ಯಾವುದೇ ಜಾಗದ ಇತಿಹಾಸವನ್ನು ತಿಳಿಸುವಲ್ಲಿ ಪೂರ್ವಜರು ಬಿಟ್ಟುಹೋದ ಶಾಸನಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಅಂತಹ ಶಾಸನಗಳು ಹಾಳಾದರೆ, ಯಾರಿಗೂ ಕಾಣದಂತೆ ಮಣ್ಣಾದರೆ ಮುಂದಿನ ಪೀಳಿಗೆಗೆ ಆ ಸ್ಥಳದ ಬಗ್ಗೆ ಕಿಂಚಿತ್ತೂ ಮಾಹಿತಿ ದೊರಕುವುದಿಲ್ಲ. ಪುರಾತನ ವಸ್ತುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮಾಹಿತಿಗಾಗಿ ಸಂರಕ್ಷಿಸಿಡಬೇಕಾದ ಇಲಾಖೆ, ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೊಳಗಾಗಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಹಳೆಗನ್ನಡ ಲಿಪಿ ಹೊಂದಿರುವ ಶಿಲಾಶಾಸನವೊಂದು ಅನಾಥವಾಗಿ ಬಿದ್ದಿದೆ. ಆ ಶಾಸನದ ರಕ್ಷಣೆಯಾಗಬೇಕಿದೆ. ಮುಂದಿನ ಪೀಳಿಗೆಗೆ ಪೂರ್ವಜರ ಮತ್ತು ಗ್ರಾಮದ ಇತಿಹಾಸ ತಿಳಿಯಲು ಅನುಕೂಲ ಮಾಡಿಕೊಡಬೇಕಿದೆ ಎನ್ನುವುದು ಗ್ರಾಮಸ್ಥರ ಬೇಡಿಕೆ.
ಗಿಡ-ಗಂಟಿಯಲ್ಲಿ ಸಿಲುಕಿಕೊಂಡು ಅನಾಥವಾಗಿ ಬಿದ್ದಿರುವ ಶಿಲಾಶಾಸನವು ಸಂಶಿ ಗ್ರಾಮದಿಂದ ಕಮಡೊಳ್ಳಿ ಗ್ರಾಮದೆಡೆಗೆ ಹೋಗುವ ರೈಲ್ವೆ ಬ್ರಿಡ್ಜ್‌ನ ಹತ್ತಿರ ಕಸದ ತಿಪ್ಪೆಯಲ್ಲಿ ಬಿದ್ದಂತೆ ಅರ್ಧ ಮಣ್ಣು ಮುಚ್ಚಿಕೊಂಡಿದೆ. ಇನ್ನರ್ಧ ಮಣ್ಣು ಬಿದ್ದು ಮುಚ್ಚಿಕೊಂಡರೆ, ಶಾಶ್ವತವಾಗಿ ಯಾರಿಗೂ ಕಾಣದಂತೆ ಮರೆಯಾಗಬಹುದು. ಇದರಿಂದ ಗ್ರಾಮದ ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಮಣ್ಣುಪಾಲಾಗಬಹುದು. ಇದರಿಂದ ಚರಿತ್ರೆ ತಿಳಿಯಬಯಸುವ ಮುಂದಿನ ಪೀಳಿಗೆಯು ಪರದಾಟದಕ್ಕೆ ಸಿಲುಕುವುದಂತೂ ಖಚಿತ. ಹೀಗಾಗಿ ಯಾರ ಗಮನಕ್ಕೂ ಬಾರದೆ ಅನಾಥವಾಗಿರುವ ಶಿಲಾಶಾಸನವನ್ನು ರಕ್ಷಿಸಿ ಕಾಪಾಡುವುದು ಇಂದಿನ ಪ್ರಜ್ಞಾವಂತ ಜನರ ಜತೆಗೆ ಅಧಿಕಾರಿಗಳ ಕರ್ತವ್ಯವಾಗಿದೆ.

ಈ ಜಾಗದಲ್ಲಿ ಚೌಕಿಬಾವಿ ಎನ್ನುವ ಹೆಸರಿನ ಪುರಾತನ ಬಾವಿಯಿತ್ತು. ನಾಲ್ಕೈದು ವರ್ಷಗಳ ಹಿಂದೆ ಡಬಲ್ ರೈಲು ಹಳಿ ಕಾಮಗಾರಿ ನಡೆದಾಗ ರೈಲ್ವೆ ಇಲಾಖೆಯು ಅಗಲೀಕರಣ ಮಾಡುವ ಸಂದರ್ಭದಲ್ಲಿ ಬುಲ್ಡೋಜರ್‌ನಿಂದ ಮಣ್ಣು ಹಾಕಿಸಿ ಬಾವಿಯನ್ನು ಮುಚ್ಚಿಸಿದರು. ತದನಂತರ ಬಾವಿ ದಂಡೆಯ ಮೇಲಿದ್ದ ಈ ಶಿಲಾಶಾಸನವನ್ನು ಹಾಗೆಯೇ ಬಿಸಾಕಲಾಗಿತ್ತು. ಅಲ್ಲಿಂದ ಈ ಶಿಲಾಶಾಸನ ನಿರ್ಲಕ್ಷ್ಯಕ್ಕೆ ಒಳಗಾಗಿ ಕಸದ ತಿಪ್ಪೆಯಲ್ಲಿಯೇ ಬಿದ್ದಿದೆ. ಗ್ರಾಮಸ್ಥರೇ ಸೇರಿ ಆ ಶಿಲಾಶಾಸನ ಸ್ಥಳಾಂತರ ಮಾಡಲು ಹೋದರೆ; ಅನಾಹುತಗಳು ಸಂಭವಿಸಬಹುದು ಎಂಬುದು ಸ್ಥಳೀಯರ ಆತಂಕ.
