ಧರ್ಮಸ್ಥಳದಲ್ಲಿ ಆ. 6ರಂದು ಸ್ವತಂತ್ರ ಪತ್ರಕರ್ತರ ಮೇಲೆ ನೂರಾರು ಜನ ಸಾಮೂಹಿಕ ದಾಳಿಗಿಳಿದು ಮಾರಣಾಂತಿಕ ಹಲ್ಲೆ ನಡೆಸಿರುವ ಗುಂಡಾವರ್ತನೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸಿದೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಅಧ್ಯಕ್ಷ ಯು.ಬಸವರಾಜ ಮತ್ತು ಪ್ರಧಾನ ಕಾರ್ಯದರ್ಶಿ ಟಿ ಯಶವಂತ “ಮೇಲ್ನೋಟಕ್ಕೆ ಇದೊಂದು ಯೋಜಿತ ಹಾಗು ಸಂಘಟಿತ ದಾಳಿಯಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಾಗು ಸ್ವತಂತ್ರ ಪತ್ರಿಕೋದ್ಯಮದ ಮೇಲೆ ನಡೆದ ಸರ್ವಾಧಿಕಾರಿ ದುಂಡಾವರ್ತನೆಯಾಗಿದೆ” ಎಂದು ಹೇಳಿದೆ.
“ಧರ್ಮಸ್ಥಳವೆಂಬ ಚಿಕ್ಕ ಗ್ರಾಮದಲ್ಲಿ ದಶಕಗಳಿಂದ ನಡೆದಿರುವ, ನೂರಾರು ಅತ್ಯಾಚಾರ ಹಾಗು ಅಸಹಜ ಸಾವುಗಳು, ಕೊಲೆಗಳು, ಭೂಕಬಳಿಕೆಗಳು, ಸುಲಿಗೆಗಳ ವಿಚಾರಗಳ ಬೆಳಕಿನಲ್ಲಿ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾದಳ (SIT) ಕಾಡಿನಲ್ಲಿ ಸಾಕ್ಷಿ ದೂರದಾರರೊಬ್ಬರು ತೋರಿದ ಶವದ ಕುಣಿಗಳನ್ನು ಅಗೆದು ತನಿಖೆಗೆ ಕ್ರಮವಹಿಸಿರುವ ವಿಚಾರ ಈಗ ಜಾಗತಿಕ ಗಮನ ಸೆಳೆದಿದೆ. ಅಲ್ಲಿ ನಡೆದಿರುವ ಪಾಳೆಯಗಾರಿ ಕ್ರೌರ್ಯವನ್ನು ಅಲ್ಲಿನ ಜನ ಹಾಗು ದೌರ್ಜನ್ಯಕ್ಕೊಳಗಾದವರು, ನೊಂದವರು, ದಶಕಗಳ ತಮ್ಮ ನೋವಿಗೆ ಪರಿಹಾರ ಹುಡುಕಿ ತಾವಾಗಿಯೇ ವಿಶೇಷ ತನಿಖಾದಳದ ಮುಂದೆ ಬರುತ್ತಿರುವುದು ನಡೆದಿದೆ. ಕಳೆದ ಒಂದು ತಿಂಗಳಿಂದ ಅಲ್ಲಾಗುತ್ತಿರುವ ದಿನ ನಿತ್ಯದ ಬೆಳವಣಿಗೆಗಳು ಮಾಧ್ಯಮದ ಮೂಲಕ ಹೊರ ಜಗತ್ತಿನ ಗಮನ ಸೆಳೆದಿವೆ. ಅಲ್ಲಿ ಬಹಿರಂಗಗೊಳ್ಳುತ್ತಿರುವ ದೌರ್ಜನ್ಯದ ಸರಣಿಗಳಿಂದ, ಧರ್ಮಸ್ಥಳದ ಜೊತೆ ಸಾಂಸ್ಕೃತಿಕ ನಂಟನ್ನು ಹೊಂದಿರುವ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ. ಆತಂಕದಿಂದ ಈ ತನಿಖೆಯನ್ನು ಎದುರು ನೋಡುತ್ತಿದೆ.
