ಸೇನೆ, ಗಡಿ, ಯುದ್ದಗಳ ಬಗ್ಗೆ ಭಾವನಾತ್ಮಕವಾಗಿ ಬಾಯಿ ಚಪಲಕ್ಕೆ ಮಾತಾಡುವುದನ್ನು ಬಿಡಿ ಲೆಹರ್ ಸಿಂಗ್ ಅವರೇ, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಭಾರತ ಮಾತೆಯ ಹೆಮ್ಮಯ ಮಗಳು, ಕರ್ನಲ್ ಸೋಫಿಯಾ ಖುರೇಷಿ ಅವರನ್ನು “ಭಯೋತ್ಪಾದಕರ ಸಹೋದರಿ” ಎಂದು ಅವಮಾನಿಸಿದ ನಿಮ್ಮ ಬಿಜೆಪಿಯ ಸಚಿವ ವಿಜಯ್ ಶಾ ಮಾತುಗಳನ್ನು ಖಂಡಿಸುವ ಧೈರ್ಯವನ್ನಾದರೂ ಮಾಡಿದ್ದೀರಾ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
“ಕರ್ನಲ್ ಸೋಫಿಯಾ ಅವರನ್ನು ಅವಮಾನಿಸಿದ ನಿಮ್ಮ ಬಿಜೆಪಿ ಪಕ್ಷದ ಸಚಿವನಿಗೆ ಸುಪ್ರೀಂಕೋರ್ಟ್ ಕಪಾಳಮೋಕ್ಷ ಮಾಡಿದ್ದಷ್ಟೇ ಅಲ್ಲ, ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ ಎಂದು ಛೀಮಾರಿ ಹಾಕಿದ್ದನ್ನ ಮರೆಯಬೇಡಿ. ಇಷ್ಟಾದರೂ ಸಚಿವಸ್ಥಾನದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿರುವ ನಿಮ್ಮ ಪಕ್ಷದ ನಿಲುವೇನು? ಸೇನಾಧಿಕಾರಿಯನ್ನು ಅವಮಾನಿಸಿದ ಸಚಿವನ ಬೆನ್ನಿಗೆ ನಿಂತು ಯಾವ ಸಂದೇಶ ರವಾನಿಸಿದ್ದೀರಿ? ಈ ಕ್ಷಣದವರೆಗೂ ನಿಮ್ಮ ಪಕ್ಷದ ಸ್ವಯಂ ಘೋಷಿತ ರಾಷ್ಟ್ರಭಕ್ತರಾದ “ಮೋ-ಶಾ” ತುಟಿ ಬಿಚ್ಚಿಲ್ಲ ಯಾಕೆ? ಬಿಜೆಪಿ ಪಕ್ಷದ ನಾಯಕರಷ್ಟು ಭಾರತೀಯ ಸೇನೆಯನ್ನು ಅವಮಾನಿಸಿದಷ್ಟು, ಅನುಮಾನಪಟ್ಟಷ್ಟು ಇತಿಹಾಸದಲ್ಲಿ ಯಾರೂ ಇಲ್ಲ ಎಂಬ ಸತ್ಯ ಮರೆಮಾಚಬೇಡಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
“ರಾಹುಲ್ ಗಾಂಧಿ ಅವರು ಸೇನೆಯನ್ನು ಅವಮಾನಿಸಿದ್ದಲ್ಲ, ಚೀನಾದ ಸೇನೆಯ ಎದುರು ಮಂಡಿಯೂರಿರುವ ಮೋದಿ ಸರ್ಕಾರದ ಹೇಡಿತನವನ್ನು ಬಯಲುಗೊಳಿಸಿದ್ದಾರೆ. ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಉತ್ತರಿಸುವ ಎದೆಗಾರಿಕೆ 56 ಇಂಚಿನ ಪ್ರಧಾನಿಗಂತೂ ಇಲ್ಲ, ಕನಿಷ್ಟ ಪಕ್ಷ ನಿಮ್ಮದೇ ಬಿಜೆಪಿಯ ಅತಿರಥ ಮಹಾರಥ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಸಾಹಸವನ್ನಾದರೂ ಮಾಡಿ” ಎಂದು ಸವಾಲು ಹಾಕಿದ್ದಾರೆ.
“ಚೀನಾ ಅತಿಕ್ರಮಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬಿಜೆಪಿ ಮಾಜಿ ಸಂಸದ, ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮಾಹಿತಿ ಹಕ್ಕಿನಡಿಯಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದು ಯಾಕೆ? “ಭಾರತ ಭೂ ಪ್ರದೇಶವನ್ನು ಚೀನಿಗರು 4,000 ಚದರ ಕಿಮೀ ಆಕ್ರಮಿಸಿಕೊಂಡಾಗ ಮೋದಿ, ಚೀನಾ ಸೇನೆ ನಮ್ಮ ಪ್ರದೇಶದೊಳಗೆ ಬಂದಿಲ್ಲ” ಎಂದು ಹೇಳುತ್ತಿದ್ದಾರೆ ಎಂದು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ ಸುಬ್ರಮಣಿಯನ್ ಸ್ವಾಮಿಯ ಹೇಳಿಕೆಗೆ ಉತ್ತರ ಇದ್ಯಾ” ಎಂದು ಕೇಳಿದ್ದಾರೆ.
