ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರಿನಿಂದಾಗಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಹುತೇಕರು ಗುಣಮುಖರಾಗಿ, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಹೊಸದಾಗಿ ದಾಖಲಾಗುವವರ ಸಂಖ್ಯೆಯೂ ಇಳಿಮುಖಗೊಂಡಿದೆ. ನೀರಿನ 03 ಮಾದರಿಗಳ ವರದಿ ಕೂಡ ಬಂದಿದ್ದು, ನೀರಿನಲ್ಲಿ ಯಾವುದೇ ವಿಷಕಾರಿ ರಾಸಾಯನಿಕ ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಹಲವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. “ಸಾರ್ವಜನಿಕರು ಕಾಯಿಸಿ, ಆರಿಸಿದ ನೀರನ್ನೇ ಉಪಯೋಗಿಸಬೇಕು. ಯಾವುದೇ ಆಹಾರ ಸೇವನೆಗೂ ಮುನ್ನ ಕೈ-ಕಾಲುಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ರಂಗನಾಥ್ ಅವರು ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. “ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಐಎಡಿಎಫ್‌ಸಿ ಕೇಂದ್ರಕ್ಕೆ ಕವಾಡಿಗರ ಹಟ್ಟಿಯಲ್ಲಿ ಸಂಗ್ರಹಿಸಲಾದ ನೀರಿನ 03 ಮಾದರಿಗಳನ್ನು ಕಳುಹಿಸಿಕೊಡಲಾಗಿತ್ತು. ನೀರಿನಲ್ಲಿ ಯಾವುದೇ ರಾಸಾಯನಿಕ ಅಂಶಗಳು ಕಂಡುಬಂದಿಲ್ಲವೆಂದು ವರದಿ ಹೇಳಿದೆ. ಆದರೆ, ಕಾಲರಾಕ್ಕೆ ಕಾರಣವಾಗಬಹುದಾದ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿವೆ. ಈಗಾಗಲೆ ಕವಾಡಿಗರ ಹಟ್ಟಿಗೆ ಪ್ರತ್ಯೇಕವಾಗಿ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
“ಈವರೆಗೆ ಒಟ್ಟು 226 ಜನ ದಾಖಲಾಗಿದ್ದು, 188 ಗುಣಮುಖರಾಗಿದ್ದಾರೆ. ಬುಧವಾರ 18 ಮಂದಿ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಪ್ರಸ್ತುತ ಇಬ್ಬರು ಜಿಲ್ಲಾಸ್ಪತ್ರೆ ಹಾಗೂ 31 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ವಿವರಿಸಿದ್ದಾರೆ.