ಈ ದಿನ ಸಂಪಾದಕೀಯ | ಬಿಜೆಪಿ ಪದಾಧಿಕಾರಿಗಳನ್ನು ಜಡ್ಜ್ ಆಗಿ ನೇಮಿಸುವ ಪ್ರವೃತ್ತಿ ನಿಲ್ಲಬೇಕು

Date:

Advertisements
ಮಹಾರಾಷ್ಟ್ರ ಬಿಜೆಪಿಯ ಅಧಿಕೃತ ವಕ್ತಾರೆಯಾಗಿ ಕಾರ್ಯ ನಿರ್ವಹಿಸಿದ್ದ ವಕೀಲೆ ಆರತಿ ಸಾಠೆ ಅವರನ್ನು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿರುವುದು ಅತ್ಯಂತ ಆತಂಕದ ಸಂಗತಿ. ಕಾರ್ಯಾಂಗದ ಒತ್ತಡಕ್ಕೆ ನ್ಯಾಯಾಂಗ ಮಣಿಯಬಾರದು ಎಂಬುದು ಸಾಂವಿಧಾನಿಕ ಅಪೇಕ್ಷೆ. ನೇಮಕ ವಿಧಾನಗಳು ಪಾರದರ್ಶಕ ಆಗಬೇಕು.

ನಿರ್ದಿಷ್ಟ ರಾಜಕೀಯ ಪಕ್ಷದ ಕುರಿತು ಒಲವಿದ್ದ ಮಾತ್ರಕ್ಕೆ ನ್ಯಾಯಮೂರ್ತಿ ಹುದ್ದೆಗೆ ನೇಮಕಗೊಳ್ಳಲು ಅನರ್ಹರು ಎಂದು ಹೇಳಲು ಬಾರದು. ಆದರೆ ಬಹಿರಂಗ ಧರ್ಮಾಂಧತೆಯನ್ನು ಒಪ್ಪಲಾಗದು. ಕಾರ್ಯಾಂಗದ ಒತ್ತಡಕ್ಕೆ ನ್ಯಾಯಾಂಗ ಮಣಿಯಬಾರದು ಎಂಬುದು ಸಾಂವಿಧಾನಿಕ ಅಪೇಕ್ಷೆ.

ಮಹಾರಾಷ್ಟ್ರ ಬಿಜೆಪಿಯ ಅಧಿಕೃತ ವಕ್ತಾರೆಯಾಗಿ ಕಾರ್ಯ ನಿರ್ವಹಿಸಿದ್ದ ವಕೀಲೆ ಆರತಿ ಸಾಠೆ ಅವರನ್ನು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿರುವುದು ಅತ್ಯಂತ ಆತಂಕದ ಸಂಗತಿ.

ಕಳೆದ ಜುಲೈ 28ರಂದು ಸುಪ್ರೀಮ್ ಕೋರ್ಟು ಈ ನೇಮಕಕ್ಕೆ ಅನುಮೋದನೆಯನ್ನೂ ನೀಡಿದೆ. ಪ್ರತಿಪಕ್ಷಗಳು ಈ ನೇಮಕವನ್ನು ಪ್ರತಿಭಟಿಸಿವೆ ಮತ್ತು ರದ್ದುಗೊಳಿಸುವಂತೆ ಆಗ್ರಹಿಸಿವೆ. ನ್ಯಾಯಾಂಗದಲ್ಲಿ ನ್ಯಾಯಬದ್ಧತೆ ಮತ್ತು ನಿಷ್ಪಕ್ಷಪಾತ ತತ್ವಗಳನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿವೆ.

Advertisements

ಸಾಠೆಯವರನ್ನು ಅಧಿಕೃತ ವಕ್ತಾರೆಯಾಗಿ ನೇಮಕ ಮಾಡಿದ ಆದೇಶ ಮತ್ತು ಈ ನೇಮಕಕ್ಕೆ ಸಾಠೆ ನೀಡಿದ್ದ ಒಪ್ಪಿಗೆಯ ಪತ್ರಗಳು ಮತ್ತು ಟ್ವೀಟ್ ಗಳ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿವೆ.

