ್ಷ ಸುಬ್ರಮಣಿ ಮಾತನಾಡಿ, “ಪ್ರತಿನಿತ್ಯ ಕಕ್ಷಿದಾರರಿಗೆ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಒತ್ತಡದಲ್ಲಿ ಕೆಲಸ ಮಾಡುವ ವಕೀಲರಿಗೆ ಇಂತಹ ಕ್ರೀಡಾ ಕೂಟಗಳಿಂದ ಒಂದಿಷ್ಟು ಮಾನಸಿಕ ಉಲ್ಲಾಸ ನೀಡುತ್ತೆ. ಇದಲ್ಲದೆ ನಿರಂತರ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಒಳ್ಳೆಯ ಆರೋಗ್ಯ ಕಾಪಾಡಲು ಸಾಧ್ಯ. ಹಾಗಾಗಿ ಪ್ರತಿ ವರ್ಷ ಸಂಘದ ವತಿಯಿಂದ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ” ಎಂದರು.
ಈ ಸಂದರ್ಭದಲ್ಲಿ ಒಂದನೇ ಹೆಚ್ಚುವರಿ ನ್ಯಾಯಾಧೀಶ ಕಾಂತರಾಜ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಲತಾ, 2ನೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಶಿಲ್ಪ, ವಕೀಲರ ಸಂಘದ ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ಮುನಿರಾಜು, ಖಜಾಂಚಿ ಅಯೂಬ್, ನಿರ್ದೇಶಕ ಮುನಿರಾಜು, ಅಶ್ವಥ್, ಶ್ರೀನಿವಾಸ್, ಪ್ರವೀಣ್, ರಾಘವೇಂದ್ರ, ಕ್ರೀಡಾ ಸಮಿತಿ ಸದಸ್ಯ ಹರ್ಷವರ್ಧನ್ ಮತ್ತು ಇತರರು ಉಪಸ್ಥಿತರಿದ್ದರು.