ಬಡ್ಡಿ ಹಣದ ವಿಚಾರಕ್ಕೆ ಮಹಿಳೆಗೆ ಕಿರುಕುಳ ನೀಡಿದ ಕಾರಣ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಅಕ್ಕಪಕ್ಕದವರು ಬಚಾವ್ ಮಾಡಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಚಿಂತಾಮಣಿ ನಗರ ಠಾಣಾ ವ್ಯಾಪ್ತಿಯ ವೆಂಕಟಗಿರಿ ಕೋಟೆಯಲ್ಲಿ ನಡೆದಿದೆ.
ಚಿಂತಾಮಣಿ ನಗರದ ವೆಂಕಟಗಿರಿ ಕೋಟೆಯ ವಾಸಿ ಫಿರ್ದೋಸ್ ಉನ್ನಿಸಾ(33 ವರ್ಷ)ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಮಹಿಳೆ. ಫಿರ್ದೋಸ್ ಉನ್ನಿಸಾ ಅಣ್ಣ ಎಂ ಡಿ ಸೈಫ್ಉಲ್ಲಾ ರವರು ಅದೇ ವಾರ್ಡಿನ ಇಬ್ಬರು ವ್ಯಕ್ತಿಗಳಿಗೆ ವಾಹನಗಳನ್ನು ಅಡವಿಟ್ಟು 3 ಲಕ್ಷ ರೂ. ಹಣ ಸಾಲದ ರೂಪದಲ್ಲಿ ಬಡ್ಡಿಗಾಗಿ ಪಡೆದಿದ್ದರು.

ಕೆಲ ದಿನಗಳಿಂದ ಬಡ್ಡಿ ಹಣ ಹಾಗೂ ಸಾಲದ ಹಣ ಹಿಂತಿರುಗಿಸದೆ ಇರುವ ಕಾರಣಕ್ಕೆ ರಾತ್ರಿ ಸಾಲ ನೀಡಿದ ವ್ಯಕ್ತಿಗಳು ಫಿರ್ದೋಸ್ ಉನ್ನಿಸಾರವರ ಮನೆ ಬಳಿ ಹೋಗಿ ಹಣದ ವಿಚಾರಕ್ಕೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಫಿರ್ದೋಸ್ ಉನ್ನಿಸಾ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಕೂಡಲೇ ಅಕ್ಕಪಕ್ಕದವರು ಅವರನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ಪದಾಧಿಕಾರಿಗಳನ್ನು ಜಡ್ಜ್ ಆಗಿ ನೇಮಿಸುವ ಪ್ರವೃತ್ತಿ ನಿಲ್ಲಬೇಕು
ಘಟನೆ ಕುರಿತು ಫಿರ್ದೋಸ್ ಉನ್ನಿಸಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