ವಕೀಲರೊಬ್ಬರಿಗೆ ನ್ಯಾಯಮೂರ್ತಿಯಾಗುವ ಅರ್ಹತೆಗಳು ಇದ್ದ ಮಾತ್ರಕ್ಕೆ ಅವರು ರಾಜಕೀಯ ಪಕ್ಷದೊಂದಿಗೆ ನೇರ ಸಂಬಂಧ ಹೊಂದಿದ್ದರೂ ನೇಮಕ ಮಾಡುವುದು ಸೂಕ್ತವಲ್ಲ. ಇಂತಹ ನೇಮಕಗಳು ನ್ಯಾಯಾಂಗವನ್ನು ರಾಜಕೀಯ ಕಣಗಳನ್ನಾಗಿ ಮಾಡಿಬಿಡುತ್ತವೆ. ರಾಜಕೀಯ ಪಕ್ಷವೊಂದರಲ್ಲಿ ಸ್ಥಾನಮಾನ ಹೊಂದಿದವರನ್ನು ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದರೆ ನ್ಯಾಯನೀಡಿಕೆ ಪ್ರಕ್ರಿಯೆ ರಾಜಕೀಯ ಪೂರ್ವಗ್ರಹಕ್ಕೆ ದಾರಿ ಮಾಡುವುದಿಲ್ಲವೇ ಎಂಬುದು ಪ್ರತಿಪಕ್ಷಗಳ ಪ್ರಶ್ನೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ 2014ರಿಂದ ಅಧಿಕಾರ ಹಿಡಿದಿದೆ. ಈ ಅವಧಿಯಲ್ಲಿ ನ್ಯಾಯಾಂಗಕ್ಕೆ ಬಿಜೆಪಿ ನಿಷ್ಠೆಯ ತೂರಿಸುವ ಪ್ರಯತ್ನಗಳು ಯಶಸ್ವಿಯಾಗಿ ನಡೆದಿವೆ. 2023ರ ಫೆಬ್ರವರಿಯಲ್ಲಿ ಮದ್ರಾಸ್ ಹೈಕೋರ್ಟಿಗೆ ಇಂತಹುದೇ ವಿವಾದಿತ ನೇಮಕ ಜರುಗಿತ್ತು. ವಿಕ್ಟೋರಿಯಾ ಗೌರಿ ಅವರನ್ನು ಅನರ್ಹಗೊಳಿಸುವಂತೆ ಕೋರಿದ್ದ ತಕರಾರು ಅರ್ಜಿಯನ್ನು ಮದ್ರಾಸ್ ಹೈಕೋರ್ಟು ತಳ್ಳಿ ಹಾಕಿತ್ತು.

ದ್ವೇಷಭಾಷಣ ಮಾಡಿರುವ ಮತ್ತು ಬಿಜೆಪಿ ಜೊತೆ ಸಂಬಂಧ ಹೊಂದಿದ್ದ ಕಾರಣ ಸಂವಿಧಾನದ 217(2)(ಬಿ) ಅನುಚ್ಛೇದದ ಪ್ರಕಾರ ‘ಭಯ ಅಥವಾ ಪಕ್ಷಪಾತವಿಲ್ಲದೆ ನ್ಯಾಯದಾನ ಮಾಡುವುದು ಸಾಧ್ಯವಿಲ್ಲ’ ಎಂಬುದು ತಕರಾರು ಅರ್ಜಿಯ ಸಾರಾಂಶವಾಗಿತ್ತು.

ಇಸ್ಲಾಮ್ ಧರ್ಮವನ್ನು ಹಸಿರು ಭಯೋತ್ಪಾದನೆಯೆಂದೂ, ಕ್ರೈಸ್ತ ಮತವನ್ನು ಶ್ವೇತ ಆತಂಕವೆಂದೂ ಗೌರಿ ಅವರು ವಕೀಲರೂ ಮತ್ತು ಬಿಜೆಪಿಯ ಪದಾಧಿಕಾರಿಯೂ ಆಗಿದ್ದ ಅವಧಿಯಲ್ಲಿ ಯೂ ಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಣ್ಣಿಸಿದ್ದರು.

‘………. ಎಂಬ ಹೆಸರಿನವಳಾದ ನಾನು ಭಾರತದ ಸಂವಿಧಾನದಲ್ಲಿ ನಿಜ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ…….’ ಎಂಬುದಾಗಿ ನ್ಯಾಯಮೂರ್ತಿಗಳು ಅಧಿಕಾರ ವಹಿಸಿಕೊಳ್ಳುವ ಮುನ್ನ ಸಂವಿಧಾನದ ಹೆಸರಿನಲ್ಲಿ ಪ್ರಚಮಾಣವಚನ ಸ್ವೀಕರಿಸುತ್ತಾರೆ.

ತಾವು ಸ್ವೀಕರಿಸಿದ ಪ್ರಮಾಣವಚನಕ್ಕೆ ಅನುಗುಣವಾಗಿ ಇರಲಿಲ್ಲ ವಿಕ್ಟೋರಿಯಾ ಗೌರಿ ಅವರ ನಡೆನುಡಿ. ಕ್ರೈಸ್ತರು ಮತ್ತು ಮುಸ್ಲಿಮರ ಬಗೆಗೆ ದ್ವೇಷ ಭಾಷಣ ಮಾಡಿರುವ ಅವರು ನ್ಯಾಯ ನೀಡಿಕೆಯಲ್ಲಿ ‘ …. ಭಯ ಅಥವಾ ಪಕ್ಷಪಾತವಿಲ್ಲದೆ…’ ಧರ್ಮನಿರಪೇಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ನಂಬುವುದಾದರೂ ಹೇಗೆ ಎಂಬುದು ತಕರಾರು ಅರ್ಜಿದಾರರ ಪ್ರಶ್ನೆಯಾಗಿತ್ತು.

ಇದೇ ಸಂದರ್ಭದಲ್ಲಿ 98 ವಕೀಲರ ಮತ್ತೊಂದು ಗುಂಪು ವಿಕ್ಟೋರಿಯಾ ಗೌರಿ ಅವರ ನೇಮಕವನ್ನು ಬೆಂಬಲಿಸಿತ್ತು.

ವಿಕ್ಟೋರಿಯಾ ಗೌರಿ 2006ರಿಂದ 2020ರ ತನಕ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು. ಕನ್ಯಾಕುಮಾರಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆನಂತರ ಎಂಟು ವರ್ಷಗಳ ಕಾಲ ಪಕ್ಷದ ಮಹಿಳಾ ಘಟಕದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿದ್ದುಂಟು.

ವ್ಯಕ್ತಿಯೊಬ್ಬರು ವಕೀಲರಾಗಿ ಹೊಂದಿದ್ದ ಅಭಿಪ್ರಾಯಗಳಿಗಾಗಿ ಅವರನ್ನು ದೂರುವುದು ಉಚಿತವಲ್ಲ. ಒಮ್ಮೆ ನ್ಯಾಯಮೂರ್ತಿಯ ಹುದ್ದೆಯನ್ನು ವಹಿಸಿಕೊಂಡ ನಂತರ ಯಾರೇ ಆಗಲಿ ನಿರ್ಲಿಪ್ತರಾಗಿಬಿಡುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಗೌರಿ ಅವರ ನೇಮಕವನ್ನು ಸಮರ್ಥಿಸಿಕೊಂಡಿದ್ದರು.

2020ರಲ್ಲೇ ಗೌರಿ ಅವರು ಬಿಜೆಪಿಯ ಎಲ್ಲಿ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದಾಗಿ ಹೇಳಲಾಗಿತ್ತು. ಅರುಣಾ ಸಾಠೆ ಅವರೂ ವರ್ಷದ ಹಿಂದೆಯೇ ಬಿಜೆಪಿಯ ವಕ್ತಾರೆ ಹುದ್ದೆಗೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಹೌದು.

ಆದರೆ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಂಬಂಧಿಸಿದವರ ವ್ಯಕ್ತಿಗಳು ನಿರ್ಲಿಪ್ತ ಧೋರಣೆ ತಳೆಯುತ್ತಾರೆಯೇ?

