ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಪೊಲೀಸ್ ಠಾಣೆಗೆ, ಆಗಸ್ಟ್ 5 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ಅವರು ದಿಡೀರ್ ಭೇಟಿಯಿತ್ತು ಪರಿಶೀಲಿಸಿದ ಘಟನೆ ನಡೆದಿದೆ.
ಪೊಲೀಸ್ ಠಾಣೆಯ ಆವರಣ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೆ ನ್ಯಾಯಾಧೀಶರು ಖುದ್ದು ಭೇಟಿಯಿತ್ತು ವೀಕ್ಷಿಸಿದ್ದಾರೆ. ಅಧಿಕಾರಿ, ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಿಪ್ಪನ್ ‘ಪೇಟೆ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ರಾಜುರೆಡ್ಡಿ ಬಿ ಅವರು ಉಪಸ್ಥಿತರಿದ್ದರು.
ಹೊಸನಗರ ಪಟ್ಟಣದ 10 ನೇ ವಾರ್ಡ್ ಅಂಗನವಾಡಿ ಕೇಂದ್ರಕ್ಕೂ ನ್ಯಾಯಾಧೀಶರು ದಿಢೀರ್ ಭೇಟಿಯಿತ್ತು ಪರಿಶೀಲಿಸಿದ್ದಾರೆ. ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಜೊತೆ ಸಮಾಲೋಚಿಸಿದ್ದಾರೆ.
ಹೊಸನಗರ ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆಯೋಜಿಸಿದ್ದ, ಖಾಯಂ ಲೋಕ ಅದಾಲತ್ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ಅವರು ಉದ್ಘಾಟಿಸಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಖಾಯಂ ಲೋಕ್ ಅದಾಲತ್ ನ ಸೇವೆಯ ಉಪಯೋಗವನ್ನು ಸಾರ್ವಜನಿಕರು ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ನೀಡುವ ಸಂಸ್ಥೆಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.