“ಸದ್ಯದಲ್ಲೇ ನಡೆಯಲಿರುವ ಜಾತಿ ಗಣತಿಯಲ್ಲಿ ಎಲ್ಲರೂ ಸಹ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ಬರೆಸಬೇಕು. ಜಾತಿ ಕಾಲಂನಲ್ಲಿ ಆಯಾ ಉಪಪಂಗಡಗಳ ಹೆಸರನ್ನು ಬರೆಸಬೇಕು. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ತಿಳಿಸಲಾಗುವುದು” ಎಂದು ದಾವಣಗೆರೆಯ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶ್ರೀಗಳು ಸಲಹೆ ನೀಡಿದರು.
‘ಬಸವ ಸಂಸ್ಕೃತಿ ಅಭಿಯಾನ’ದ ಅಂಗವಾಗಿ ವಿರಕ್ತಮಠದಲ್ಲಿ ನೆಡೆಸಿದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯ ವಹಿಸಿ, ಅಭಿಯಾನದ ಉದ್ದೇಶ ಹಾಗೂ ಅಭಿಯಾನದ ರೂಪುರೇಷೆ ವಿವರಿಸಿ ಮಾತನಾಡಿರು. ಆಗ ಸಭಿಕರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಹೇಳಿದರು.

“ಸೆಪ್ಟೆಂಬರ್ 15 ರಂದು ದಾವಣಗೆರೆಯಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸುವರು, ಅವರಿಗೆ ವಸತಿ ಸೌಲಭ್ಯ, ಪ್ರಸಾದ ವ್ಯವಸ್ಥೆ, ಸೇರಿದಂತೆ ಎಲ್ಲಾ ಕಾರ್ಯ ವ್ಯವಸ್ಥೆ ಮಾಡಬೇಕು” ಎಂದು ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಸಾನಿಧ್ಯ ವಹಿಸಿದ್ದ ಮತ್ತೋರ್ವ ಪೂಜ್ಯರಾದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಶ್ರೀಗಳು “ರಾಜ್ಯದಲ್ಲಿಯೇ ಮಾದರಿಯಾಗಿ ನಮ್ಮ ಜಿಲ್ಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಸಂಸ್ಕೃತಿ ಅಭಿಯಾನದ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಅಣಬೇರು ರಾಜಣ್ಣ “ಎಲ್ಲಾ ಭೇದಗಳನ್ನು ಮರೆತು ಒಗ್ಗಟ್ಟಿನಿಂದ ಹೋದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ನಾವು ಮಾಡುವ ಉಪಕಾರವಾಗಲಿದೆ” ಎಂದು ಅಭಿಪ್ರಾಯಪಟ್ಟರು.

ಸಾನಿಧ್ಯ ವಹಿಸಿದ್ದ ಪಾಂಡೋಮಟ್ಟಿ ಕಂಬತ್ತಳ್ಳಿ ವಿರಕ್ತಮಠದ ಡಾ. ಗುರುಬಸವ ಸ್ವಾಮಿಗಳು, ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಸಲಹೆಗಳನ್ನು ನೀಡಿದರು. ವಚನ ಸಂವಾದದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಚನ ಪುಸ್ತಕ ನೀಡುವುದಾಗಿ ಲಿಂಗಾನಂದ ಕಮ್ಮತ್ತಳ್ಳಿ ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜೊತೆಗೆ ಸಂವಾದ, ಮೆರವಣಿಗೆ ಬಗ್ಗೆ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಆಹಾರದಲ್ಲಿ ಹುಳುಪತ್ತೆ: ಶಿಸ್ತು ಕ್ರಮಕ್ಕೆ ದಸಂಸ ಆಗ್ರಹ
ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಿತಿ ಗೌರವಾಧ್ಯಕ್ಷರಾದ ಅಥಣಿ ವೀರಣ್ಣನವರು ಸೇರಿದಂತೆ ಬಸವ ಸಂಸ್ಕೃತಿ ಅಭಿಯಾನದ ವಿವಿಧ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತು, ಬಸವ ಬಳಗದ ಅಧ್ಯಕ್ಷರಾದ ಹುಚ್ಚಪ್ಪ ಮಾಸ್ತರು ಸೇರಿದಂತೆ ಬಸವ ಬಳಗದ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶರಣ ಮಂಜುನಾಥ ಕುರ್ಕಿ, ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು, ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಐಗೂರು ಚಂದ್ರಶೇಖರಪ್ಪ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಪದಾಧಿಕಾರಿಗಳು, ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅಭಿಯಾನದ ಯಶಸ್ಸಿಗೆ ಚರ್ಚೆ ನಡೆಸಿದರು