ಏಳು ತಿಂಗಳ ಹಿಂದೆ ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ವಿಶ್ವಹಿಂದು ಪರಿಷತ್ತಿನ ಸಮಾರಂಭದಲ್ಲಿ ಭಾಗವಹಿಸಿ ಮುಸಲ್ಮಾನರ ಕುರಿತು ಅತ್ಯಂತ ಕೀಳಾಗಿ ಮಾತನಾಡಿದ್ದರು. “ಇಲ್ಲಿನ ಬಹುಸಂಖ್ಯಾತರ ಇಚ್ಛಾನುಸಾರ ಭಾರತ ದೇಶ ನಡೆಯಬೇಕು. ಕೇವಲ ಹಿಂದು ಮಾತ್ರವೇ ಈ ದೇಶವನ್ನು ವಿಶ್ವಗುರು ಮಾಡಬಲ್ಲನು. ಹಿಂದೂಗಳು ಸಾಮಾಜಿಕ ಸುಧಾರಣೆಗಳನ್ನು ಒಪ್ಪಿ ಅಳವಡಿಸಿಕೊಂಡರು. ಮುಸಲ್ಮಾನರು ಅವುಗಳನ್ನು ವಿರೋಧಿಸುತ್ತ ಬಂದಿದ್ದಾರೆ” ಎಂದಿದ್ದ ಯಾದವ್ ‘ಕಠಮುಲ್ಲೇ’ ಎಂಬ ಕೀಳು ಪದವನ್ನು ಮುಸ್ಲಿಮರ ವಿರುದ್ಧ ಬಳಸಿದ್ದರು.

ಇವರ ಮಾತುಗಳು ಜಾತ್ಯತೀತತೆ ಮತ್ತು ನ್ಯಾಯಾಂಗ ನಿಷ್ಪಕ್ಷಪಾತ ತತ್ವಗಳ ನಿಚ್ಚಳ ಉಲ್ಲಂಘನೆ ಎಂಬ ವ್ಯಾಪಕ ಖಂಡನೆ ಕೇಳಿ ಬಂದಿತ್ತು. ಕ್ಷಮಾಪಣೆ ಕೇಳಲು ಅಥವಾ ರಾಜೀನಾಮೆ ನೀಡಲು ಒಪ್ಪದೆ ಹಠ ಹಿಡಿದ ಯಾದವ್ ವಿರುದ್ಧ ಈವರೆಗೆ ಯಾವುದೇ ಕ್ರಮ ಜರುಗಿಲ್ಲ. ಅವರ ಸ್ಥಾನಚ್ಯುತಿಯ ಸಂಸದೀಯ ಪ್ರಕ್ರಿಯೆ (ಇಂಪೀಚ್ಮೆಂಟ್) ಆರಂಭಿಸಬೇಕೆಂಬುದಾಗಿ ಪ್ರತಿಪಕ್ಷಗಳ 55 ಮಂದಿ ರಾಜ್ಯಸಭಾ ಸದಸ್ಯರು ನೋಟಿಸ್ ನೀಡಿದ್ದರು. ಭ್ರಷ್ಟಾಚಾರದ ಆಪಾದನೆಯ ಆಂತರಿಕ ತನಿಖೆಯ ನಂತರ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ವರ್ಮಾ ಅವರ ಸ್ಥಾನಚ್ಯುತಿ ಪ್ರಕ್ರಿಯೆ ಕುರಿತು ತೋರಿರುವ ಉತ್ಸಾಹವನ್ನು ಆಳುವ ಪಕ್ಷವು ನ್ಯಾಯಮೂರ್ತಿ ಯಾದವ್ ಕುರಿತು ತೋರಿಲ್ಲ.

