ಸತತ ಮೂರು ಬಡ್ಡಿ ದರ ಕಡಿತದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ನಿರ್ಧರಿಸಿದೆ. ಅಮೆರಿಕದ ಸುಂಕ ಬೆದರಿಕೆಯ ವಿದ್ಯಮಾನಗಳಿಂದಾಗಿ ಕೇಂದ್ರ ಬ್ಯಾಂಕ್ ತಟಸ್ಥ ನಿಲುವು ತಳೆದಿದೆ.
ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇ 5.5ರಲ್ಲೆ ಬಡ್ಡಿದರ ಮುಂದುವರಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಸಂಜಯ್ ಮಲ್ಲೋತ್ರಾ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ದೈಮಾಸಿಕ ಆರ್ಥಿಕ ನೀತಿಯನ್ನು ಘೋಷಿಸಿ ಬುಧವಾರ ಮಾತನಾಡಿದರು.
“2026ರ ಹಣಕಾಸು ವರ್ಷದ ಬೆಳವಣಿಗೆಯ ದರದ ಮುನ್ಸೂಚನೆಯನ್ನು ಶೇ 6.5 ರಲ್ಲಿಯೇ ಉಳಿಸಿಕೊಳ್ಳಲಾಗಿದೆ. ಅಲ್ಪಾವಧಿ ಸಾಲ ದರ ಅಥವಾ ರೆಪೋ ದರವನ್ನು ಶೇ 5.5ದೊಂದಿಗೆ ತಟಸ್ಥ ಸ್ಥಿತಿಯಲ್ಲಿ ಮುಂದುವರೆಸಲು ಆರ್‌ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸರ್ವಾನುಮತದಿಂದ ನಿರ್ಧರಿಸಿದೆ” ಎಂದು ತಿಳಿಸಿದರು.
“ಹಣದುಬ್ಬರದ ಮುನ್ಸೂಚನೆಯ ಕುರಿತು ಮಾತನಾಡಿದ ಅವರು, ಕಳೆದ ಬಾರಿ ಅಂದಾಜಿಸಿದ್ದ ಶೇ 3.7ಕ್ಕಿಂತ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಡಿಮೆ ತೋರಿಸಿದ್ದು, ಶೇ 3.1ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ” ಎಂದರು.
