ಭಾರತದಲ್ಲಿ ಆಚರಿಸುವ ಸಾಂಪ್ರದಾಯಿಕ ಹಬ್ಬಗಳಲ್ಲಿ ರಕ್ಷಾ ಬಂಧನ ಕೂಡ ಒಂದು. ಅದರಲ್ಲೂ, ಶ್ರಾವಣ ಮಾಸದ ಹುಣ್ಣಿಯ ದಿನದಂದು ರಕ್ಷಾ ಬಂಧನ ಆಚರಣೆ ನಡೆಯುತ್ತದೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ತಮ್ಮ ಸಹೋದರ ತಮಗೆ ರಕ್ಷಕನಾಗಿ ಜೊತೆಗಿರುತ್ತಾನೆ ಎಂಬ ನಂಬಿಕೆಯೊಂದಿಗೆ ರಕ್ಷಾ ಬಂಧನ ಆಚರಿಸಲಾಗುತ್ತದೆ. ಆದರೆ, ಮಧ್ಯಪ್ರದೇಶದ ಬುಡಕಟ್ಟು ಸಮುದಾಯವೊಂದರಲ್ಲಿ ಸಹೋದರರ ಬದಲಾಗಿ ಗಂಡನಿಗೆ ರಾಖಿ ಕಟ್ಟುವ ಮೂಲಕ ಹಬ್ಬ ಆಚರಿಸುವ ಪ್ರತೀತಿ ಇದೆ.
ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಹಲವೆಡೆ ನೆಲೆಸಿರುವ ಗೊಂಡ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯರು ಗಂಡನಿಗೆ ರಾಖಿ ಕಟ್ಟುವ ಸಂಪ್ರದಾಯವಿದೆ. ಈ ಸಮುದಾಯದ ಮಹಿಳೆಯರು ರಕ್ಷಾ ಬಂಧನದ ದಿನ ತಮ್ಮ ಸಹೋದರರಿಗೆ ರಾಖಿ ಕಟ್ಟುವುದಿಲ್ಲ. ಬದಲಾಗಿ, ತಮ್ಮ ಗಂಡನಿಗೆ ರಾಖಿ ಕಟ್ಟುತ್ತಾರೆ. ಈ ಸಂಪ್ರದಾಯ ಹಲವಾರು ದಶಕಗಳಿಂದ ನಡೆದುಬಂದಿದೆ.
ಗೊಂಡ ಸಮುದಾಯದ ಮಹಿಳೆಯರು ತಮ್ಮ ಗಂಡನೇ ತಮಗೆ ರಕ್ಷಕನೆಂದು ಭಾವಿಸುತ್ತಾರೆ. ತಮ್ಮ ಜೀವಿತಾವಧಿಯ ಕೊನೆಯವರೆಗೂ ತಮಗಾಗಿ ದುಡಿಯುವವರು, ತಮ್ಮ ರಕ್ಷಣೆಯ ಹೊಣೆ ಹೊರುವವರು ತಮ್ಮ ಗಂಡನೇ ಎಂಬುದು ಈ ಸಮುದಾಯದ ಮಹಿಳೆಯರ ನಂಬಿಕೆ. ಹೀಗಾಗಿ, ಅವರು ತಮ್ಮ ಗಂಡನಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸುತ್ತಾರೆ.
ಈ ಲೇಖನ ಓದಿದ್ದೀರಾ?; ಯುವತಿಯ ಅಪಹರಣ- ಪ್ರತ್ಯಕ್ಷ ಸಾಕ್ಷಿಯಿಂದ ಎಸ್‌ಐಟಿಗೆ ದೂರು; ಅಲ್ಲಿದ್ದ ಆ ವ್ಯಕ್ತಿ ಯಾರು ಗೊತ್ತೇ?
“ನಮ್ಮ ಸಮುದಾಯದಲ್ಲಿ ಮಹಿಳೆಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದಿಲ್ಲ. ಏಕೆಂದರೆ, ಅವರು ಪತಿಯನ್ನು ತಮ್ಮ ಜೀವನದ ನಿಜವಾದ ರಕ್ಷಕನೆಂದು ಹೆಣ್ಣುಮಕ್ಕಳು ಭಾವಿಸುತ್ತಾರೆ. ಈ ಸಂಪ್ರದಾಯ ಹಿಂದಿನಿಂದಲೂ ನಡೆದುಬಂದಿದೆ. ಇತ್ತೀಚೆಗೆ, ಈ ಅಚರಣೆ ಬದಲಾಗುತ್ತಿದ್ದು, ಮಹಿಳೆಯರು ತಮ್ಮ ಸಹೋದರರಿಗೂ ರಾಖಿ ಕಟ್ಟಲು ಆರಂಭಿಸಿದ್ದಾರೆ” ಎಂದು ಗೊಂಡ ಸಮುದಾಯದ ಮುಖಂಡ ಅಂಜೆಲಾಲ್ ಗೌರ್ ಹೇಳಿದ್ದಾರೆ.