ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಅಪಾಯಕಾರಿಯಾಗಿದೆ. ಸುಳ್ಳು ಸುದ್ಧಿ ಹರಡಿಸುವ ಪತ್ರಿಕೆಯು ವಿಶ್ವಾರ್ಹತೆ ಕಳೆದುಕೊಳ್ಳುತ್ತದೆ. ಜನರಿಗೆ ನಿಖರ ಹಾಗೂ ಸತ್ಯವನ್ನು ತಿಳಿಸುವ ಕಾರ್ಯ ಸುದ್ದಿಗಾರರು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಬೀದರ್ ನಗರದ ಗುರುನಾನಕ್ ದೇವ ಇಂಜಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನೂನ್ಯತೆಗಳನ್ನು ತಿದ್ದುವ ಮುಖಾಂತರ ಜನಾಭಿಪ್ರಾಯ ಮೂಡಿಸುವ ಕಾರ್ಯ ಮಾಧ್ಯಮ ಮಾಡುತ್ತಿದೆ. ಪತ್ರಿಕೋದ್ಯಮ ಬರೀ ವೃತ್ತಿಯಲ್ಲ, ಇದೊಂದು ಪವಿತ್ರ ವೃತ್ತಿಯಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೂ ದೇಶದಲ್ಲಿ ಪತ್ರಿಕೆಗಳ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿವೆ. ಇಂದಿನ ಸಮಾಜದ ಉನ್ನತೀಕರಣಕ್ಕೆ ಲೇಖನಿ ಸದ್ಬಳಕೆಯಾಗುವುದು ಅವಶ್ಯಕತೆಯಿದೆʼ ಎಂದು ನುಡಿದರು.
ʼಇತೀಚೆಗೆ ಸುಳ್ಳು ಸುದ್ದಿ, ಊಹಾ ಪತ್ರಿಕೋದ್ಯಮ ಹೆಚ್ಚಾಗಿದೆ. ಇದರಿಂದ ಮಾಧ್ಯಮ ವಿಶ್ವಾರ್ಹತೆ ಕಳೆದುಕೊಳ್ಳುತ್ತದೆ. ಆಧುನಿಕ ತಂತ್ರಜ್ಞಾನ ಭರಾಟೆಯಲ್ಲಿಯೂ ಸಹ ವಸ್ತುನಿಷ್ಠ ಸುದ್ದಿಗಳ ಮುಖಾಂತರ ವಿಶ್ವಾರ್ಹತೆ ಉಳಿಸಿಕೊಂಡ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೆ ಸಮಾಜದಲ್ಲಿ ಮಹತ್ವವಿದೆ. ಬೀದರ್ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕೌಶಲ್ಯ ತರಬೇತಿ ನೀಡಲು ಜಿಲ್ಲಾಡಳಿತದಿಂದ ನಿವೇಶನ ನೀಡಿ ಮಾಧ್ಯಮ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸಲಾಗುವುದುʼ ಎಂದು ತಿಳಿಸಿದರು.
ಪರಿಸರ ಉಳಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು
ʼವೈಭೋಗ ಜೀವನ ಪದ್ಧತಿ, ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ಪ್ರಕೃತಿ ವಿಕೋಪದಿಂದ ಸಮಾಜದ ಅನೇಕ ದುರ್ಘಟನೆಗಳು ಜರುಗುತ್ತಿವೆ. ಇದೆಲ್ಲವನ್ನೂ ತಪ್ಪಿಸಲು ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಪರಿಸರ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಅರಣ್ಯ ಇಲಾಖೆಯಿಂದ ಹಸಿರು ಹೊದಿಕೆ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ. ವಿಷಕಾರಿಕ ತ್ಯಾಜ್ಯ, ಪ್ಲಾಸ್ಡಿಕ್ ಮುಕ್ತ ರಾಜ್ಯವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕುʼ ಎಂದು ಕರೆ ನೀಡಿದರು.

