ದೇಶದಲ್ಲಿ ನಡೆದ ದಲಿತರ ಹತ್ಯಾಕಾಂಡಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಈ ಹೊತ್ತಿನ ದಲಿತ ಹೊಸತಲೆಮಾರಿನಲ್ಲಿ ಒಂದು ಎಚ್ಚರ ಮೂಡಿಸಬೇಕಾಗಿದೆ. ಆಂಧ್ರಪ್ರದೇಶದ ಕರಾವಳಿ ಪ್ರದೇಶದ ಗುಂಡೂರು ಜಿಲ್ಲೆಯ ಚಂಡೂರು (ಈಗ ಬಾಪಟ್ಲಾ ಜಿಲ್ಲೆ ವ್ಯಾಪ್ತಿಯಲ್ಲಿದೆ) ಹತ್ಯಾಕಾಂಡ ನಡೆದು ಇಂದಿಗೆ 34 ವರ್ಷಗಳು ಉರುಳಿವೆ.
ಜುಲೈ 7, 1991 ರಂದು ಸಿನೆಮಾ ಮಂದಿರದಲ್ಲಿ ಆಕಸ್ಮಿಕವಾಗಿ ರೆಡ್ಡಿ ಯುವಕನಿಗೆ ರವಿ ಎನ್ನುವ ದಲಿತ ಯುವಕನ ಕಾಲು ತಗುಲುತ್ತದೆ. ತಕ್ಷಣವೇ ರವಿ ಕಾಲು ತಗುಲಿದ ಯುವಕನ ಕ್ಷಮೆ ಕೇಳುತ್ತಾನೆ. ಆದರೂ ರೆಡ್ಡಿ ಸಮುದಾಯದ ಇತರೆ ಯುವಕರು ರವಿಯನ್ನು ಒದೆಯುತ್ತಾರೆ. ಆತನಿಗೆ ಬಲವಂತವಾಗಿ ಬ್ರಾಂದಿ ಕುಡಿಸಿ, ಕುಡಿದು ನಮ್ಮ ರೆಡ್ಡಿ ಹೆಣ್ಣುಮಕ್ಕಳ ಮೇಲೆ ಅನುಚಿತವಾಗಿ ನಡೆದುಕೊಂಡಿದ್ದಾನೆ ಎಂದು ಅವನನ್ನು ಬಂಧಿಸಲು ಪೋಲೀಸ್ ಮೇಲೆ ಒತ್ತಡ ತರಲಾಗುತ್ತದೆ. ಇದಾದ ಮೇಲೆ ರವಿಯ ಕುಟುಂಬ ರೆಡ್ಡಿಗಳನ್ನು ಎದುರು ಹಾಕಿಕೊಂಡು ಬದುಕಲು ಆಗುವುದಿಲ್ಲ ಎಂದು ಊರನ್ನೆ ತೊರೆಯುವ ನಿರ್ಧಾರ ಮಾಡುತ್ತಾರೆ. ಈ ಸಂದರ್ಭದಲ್ಲಿ ದಲಿತ ಕೇರಿಯ ಎಲ್ಲರೂ ಒಗ್ಗಟ್ಟಾಗಿ ರವಿಯ ಕುಟುಂಬ ಊರು ತೊರೆಯದಂತೆ ಬೆಂಬಲವಾಗಿ ನಿಲ್ಲುತ್ತಾರೆ. ದಲಿತರ ಈ ಒಗ್ಗಟ್ಟು ಊರಿನ ರೆಡ್ಡಿ ಸಮುದಾಯವನ್ನು ಕೆರಳಿಸುತ್ತದೆ. ದಲಿತರಿಗೆ ಬಹಿಷ್ಕಾರ ಹಾಕಲಾಗುತ್ತದೆ. ದಿನಬೆಳಗಾದರೆ ಮಾಲಾ ಸಮುದಾಯದ ದಲಿತರು ರೆಡ್ಡಿಗಳ ಭತ್ತದ ಗದ್ದೆಗಳಿಗೆ ಹೋಗಬೇಕು. ಇವರು ಕೊಟ್ಟ ಕೂಲಿಯಿಂದಲೇ ಬದುಕು ಸವೆಸಬೇಕು. ಇಂತಹ ಸಂದರ್ಭದಲ್ಲಿ ಸಾಮಾಜಿಕ ಬಹಿಷ್ಕಾರ ದಲಿತರನ್ನು ಇನ್ನಿಲ್ಲದ ಸಂಕಷ್ಟಕ್ಕೆ ದೂಡುತ್ತದೆ. ಮೂಲಭೂತ ಅಗತ್ಯ ಸರಕುಗಳನ್ನು ಖರೀದಿಸಲು ಮತ್ತು ಜೀವನೋಪಾಯಕ್ಕಾಗಿ ಕೆಲಸಕ್ಕೆ ಪ್ರಕಾಶಂ ಜಿಲ್ಲೆಯ ಓಂಗೋಲ್ ನಗರಕ್ಕೆ ತೆರಳುತ್ತಾರೆ.