ಇಂತಹ ಸಂದರ್ಭದಲ್ಲಿ ಹಾಗು ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟ ಸೌಜನ್ಯ ಎಂಬ ವಿದ್ಯಾರ್ಥಿನಿಯ ಕುರಿತ ವಿವರಗಳನ್ನು ಪಡೆಯುತ್ತಿರುವಾಗ ಸ್ವತಂತ್ರ ಪತ್ರಿಕೋದ್ಯಮದ ಪತ್ರಕರ್ತರ ಮೇಲೆ ಯೋಜಿತ ಸಾಮೂಹಿಕ ಮಾರಣಾಂತಿಕ ದಾಳಿ ನಡೆದಿರುವುದು, ಈ ತನಿಖೆಯ ಕ್ರಮ ಮತ್ತು ಮಾದ್ಯಮಗಳ ವರದಿಗಳಿಂದ ಭಯಭೀತರಾದ ಕ್ರೌರ್ಯ ಮೆರೆದ ಶಕ್ತಿಗಳೆ ಈ ದಾಳಿಯ ಸಂಚಿನ ಹಿಂದಿರುವುದರ ಕಡೆ ಬೆರಳು ತೋರುತ್ತಿದೆ ಮತ್ತು ಅದು ಹೆಚ್ಚು ಹೆಚ್ಚು ಸ್ಥಳೀಯ ಸಾಕ್ಷಿಗಳು ಮುಂದೆ ಬರುವುದನ್ನು ತಡೆಯುವ ದುರುದ್ದೇಶ ಹೊಂದಿರುವುದು ಕಂಡು ಬರುತ್ತಿದೆ.
ಆದ್ದರಿಂದ, ರಾಜ್ಯ ಸರಕಾರ ಈ ಯೋಜಿತ ಸಾಮೂಹಿಕ ಗೂಂಡಾಗಿರಿಯನ್ನು ಗಂಭೀರವಾಗಿ ಪರಿಗಣಿಸಿ, ಭಾಗಿಯಾದ ಎಲ್ಲರನ್ನು ಮತ್ತು ಅದರ ಹಿಂದಿರುವ ಗೂಂಡಾಗಳನ್ನು ಬಂಧಿಸಬೇಕು ಮತ್ರು ಬಹು ದೊಡ್ಡ ತನಿಖಾ ಸಂಸ್ಥೆ ತನಿಖೆಯ ಕಾರ್ಯಾಚರಣೆಯಲ್ಲಿರುವಾಗ, ಅದನ್ನೆಲ್ಲ ನಿಗ್ರಹಿಸಬಲ್ಲೆನೆಂಬ ಅಹಮಿಕೆಯಿಂದ ನಡೆದ ಸಂಘಟಿತ ದಾಳಿಯನ್ನು ಭೇದಿಸಲು ವಿಶೇಷ ತನಿಖೆಗೆ ಕ್ರಮವಹಿಸುವಂತೆ ರಾಜ್ಯ ಸರಕಾರವನ್ನು ರೈತ ಸಂಘ ಆಗ್ರಹಿಸುತ್ತದೆ.
ಇಂತಹದ್ದೆ ಪಾಳೆಯಗಾರಿ ಕ್ರೌರ್ಯದ ವಿರುದ್ದ ಹೋರಾಟ ನಡೆಸಿದ ರೈತ ಸಂಘದ ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷರಾಗಿದ್ದ ಕಾಂ.ದೇವಾನಂದರ ಮಗಳಾದ ಪದ್ಮಲತಾ, ಸೌಜನ್ಯ, ವೇದವಲ್ಲಿ ಮುಂತಾದವರ ಕೊಲೆಗಳ ಮರುತನಿಖೆಗೂ ಕ್ರಮವಹಿಸಬೇಕು ಹಾಗು ಸಂಘಟಿತ ಹಲ್ಲೆಗೊಳಗಾದ ಪತ್ರಕರ್ತರಿಗೆ ಉಚಿತ ಚಿಕಿತ್ಸೆ ಮತ್ತು ಪರಿಹಾರವನ್ನು ಪ್ರಕಟಿಸಬೇಕು” ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.