ʼಗಣೇಶ ಚತುರ್ಥಿ ವೇಳೆ ಎಲ್ಲರೂ ಪಿಓಪಿ ಗಣೇಶ ಮೂರ್ತಿ ಬಳಸದೆ ಮಣ್ಣಿನಿಂದ ಸಿದ್ಧಪಡಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಬೆಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಶೇ90 ರಷ್ಟು ಜನರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುತ್ತಾರೆ. ಅದು ನಮ್ಮ ಭಾಗದಲ್ಲಿಯೂ ಪಾಲನೆಯಾಗಬೇಕಿದೆ. ಕಳೆದೆರಡು ವರ್ಷದಲ್ಲಿ ಬಡವರಿಗೆ ಯಾವುದೇ ತೊಂದರೆ ಆಗದಂತೆ ರಾಜ್ಯದಲ್ಲಿ 7 ಸಾವಿರ ಎಕರೆ ಅರಣ್ಯ ಪ್ರದೇಶ ಒತ್ತುವರಿ ತೆರವುಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಹೆಚ್ಚು ಒತ್ತು ನೀಡಲಾಗಿದ್ದು, ಅದಕ್ಕಾಗಿ 50 ಕೋಟಿ ಅನುದಾನ ಒದಗಿಸಲಾಗಿದೆʼ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼ ಆಧುನಿಕ ಯುಗದಲ್ಲಿ ಪತ್ರಕರ್ತರಿಗೆ ಪ್ರೇರಣೆ ಒದಗಿಸುವ ನಿಟ್ಟಿನಲ್ಲಿ ಮಾಧ್ಯಮ ಅಕಾಡೆಮಿಯಿಂದ ಎಲ್ಲ ವಿಭಾಗದಲ್ಲಿ ಮಾಧ್ಯಮ ತರಬೇತಿ ಆಯೋಜಿಸಲಾಗುತ್ತಿದೆ. ಧ್ವನಿ ಇಲ್ಲದವರ ದನಿಯಾದ ಪತ್ರಕರ್ತರು ಸಮಾಜ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆʼ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಾಧ್ಯಮಗಳ ಪಾತ್ರ ಅತ್ಯವಶ್ಯಕವಾಗಿದೆ. ಸುದ್ದಿಯಲ್ಲಿ ನಿಖರತೆ, ಸುಳ್ಳು ಸುದ್ದಿ ಪತ್ತೆ ಹಚ್ಚುವ ತಂತ್ರಜ್ಞಾನ ಬಳಕೆ, ಎಐ ಬಳಕೆ ಸೇರಿದಂತೆ ಆಧುನಿಕ ಸಮಾಜಕ್ಕೆ ಅನುಗುಣವಾಗಿ ಪತ್ರಕರ್ತರು ಅರಿಯಬೇಕಾದ ಮಹತ್ವದ ವಿಷಯಗಳನ್ನು ಪತ್ರಕರ್ತರಿಗೆ ತಿಳಿಸುವ ಪ್ರಯತ್ನ ಮಾಧ್ಯಮ ಅಕಾಡೆಮಿ ಮಾಡುತ್ತಿದೆ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ ಅತ್ಯಂತ ಮಹತ್ವದ ಸುದ್ದಿಗಳನ್ನು ಹೆಕ್ಕಿ ತರುವ ಕಾರ್ಯ ಗ್ರಾಮೀಣ ಪತ್ರಕರ್ತರಿಂದ ಸಾಧ್ಯ. ಪತ್ರಕರ್ತರ ಮಧ್ಯೆ ಇರುವ ವೈಮನಸ್ಸು ಬಿಟ್ಟು ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕಿದೆ. ವಸ್ತುನಿಷ್ಠ ಸುದ್ದಿಗಳಿಗೆ ಹೆಚ್ಚು ಆದ್ಯತೆ ನೀಡುವುದು ಅಗತ್ಯವಾಗಿದೆʼ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ʼಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ನಿಷ್ಪಕ್ಷಪಾತವಾಗಿ ಬಿತ್ತಿರಿಸಿದರೆ ಜನರ ವಿಶ್ವಾಸ ಗಳಿಸಲು ಸಾಧ್ಯ. ಸುಳ್ಳು ಸುದ್ದಿಗಳಿಗೆ ಆದ್ಯತೆ ನೀಡದೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾದ ಸತ್ಯ ಸುದ್ದಿ ಪ್ರಕಟಿಸಲು ಎಲ್ಲರೂ ಶ್ರಮಿಸಿದರೆ ಸಮಾಜ ಬದಲಾವಣೆಯಾಗಲು ಸಾಧ್ಯವಿದೆʼ ಎಂದು ಹೇಳಿದರು.
ಹಿರಿಯ ಪತ್ರಕರ್ತ ಎಸ್.ಕುಮಾರ್ ʼನ್ಯೂಸ್ ರೂಂ ನಲ್ಲಿ ಎಐ ಮತ್ತು ನಾನುʼ ಹಾಗೂ ಮೈಸೂರು ವಿವಿ ಪ್ರಾಧ್ಯಾಪಕಿ ಸಪ್ನಾ ಎಂ.ಎಸ್ ಅವರು ʼಸುದ್ದಿಯಲ್ಲಿ ನಿಖರತೆ ಮತ್ತು ಪರಿಣಾಮಕಾರಿ ಸಂವಹನʼ ಎಂಬ ವಿಷಯಗಳ ಕುರಿತು ವಿಶ್ಲೇಷಿಸಿದರು.
ತರಬೇತಿಯಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ ಸುಮಾರು 200ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿದ್ದರು. ತರಬೇತಿಯಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.
ಇದನ್ನೂ ಓದಿ : ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ: ತಕ್ಷಣದ ಕ್ರಮಕ್ಕೆ ಡಿಜಿಟಲ್ ಮೀಡಿಯಾ ಫಾರ್ ಡೆಮಾಕ್ರಸಿ ಆಗ್ರಹ
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಗುರುದ್ವಾರಾ ಪ್ರಬಂಧಕ ಸಮಿತಿ ಅಧ್ಯಕ್ಷ ಡಾ.ಬಲಬೀರಸಿಂಗ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ, ಸದಸ್ಯರಾದ ಎಸ್.ರಶ್ಮಿ, ಅಬ್ಬಾಸ್ ಮುಲ್ಲಾ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ, ಬೀದರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.