ರೆಡ್ಡಿಗಳು ವರ್ಣಾಶ್ರಮ ಪದ್ದತಿಯಂತೆ ಬ್ರಾಹ್ಮಣರ ನಂತರ ಕ್ಷತ್ರಿಯರ ಸ್ಥಾನ ಪಡೆಯಲು ಬ್ರಾಹ್ಮಣೇತರ ಚಳವಳಿಗಳಲ್ಲಿಯೂ ಗುರುತಿಸಿಕೊಂಡವರು. ಹಾಗಾಗಿ ಸಾಮಾನ್ಯವಾಗಿ ಶೂದ್ರರು ಪಾರಂಪರಿಕವಾಗಿ ನಮ್ಮ ಕಾಲಾಳುಗಳು ಸೇವಕರು ನಮ್ಮ ಹೊಲಮನೆಗಳಲ್ಲಿ ಗೇಯುವ ಜೀತದಾಳುಗಳು ಎಂದು ಭಾವಿಸಿದವರು. ಈ ಎಲ್ಲ ಕಾರಣಗಳು ಚಂಡೂರಿನ ದಲಿತರಿಗೆ ಕಟ್ಟುನಿಟ್ಟಿನ ಬಹಿಷ್ಕಾರ ಹಾಕಿ ಅವರಿಗೆ ನಮ್ಮ ಬೆಂಬಲವಿಲ್ಲದೆ ಬದುಕುವುದೇ ಅಸಾಧ್ಯ ಎನ್ನುವ ಪಾಠ ಕಲಿಸಬೇಕೆಂದು ಹಲವು ಬಗೆಯ ಕ್ರೌರ್ಯಗಳಿಗೆ ಯೋಜನೆ ರೂಪಿಸುತ್ತಾರೆ.

ಹೀಗೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಹೊತ್ತಿಗೆ, ದಲಿತರ ಮೇಲೆ ದಾಖಲಾಗಿದ್ದ ಹಳೆಯ ಕೇಸುಗಳ ನೆಪದಲ್ಲಿ ಪೊಲೀಸ್ ಪಡೆ ಆಗಸ್ಟ್ 6, 1991 ಬೆಳಗಿನ 11 ಗಂಟೆಗೆ ದಿಢೀರನೆ ನುಗ್ಗುತ್ತಾರೆ. ಈ ಹಠಾತ್ ದಾಳಿಗೆ ಬೆಚ್ಚಿಬಿದ್ದ ದಲಿತ ಗಂಡಸರು ಮನೆಬಿಟ್ಟು ಓಡುತ್ತಾರೆ. ಮನೆಗಳಲ್ಲಿ ಉಳಿದ ಮಹಿಳೆಯರಿಗೆ ಗಂಡಸರ ಬಗ್ಗೆ ವಿಚಾರಣೆ ನೆಪದಲ್ಲಿ ಹಿಂಸೆ ಕೊಡಲಾರಂಭಿಸುತ್ತಾರೆ. ಹೀಗೆ ಕೇರಿಯಿಂದ ಹೊರಬಿದ್ದ ದಲಿತ ಗಂಡಸರನ್ನು ಮುಂಚೆಯೇ ಯೋಜನೆ ರೂಪಿಸಿದಂತೆ ಮಚ್ಚು ಕುಡಗೋಲು ಕಟ್ಟಿಗೆ ಕೊಡಲಿ ಹಿಡಿದು ಕಾಯುತ್ತಿದ್ದ ರೆಡ್ಡಿಗಳು ದಲಿತರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗುತ್ತಾರೆ. ಸಿಕ್ಕ ಸಿಕ್ಕ ಹಾಗೆ ಥಳಿಸುತ್ತಾರೆ. ಕೆಲವರು ತಪ್ಪಿಸಿಕೊಂಡು ದಿಕ್ಕಾಪಾಲು ಓಡಿದರೆ, ಮತ್ತೆ ಕೆಲವರು ರೆಡ್ಡಿಗಳ ಬಲವಾದ ಹೊಡೆತಗಳಿಂದ ನೆಲಕ್ಕುರುಳಿ ನರಳತೊಡಗುತ್ತಾರೆ. ಲೆಕ್ಕಕ್ಕೆ ಸಿಕ್ಕಂತೆ ಈ ಹತ್ಯಾಕಾಂಡದಲ್ಲಿ ಎಂಟು ಜನ ದಲಿತರನ್ನು ಕೊಲೆ ಮಾಡಲಾಗುತ್ತದೆ. ಕೆಲವರ ಶವಗಳನ್ನು ಹೊಲಗಳಲ್ಲಿ ಎಸೆದರೆ ಮತ್ತೆ ಕೆಲವು ಶವಗಳನ್ನು ಗೋಣಿ ಚೀಲಕ್ಕೆ ತುಂಬಿ ಹತ್ತಿರದಲ್ಲಿ ಹರಿಯುತ್ತಿದ್ದ ಕ್ಯಾನಲ್‌ಗೆ ಎಸೆಯಲಾಗುತ್ತದೆ.

ಈ ದಾಳಿಯಲ್ಲಿ ಸಿಕ್ಕು ನಲುಗಿ ತಪ್ಪಿಸಿಕೊಂಡ ದಲಿತ ಮಹಿಳೆಯೊಬ್ಬಳು 17 ಕಿಲೋ ಮೀಟರ್ ನಡೆದು ಬಂದು ಗುಂಟೂರಿನ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ವಿಷಯ ತಿಳಿಸುವ ತನಕ ಈ ಹತ್ಯಾಕಾಂಡದ ಸಣ್ಣ ಸುದ್ದಿಯೂ ಹೊರ ಲೋಕಕ್ಕೆ ತಿಳಿದಿರಲಿಲ್ಲ. ಆ ನಂತರ ಆಂಧ್ರದ ದಲಿತ ಹೋರಾಟಗಾರರು, ದಲಿತ ಸಂಘಟನೆಗಳು ಚಂಡೂರಿನ ಹತ್ಯಾಕಾಂಡದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದರು. ಬೊಜ್ಜ ತಾರಕಂ ಮೊದಲಾದವರು ಈ ಹೋರಾಟದ ಮುಂದಾಳತ್ವ ವಹಿಸಿದರು. ಹತ್ಯಾಕಾಂಡದ ನಂತರ ಉಳಿದ ಕೆಲವು ದಲಿತರು ಭಯಗೊಂಡು ತೆನಾಲಿಗೆ ಸ್ಥಳಾಂತರಗೊಂಡರು. ಅಲ್ಲಿ ಅವರಿಗೆ ಸಾಲ್ವೇಶನ್ ಆರ್ಮಿ ಚರ್ಚ್ ಆಶ್ರಯ ನೀಡಿತು.
ಈ ಲೇಖನ ಓದಿದ್ದೀರಾ?: ಯುವತಿಯ ಅಪಹರಣ- ಪ್ರತ್ಯಕ್ಷ ಸಾಕ್ಷಿಯಿಂದ ಎಸ್‌ಐಟಿಗೆ ದೂರು; ಅಲ್ಲಿದ್ದ ಆ ವ್ಯಕ್ತಿ ಯಾರು ಗೊತ್ತೇ?