ಈ ಹಿಂದೆ ಪಾಳುಬಿದ್ದಿದ್ದ ಬಾವಿಯಲ್ಲಿ ದನ, ಕರು ಬೀಳತೊಡಗಿದವು. ಅದೇ ಸಮಯಕ್ಕೆ ರೈಲ್ವೆ ಇಲಾಖೆ ಕಾಮಗಾರಿ ಶುರುವಾಯಿತು. ಹಾಗ ಬಾವಿ ಸಂಪೂರ್ಣ ಮುಚ್ಚಲ್ಪಟ್ಟಿತು ಎಂದು ಸ್ಥಳೀಯ ಮಹಿಳೆಯೊಬ್ಬರು ತಿಳಿಸಿದರು. ನಿರ್ಲಕ್ಷ್ಯಕ್ಕೆ ಒಳಗಾಗಿ, ಅಜ್ಞಾತದಲ್ಲಿರುವ ಶಾಸನಗಳ ಹಿಂದೆ ಇಡೀ ಇತಿಹಾಸವೇ ಅಡಗಿರುತ್ತದೆ. ಶಾಸನಗಳ ರಕ್ಷಣೆಯಾದಲ್ಲಿ ಇತಿಹಾಸ ರಕ್ಷಣೆಯಾಗುತ್ತದೆ. ಒಂದು ವೇಳೆ ಯಾರೂ ಆ ಶಿಲಾಶಾಸನವನಗನು ರಕ್ಷಿಸುವ ಕಾರ್ಯಕ್ಕೆ ಮುಂದಾಗದಿದ್ದರೆ, ನಾವೆಲ್ಲ ಸೇರಿ ರಕ್ಷಿಸುತ್ತೇವೆ. ನಮ್ಮೂರಿನಲ್ಲಿ ಒಟ್ಟು 6 ಶಾಸನಗಳು ಇವೆ. ಅದರಲ್ಲಿ ಪ್ರಸ್ತುತವಾಗಿ ಕೆಲವು ಮಾತ್ರ ಉಳಿದುಕೊಂಡಿವೆ. ಮೂರು ಶಾಸನಗಳು ಅಸ್ಪಷ್ಟವಾಗಿವೆ. ಅವುಗಳನ್ನು ಸ್ಥಳೀಯರೇ ಹೆಚ್ಚು ಜೋಪಾನ ಮಾಡಿಕೊಳ್ಳಬೇಕು. ಆದರೆ; ಯಾರಿಗೂ ನಾವು ಎಂಬುವ ಪದ ಇಷ್ಟವಾಗುವುದಿಲ್ಲ ಅನಿಸುತ್ತದೆ. ಹೀಗಾಗು ನಾನು, ನನ್ನದು ಎನ್ನುವ ಸ್ವಾರ್ಥದ ಬದುಕು ಸಾಗಿಸುತ್ತಿರುವ ಕಾರಣ; ನಮ್ಮ ಗ್ರಾಮವು ಏಳ್ಗೆ ಕಾಣುತ್ತಿಲ್ಲ ಎಂದು ಹೆಸರು ಹೇಳದ ಗ್ರಾಮಸ್ಥರೊಬ್ಬರು ಹೇಳಿದರು.

ಈದಿನ.ಕಾಂ ಗ್ರಾಪಂ ಅಧ್ಯಕ್ಷರ ಗಮನಕ್ಕೆ ತರಲು; ಸ್ಥಳಕ್ಕೆ ಭೇಟಿ ಕೊಟ್ಟು, ಸ್ಥಳಾಂತರ ಅಥವಾ ರಕ್ಷಣೆ ಮಾಡಲು ಕಾರ್ಯೋನ್ಮುಖರಾಗುತ್ತೇವೆ ಎಂದು ತಿಳಿಸಿದ್ದಾರೆ. ಗ್ರಾಪಂ ವತಿಯಿಂದ ಬೆಳೆದ ಕಸವೆಲ್ಲವನ್ನು ತೆಗೆಯಿಸಿ, ಪುನಃ ಅದನ್ನು ಅದೇ ಜಾಗದಲ್ಲಿಯೇ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧಾರವಾಡ | ಕೆಲಸದಲ್ಲಿ ಬದ್ಧತೆ ಹೊಂದಿರುವ ಅಧಿಕಾರಿಗಳು ಇಲಾಖೆಯ ಆಸ್ತಿ: ಭುವನೇಶ್ ಪಾಟೀಲ
ಪುರಾತತ್ವ ಇಲಾಖೆಯ ಗಮನಕ್ಕೆ ತರಲು ಕರೆಮಾಡಲಾಗಿ, ಅವರು ಪೋನ್ ಕರೆ ಸ್ವೀಕರಿಸಿಲ್ಲ. ಇತಿಹಾಸ ತಿಳಿಸುವ ಇಂತಹ ಮೌಲ್ಯಯುತ ಪುರಾವೆಗಳು ಅಳಿದು ಹೋಗದಂತೆ ಸಂಬಂಧಿಸಿದವರು ಅವುಗಳನ್ನು ರಕ್ಷಿಸಬೇಕು. ಅದರೊಂದಿಗೆ ಸ್ಥಳೀಯರೂ ಕೂಡಾ, ಹಾಳಾಗದಂತೆ ಕಾಪಾಡಿಕೊಂಡು ಹೋಗಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಇತಿಹಾಸ ತಿಳಿಯಲು ಕಷ್ಟವಾಗದು.