ಮಲೆನಾಡಿನ ಜನಪದ ಕಲೆಯಲ್ಲಿ ಒಂದಾದ ಹಸೆಚಿತ್ತಾರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಸವಂತೆ ಗ್ರಾಮದ ಕಲಾವಿದೆ ಸರಸ್ವತಿ ಈಶ್ವರ ನಾಯ್ಕ ಅವರಿಗೆ ಈ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ರಾಷ್ಟ್ರಪತಿ ಭವನದಿಂದ ಆಮಂತ್ರಣ ಬಂದಿದೆ.
ಅಂಚೆ ಇಲಾಖೆಯ ಮುಖ್ಯಸ್ಥರು ಅಧಿಕೃತವಾಗಿ ಆಮಂತ್ರಣ ಪತ್ರವನ್ನು ಸರಸ್ವತಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರ ಪತಿ ಹಾಗೂ ಪ್ರಸಿದ್ಧ ಕಲಾವಿದ ಈಶ್ವರ ನಾಯ್ಕ ಸೇರಿದಂತೆ ಹಲವು ಗಣ್ಯರು ಇದ್ದರು. ಈ ಗೌರವಕ್ಕೆ ದಂಪತಿ ಹಾಗೂ ಅವರ ಆತ್ಮೀಯರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.
ಹಸೆಚಿತ್ತಾರ ಕಲೆಯಲ್ಲಿ ಪರಿಣತಿ:
ಈಡಿಗ ಸಮುದಾಯದ ಮೂಲ ಕಲೆಯಾದ ಹಸೆಚಿತ್ತಾರವನ್ನು ಸರಸ್ವತಿ ತಮ್ಮ ತವರುಮನೆಯಿಂದಲೇ ಕಲಿತವರು. ಮದುವೆಯ ನಂತರ ತಮ್ಮ ಪತಿ ಈಶ್ವರ ನಾಯ್ಕ ಅವರಿಂದ ಮತ್ತಷ್ಟು ತರಬೇತಿ ಪಡೆದು ಈ ಕಲೆಯಲ್ಲಿ ಪರಿಣತಿ ಗಳಿಸಿದರು. ಭೂಮಿ ಹುಣ್ಣಿಮೆ ಬುಟ್ಟಿಗಳ ಮೇಲೆ ಕೃಷಿ ಚಟುವಟಿಕೆಗಳ ಸುಂದರ ಚಿತ್ರಣ ಮೂಡಿಸಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಿಂದ ಪ್ರಶಂಸನಾ ಪತ್ರ ಪಡೆದಿದ್ದಾರೆ. ಹಸೆಚಿತ್ತಾರದ ಜತೆಗೆ ಭತ್ತದ ತೆನೆಗಳಿಂದ ಮತ್ತು ಹಿತ್ತಂಡೆ ಹುಲ್ಲಿನಿಂದಲೂ ವಿವಿಧ ಕಲಾಕೃತಿಗಳನ್ನು ರಚಿಸುವುದರಲ್ಲಿ ಇವರು ಸಿದ್ಧಹಸ್ತರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆ:
ಸರಸ್ವತಿ ಅವರು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಲಾಮೇಳಗಳಲ್ಲಿ ಭಾಗವಹಿಸಿದ್ದಾರೆ. ಮೈಸೂರಿನ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ, ಸುರತ್ಕಲ್‌ನಲ್ಲಿ ನಡೆದ ರಾಷ್ಟ್ರೀಯ ಕಲಾ ಮೇಳ ಮತ್ತು ಬಿಹಾರದಲ್ಲಿ ನಡೆದ ದ್ವಿತೀಯ ಲೋಕ ಕಲಾ ಸಂಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಮಾಣಪತ್ರ ಪಡೆದಿದ್ದಾರೆ. ಇದರ ಜತೆಗೆ, ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಹಯೋಗದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಕಲಾ ಸಮ್ಮೇಳನದಲ್ಲಿಯೂ ಪಾಲ್ಗೊಂಡಿದ್ದಾರೆ.

ಭೋಪಾಲ್‌ನಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಮತ್ತು ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರಗಳು ಜಂಟಿಯಾಗಿ ಆಯೋಜಿಸಿದ್ದ ʼಭೂಮಿಕಾʼ ರಾಷ್ಟ್ರೀಯ ಮಹಿಳಾ ಕಲಾ ತರಬೇತಿಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ಕಲಬುರಗಿಯಲ್ಲಿ ನಡೆದ ‘ರಾಷ್ಟ್ರೀಯ ಸರಸ್ ಮೇಳ’ದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಕಲಾರಸಿಕರ ಮನಗೆದ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಜೀವಿಕಾದಿಂದ ಇದೇ ಆಗಸ್ಟ್.10 ರಂದು ರಾಜ್ಯಮಟ್ಟದ ಸಮಾವೇಶ; ಒಕ್ಕೂಟದ ಚುನಾವಣೆ
ಕಲೆಯನ್ನು ಸಮಾಜಕ್ಕೆ ವಿಸ್ತರಿಸಿದ ದಂಪತಿ
ಸರಸ್ವತಿ ಮತ್ತು ಈಶ್ವರ ನಾಯ್ಕ ದಂಪತಿ ತಾವು ಕಲಿತ ವಿದ್ಯೆ ತಮಗಷ್ಟೇ ಸೀಮಿತವಾಗಬಾರದೆಂದು ನಿರ್ಧರಿಸಿ ʼಚಿತ್ತಾರ ಚಾವಡಿʼ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇದರ ಮೂಲಕ ಹಲವು ಆಸಕ್ತ ಮಕ್ಕಳಿಗೆ ಉಚಿತವಾಗಿ ಹಸೆಚಿತ್ತಾರ ಕಲೆಯನ್ನು ಕಲಿಸುತ್ತಿದ್ದಾರೆ. ಇವರ ಈ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ವರ್ಷ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸರಸ್ವತಿ ಅವರ ಪತಿ ಈಶ್ವರ ನಾಯ್ಕ ಅವರಿಗೂ ರಾಷ್ಟ್ರಪತಿ ಭವನದಿಂದ ಆಹ್ವಾನ ಬಂದಿತ್ತು. ಇದೀಗ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಸರಸ್ವತಿ ಅವರಿಗೆ ಆಹ್ವಾನ ಬಂದಿರುವುದು ಇವರ ಕಲಾಪ್ರತಿಭೆಗೆ ಸಂದ ಮತ್ತೊಂದು ದೊಡ್ಡ ಗೌರವವಾಗಿದೆ.