ಘಟನೆಗೆ ಸಂಬಂಧಿಸಿದಂತೆ ಒಟ್ಟು 12 ಪ್ರತ್ಯೇಕ ಪ್ರಕರಣಗಳಲ್ಲಿ 212 ಜನರ ಮೇಲೆ ಕೇಸ್ ದಾಖಲಾಯಿತು. 16 ವರ್ಷ ನಡೆದ ವ್ಯಾಜ್ಯದ ಕಾಲಾವಧಿಯಲ್ಲಿ 33 ಪ್ರತಿವಾದಿಗಳು ಸಾವನ್ನಪ್ಪಿದರು. ನಂತರ ಸುಪ್ರೀಂ ಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೆಲವು ಆರೋಪಗಳನ್ನು ವಜಾಗೊಳಿಸಿತು. ನ್ಯಾಯಮೂರ್ತಿಗಳಾದ ಎಲ್ ನರಸಿಂಹರೆಡ್ಡಿ ಮತ್ತು ಎಂ.ಎಸ್ ಜೈಸ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪ್ರಾಸಿಕ್ಯೂಷನ್ ಸಾವಿನ ನಿಖರವಾದ ಸಮಯ, ಸಂಭವಿಸಿದ ಸ್ಥಳ ಮತ್ತು ದಾಳಿಕೋರರ ಗುರುತನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿತು. ಕಡೆಯದಾಗಿ ಇಷ್ಟೆಲ್ಲ ದರ್ಪ ದೌರ್ಜನ್ಯ ನಡೆದರೂ 16 ವರ್ಷಗಳ ಕಾಲ ನಡೆದ ನಿರಂತರ ಕೋರ್ಟ್ ವ್ಯಾಜ್ಯಗಳ ಫಲವಾಗಿ ಜುಲೈ 31, 2007 ರಂದು ವಿಶೇಷ ನ್ಯಾಯಾಧೀಶರು SCs, STs (ದೌರ್ಜನ್ಯ ತಡೆ) ಕಾಯ್ದೆಯಡಿ 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 35 ಇತರರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ಮತ್ತು ತಲಾ 2,000 ರೂ. ದಂಡ ವಿಧಿಸಲಾಯಿತು.

ಆಂಧ್ರಪ್ರದೇಶ ನಾಗರಿಕ ಸ್ವಾತಂತ್ರ್ಯ ಸಮಿತಿಯ ‘ದಿ ಚುಂಡೂರ್ ಕಾರ್ನೇಜ್ – ಆಗಸ್ಟ್ 6, 1991’ ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಲಾಯಿತು. ತುಲಿಕಾ ಬುಕ್ಸ್ ಪ್ರಕಟಿಸಿದ ‘ದಿ ಹಂಗರ್ ಆಫ್ ದಿ ರಿಪಬ್ಲಿಕ್: ಅವರ್ ಪ್ರೆಸೆಂಟ್ ಇನ್ ರೆಟ್ರೋಸ್ಪೆಕ್ಟ್’ (2021) ಸಂಕಲನದಲ್ಲಿ ಈ ವರದಿಯನ್ನು ಮರುಮುದ್ರಣ ಮಾಡಲಾಯಿತು.
ಆಂಧ್ರಪ್ರದೇಶದ ಬಲಾಡ್ಯ ಭೂಮಾಲಿಕ ರೆಡ್ಡಿ ಕಮ್ಮಾ ಮೊದಲಾದ ಮೇಲ್ಜಾತಿ ಮೇಲ್ವರ್ಗಗಳ ದೌರ್ಜನ್ಯಕ್ಕೆ ಇಂದಿಗೂ ದಲಿತರು ಬಲಿಯಾಗುತ್ತಿದ್ದಾರೆ. ಎಂಬತ್ತು ತೊಂಬತ್ತರ ದಶಕಗಳ ನಂತರದಲ್ಲಿ ನಿಧಾನಕ್ಕೆ ದಲಿತರಲ್ಲಿ ಜಾಗೃತಿ ಮೂಡುತ್ತಿದ್ದು, ಶಿಕ್ಷಣದ ಪ್ರಮಾಣವೂ ಹೆಚ್ಚುತ್ತಿದೆ. ಬಹುಸಂಖ್ಯಾತ ದಲಿತ ಕುಟುಂಬಗಳ ಜತೆ ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಆದಾಗ್ಯೂ, ಆಂಧ್ರದ ಸಾವಿರಾರು ಹಳ್ಳಿಗಳಲ್ಲಿ ದಲಿತರ ಸ್ಥಿತಿ ಈಗಲೂ ಶೋಚನೀಯವಾಗಿದೆ.