- ಜಾಲಹಳ್ಳಿ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ
- ಶಾಸಕಿ ಕರೆಮ್ಮ ನಾಯಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆಗೆ ಆಗ್ರಹ
ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ನೂರಿತ ತಜ್ಞ ವೈದ್ಯರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಗುರುವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಒತ್ತಾಯಿಸಿದೆ. ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆಯ ಅವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ರಾಜು ನಾಯಕ ಮಾತನಾಡಿ, “ತಾಲೂಕಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾಲಹಳ್ಳಿ ಪಟ್ಟಣದಲ್ಲಿ ಸುಮಾರು 30,000 ಜನಸಂಖ್ಯೆ ಇದೆ. ಆದರೆ, ಗ್ರಾಮೀಣ ಪ್ರದೇಶದ ಉಪ – ಕೇಂದ್ರಗಳಲ್ಲಿ ದೊರಕುವ ಸಣ್ಣ ಸೌಲಭ್ಯ ಸಹ ಈ ಸಮುದಾಯ ಅಸ್ಪತ್ರೆಯಲ್ಲಿ ಸಿಗುವುದಿಲ್ಲ” ಎಂದು ಆರೋಪಿಸಿದರು.
“65 ಜನ ಸಿಬ್ಬಂದಿಗಳು ಇರಬೇಕಾದ ಈ ಆಸ್ಪತ್ರೆಯಲ್ಲಿ ಕೇವಲ 16 ಸಿಬ್ಬಂದಿ ಮಾತ್ರ ಇದ್ದಾರೆ. ತಜ್ಞ ವೈದ್ಯರ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಆಸ್ಪತ್ರೆಯಲ್ಲಿ ಹೇಳೊರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. ರಾತ್ರಿ ವೇಳೆಯಲ್ಲಿ ಹೆರಿಗೆಗೆ ವೈದ್ಯರು ಇರದ ಕಾರಣ ನರ್ಸ್‌ಗಳೇ ಗತಿ ಎಂಬಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಯಿಲ್ಲದೆ ಗಬ್ಬು ನಾರುವಂತಾಗಿದೆ. ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಇಲ್ಲದ ಆಸ್ಪತ್ರೆಯಲ್ಲಿ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಸ್ಥಳೀಯ ಶಾಸಕಿ ಕರಿಯಮ್ಮ ಜಿ.ನಾಯಕ ಅವರು ಹಾಗೂ ಜಿಲ್ಲಾ ಅರೋಗ್ಯ ಇಲಾಖೆಯ ಅಧಿಕಾರಿಗಳು ಈ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಕಾರು ಅಪಘಾತ; ಪ್ರವಾಸಕ್ಕೆ ತೆರಳಿದ ಕಾನೂನು ವಿದ್ಯಾರ್ಥಿ ಸಾವು
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ರೀಯಾಜ್ ಆರ್ತಿ, ಮುಖಂಡರಾದ ನರಸಣ್ಣ ನಾಯಕ, ಮೌನೇಶ ದಾಸರ್, ರಂಗನಾಥ ನಾಯಕ ಸೇರಿದಂತೆ ಅನೇಕರಿದ್ದರು.