ಈ ಕುರಿತು ಉತ್ಸಾಹ ತೋರಿದ್ದ ಕಾರಣದಿಂದಾಗಿಯೇ ಜಗದೀಪ್ ಧನಕರ್ ಅವರು ರಾಜ್ಯಸಭೆಯ ಸಭಾಪತಿ ಸ್ಥಾನ ಮತ್ತು ಉಪರಾಷ್ಟ್ರಪತಿ ಹುದ್ದೆಗೆ ಇತ್ತೀಚೆಗೆ ಹಠಾತ್ತಾಗಿ ರಾಜೀನಾಮೆ ನೀಡಬೇಕಾಯಿತು ಎಂಬ ವ್ಯಾಖ್ಯಾನ ಜರುಗಿದೆ. ಧನಕರ್ ಈವರೆಗೆ ಬಾಯಿ ಬಿಟ್ಟಿಲ್ಲ.

2024ರ ಸೆಪ್ಟಂಬರ್ ಎಂಟರ ಭಾನುವಾರ ಜರುಗಿದ ವಿಶ್ವಹಿಂದು ಪರಿಷತ್ತಿನ ಕಾನೂನು ವಿಭಾಗದ ಸಭೆಯಲ್ಲಿ ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟಿನ 30 ಮಂದಿ ನಿವೃತ್ತ ನ್ಯಾಯಮೂರ್ತಿಗಳು ಭಾಗವಹಿಸಿದ್ದರು. ಕಾಶಿ-ಮಥುರಾ ದೇವಾಲಯ- ಮಸೀದಿ ವಿವಾದಗಳು, ವಕ್ಫ್ ತಿದ್ದುಪಡಿ ಮಸೂದೆ ಹಾಗೂ ಮತಾಂತರ ಈ ಸಭೆಯ ಚರ್ಚಾವಸ್ತು ಆಗಿದ್ದವು. ಕೇಂದ್ರ ಕಾನೂನು ಮಂತ್ರಿ ಅರ್ಜುನ್ ರಾಮ್ ಮೇಘ್ವಾಲ್ ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿಗಳು ಮತ್ತು ವಿ.ಎಚ್.ಪಿ. ನಡುವೆ ಇನ್ನಷ್ಟು ಸಮಾಲೋಚನಾ ಸಭೆಗಳನ್ನು ಏರ್ಪಡಿಸಲಾಗುವುದು. ನಮ್ಮ ಗೊತ್ತು ಗುರಿಗಳನ್ನು ಈಡೇರಿಸಿಕೊಳ್ಳಲು ಕಾನೂನಿನ ದಾರಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ವಿಶ್ವಹಿಂದು ಪರಿಷತ್ತಿನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾಗಿ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿತ್ತು.

ಕಾಶಿಯ ಗ್ಯಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಹಿಂದುಗಳಿಗೆ ಸೇರಿವೆ ಎಂಬ ಹಿಂದುತ್ವ ಸಂಘಟನೆಗಳ ತಗಾದೆ ನ್ಯಾಯಾಲಯಗಳ ಮುಂದೆ ವಿಚಾರಣೆಗೆ ಬಾಕಿಯಿದೆ.

ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸುವ ನೇಮಕಗಳನ್ನು ಮಾಡುವ ಕೋಮುವಾದಿ ಪ್ರವೃತ್ತಿ ಖಂಡನೀಯ. ನಿರ್ದಿಷ್ಟ ರಾಜಕೀಯ ಪಕ್ಷದ ಕುರಿತು ಒಲವಿದ್ದ ಮಾತ್ರಕ್ಕೆ ನ್ಯಾಯಮೂರ್ತಿ ಹುದ್ದೆಗೆ ನೇಮಕಗೊಳ್ಳಲು ಅನರ್ಹರು ಎಂದು ಹೇಳಲು ಬಾರದು. ಆದರೆ ಬಹಿರಂಗ ಧರ್ಮಾಂಧತೆಯನ್ನು ಒಪ್ಪಲಾಗದು. ಕಾರ್ಯಾಂಗದ ಒತ್ತಡಕ್ಕೆ ನ್ಯಾಯಾಂಗ ಮಣಿಯಬಾರದು ಎಂಬುದು ಸಾಂವಿಧಾನಿಕ ಅಪೇಕ್ಷೆ. ನೇಮಕ ವಿಧಾನಗಳು ಪಾರದರ್ಶಕ ಆಗಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X