“ಅರುಣಾಚಲ ಪ್ರದೇಶದಲ್ಲಿ ಭಾರತದ ಹಳ್ಳಿಗಳ ಹೆಸರನ್ನೇ ಚೀನಾ ಸರ್ಕಾರ ಬದಲಾಯಿಸಿದಲ್ಲದೇ, ಹೊಸ ಹಳ್ಳಿಗಳನ್ನು ನಿರ್ಮಾಸಿರುವ ಬಗ್ಗೆ ಅರುಣಾಚಲ ಪ್ರದೇಶದ ಸಂಸದ “ತಪಿರ್ ಗಾವೋ” ಸ್ಪಷ್ಟವಾಗಿ ಹೇಳಿಕೆ ನೀಡಿರುವುದರ ಬಗ್ಗೆ ದೇಶದ ಜನರಿಗೆ ಸತ್ಯ ಹೇಳುವ ಧೈರ್ಯ ಇದಿಯಾ? 38 ಸಾವಿರ ಚದರ ಕಿಲೋಮೀಟರ್ ಭೂಪ್ರದೇಶ ಆಕ್ರಮಿಸಿಕೊಂಡಿರುವುದನ್ನು ಸದನದಲ್ಲೇ ಕೇಂದ್ರದ ವಿದೇಶಾಂಗ ರಾಜ್ಯ ಸಚಿವರಾಗಿದ್ದ ಮುರುಳಿಧರನ್ ಒಪ್ಪಿಕೊಂಡಿರುವುದು ಸುಳ್ಳಾ” ಎಂದು ಪ್ರಶ್ನಿಸಿದ್ದಾರೆ.
“ಪ್ರಧಾನಿ ನರೆಂದ್ರ ಮೋದಿ ಚೀನಾವನ್ನು ಕೆಂಪು ಕಣ್ಣಿನಿಂದ ನೋಡುವುದು ದೂರದ ಮಾತು, ನಮ್ಮ ಗಡಿ,ಭೂಮಿಯನ್ನ ಉಳಿಸಲು ಸಹಜವಾಗಿ ಕಣ್ಣಲ್ಲಿ ಕಣ್ಣಿಟ್ಟು ಉತ್ತರ ನೀಡುವ ಧೈರ್ಯವನ್ನಾದರೂ ಮಾಡಲಿ. ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವ ರಾಹುಲ್ ಗಾಂಧಿಯವರಿಗೆ ಉತ್ತರಿಸದೆ,ರಾಜಕೀಯ ನಾಯಕರಂತೆ ಹೇಳಿಕ ನೀಡುವ ನ್ಯಾಯಾಧೀಶರ ನಿರ್ದೇಶನಗಳ ಹಿಂದೆ ಅವಿತುಕೊಳ್ಳುವುದು ಬಿಡಿ” ಎಂದು ಕುಟುಕಿದ್ದಾರೆ.
“ದೇಶದ ಜನರು ಇಡೀ ನ್ಯಾಯಾಂಗ ವ್ಯವಸ್ಥೆಯ ಕುಸಿದಿರುವ ಅಧಃಪತನದ ಬಗ್ಗೆ ಹಾದಿ ಬೀದಿಯಲ್ಲಿ ಮಾತಾಡುವಂತಾಗಿದೆ. ನ್ಯಾಯಂಗ,ಕಾರ್ಯಾಂಗ,ಶಾಸಕಾಂಗ ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸಬೇಕೆ ಹೊರತು ಗುಪ್ತಸಂಘಸೂಚಿಗಳಂತೆ ಅಲ್ಲ. ಇಡೀ ನ್ಯಾಯಂಗ ವ್ಯವಸ್ಥೆ ಹಾದಿ ತಪ್ಪಿರುವುದಕ್ಕೆ ಬಿಜೆಪಿ ವಕ್ತಾರೆಯನ್ನೆ ಬಾಂಬೆ ಹೈಕೋರ್ಟ್ನ ನ್ಯಾಯಧೀಶೆಯನ್ನಾಗಿ ಮಾಡಲು ಶಿಪಾರಸ್ಸು ಮಾಡಿರುವ ಹಿಡನ್ ಅಜೆಂಡಾಗಳು ದೇಶ ಎದುರು ಬಯಲಾಗುತ್ತಿದೆ. ರಾಹುಲ್ ಗಾಂಧಿಯವರನ್ನು “ನೀವು ಭಾರತೀಯರಾ?” ಎಂದು ಪ್ರಶ್ನಿಸಿರುವ ನ್ಯಾಯಧೀಶರ ಹಿನ್ನಲೆ ಹಾಗೂ ಅವರ ಅಕ್ಕಪಕ್ಕದಲ್ಲಿರುವ ನಾಯಕರುಗಳ ಫೋಟೋಗಳು ಜಗಜ್ಜಾಹೀರಾಗಿದೆ. ನ್ಯಾಯಂಗವನ್ನೇ ರಾಜಕೀಯಗೊಳಿಸಿರುವ ಬಿಜೆಪಿಗೆ ಭವಿಷ್ಯತ್ತು ಅತ್ಯಂತ ಅಪಾಯವಾಗರಲಿದೆ ಎನ್ನುವುದನ್ನ ಮರೆಯಬೇಡಿ” ಎಂದು ಎಚ್ಚರಿಸಿದ್ದಾರೆ.
