ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏಕಾಏಕಿ ತಜ್ಞ ವೈದ್ಯ ಸಿಬ್ಬಂದಿಯನ್ನು ವರ್ಗಾವಣೆ ಮಾಡುತ್ತಿರುವ ನಿರ್ಧಾರ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ತಾಲೂಕ ಶಾಖೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಆರ್), ತಾಲೂಕಾ ಸಮಿತಿ ಶಹಾಪುರ ವತಿಯಿಂದ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಆಡಳಿತಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಕರಾದಸಂಸ ಜಿಲ್ಲಾ ಸಂಚಾಲಕ ಶಿವಪುತ್ರ ಜವಾಳಿ ಮಾತನಾಡಿ, ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮ ತಾಲೂಕಿನಲ್ಲಿಯೇ ಅತಿ ದೊಡ್ಡ ಪಂಚಾಯತಿಯಾಗಿದ್ದು, ಸದರಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 50 ಹಾಸಿಗೆಯುಳ್ಳ ದೊಡ್ಡ ಆಸ್ಪತ್ರೆ ಇದಾಗಿದ್ದು, ಇಲ್ಲಿ ಈಗಾಗಲೇ ಸಿಬ್ಬಂದಿಯ ಕೊರತೆ ಇದ್ದು, ಈಗ ಪ್ರಸ್ತುತ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞ ವೈದ್ಯ ಸಿಬ್ಬಂದಿಯನ್ನು ವರ್ಗಾವಣೆ ಮಾಡುತ್ತಿರುವುದು ನಮ್ಮ ಸಂಘಟನೆಯ ಗಮನಕ್ಕೆ ಬಂದಿದೆ. ಹಾಗಾಗಿ ಈಗಾಗಲೇ ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿರುವ ಆಸ್ಪತ್ರೆಯಲ್ಲಿ ಮತ್ತೇ ಇರುವ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದರೆ ನಮ್ಮ ಗ್ರಾಮದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತದೆ” ಎಂದು ತಿಳಿಸಿದರು.
“ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆಯಲ್ಲಿ ಈಗಾಗಲೇ ದೋರನಹಳ್ಳಿ ಅಲ್ಲದೇ ಸುತ್ತಮುತ್ತಲಿನ ಗ್ರಾಮದ ಬಡವರು, ನಿರ್ಗತಿಕರು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ಸಿಬ್ಬಂದಿಯನ್ನೇ ಈಗ ಏಕಾಏಕಿ ವರ್ಗಾವಣೆ ಮಾಡಿದರೆ ಇಡೀ ಗ್ರಾಮದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
“ಯಾದಗಿರಿ ಜಿಲ್ಲೆಯಲ್ಲಿ ಏಕೈಕ ಶಸ್ತ್ರಚಿಕಿತ್ಸೆ ಸಮುದಾಯ ಆರೋಗ್ಯ ಕೇಂದ್ರ ಇದಾಗಿದ್ದು ಕಾರಣ ಇಲ್ಲಿನ ಯಾವುದೇ ವೈದ್ಯ ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಿದ್ದೇ ಆದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ರಾಜ್ಯ ಹೆದ್ದಾರೆ ಬಂದ್ ಮಾಡಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು” ಎಚ್ಚರಿಕೆ ನೀಡುವುದರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮರೆಪ್ಪ ಕ್ರಾಂತಿ, ತಾಲೂಕು ಸಂಚಾಲಕ ಶರಬಣ್ಣ ಎಂ ದೋರನಹಳ್ಳಿ, ನಾಗರಾಜ್ ಡಿ ಕೆ, ಜೈ ಭೀಮ್ ಸಿಂಗನಹಳ್ಳಿ, ಪರಶು ಸಿಂಗನಹಳ್ಳಿ , ಭೀಮಶಂಕರ್ ಗುಂಡಳ್ಳಿ ಇನ್ನಿತರರು ಇದ್ದರು.