ಸಮಪರ್ಕ ರಸಗೊಬ್ಬರ ಪೂರೈಕೆ, ಜಿಎಸ್ ಬಿಸಿ, ಕೆಬಿಜೆಎನ್‌ಎಲ್ ಹಾಗೂ ಎಮ್ಎಲ್‌ಬಿಸಿ, ಕಾಲುವೆಗಳಿಂದ ನೀರು ಹರಿಸುವುದು, ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ, ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬೀಳಗಿ ತಾಲೂಕು ಘಟಕ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ, ”ರೈತರು ಈಗಾಗಲೇ ಹಲವು ಬೆಳೆಗಳನ್ನು ಬೆಳೆದಿದ್ದು, ಫಸಲುಗಳಿಗೆ ಯೂರಿಯಾ ರಸಗೊಬ್ಬರದ ಅಗತ್ಯವಿದೆ. ಸಾಕಷ್ಟು ಸಂಗ್ರಹವಿದ್ದರೂ ಕೂಡ ಪೂರೈಕೆದಾರರು ಕೊರತೆ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕೆಲ ವ್ಯಾಪಾರಸ್ಥರು ತಮಗೆ ಬೇಕಾದವರಿಗೆ ಹೆಚ್ಚಿನ ದರದಲ್ಲಿ ರಸಗೊಬ್ಬರ ಪೂರೈಕೆ ಮಾಡುತ್ತಿದ್ದು, ಅಂಥವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ, “ಬಾಗಲಕೋಟೆ ಸಭೆಯಲ್ಲಿ ಕೃಷ್ಣ, ಘಟಪ್ರಭೆ, ಮಲಪ್ರಭಾ ನದಿಗಳು ತುಂಬ ಹರಿಯುತ್ತಿವೆ. ನರಿಗಳ ನೀರನ್ನು ಕಾಲುವೆಗಳಿಗೆ ಹರಿಸಿ ರೈತರ ಬೆಳೆಗಳ ಸಂರಕ್ಷಣೆಗೆ ಡಿಸಿ ನೇತೃತ್ವದಲ್ಲಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಲಾಖೆಯ ಅಧಿ ಕಾರಿಗಳ ಸಭೆ ಕರೆದು ಶಾಶ್ವತ ಕ್ರಮ ಕೈಗೊಳ್ಳಬೇಕು” ಎಂದರು.
ಇದನ್ನೂ ಓದಿ: ಬಾಗಲಕೋಟೆ | ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ
ಜಿಲ್ಲಾ ಉಪಾಧ್ಯಕ್ಷ ಎಂ.ವೈ.ವಡವಾಣಿ ಮಾತನಾಡಿ, “ಒಂದು ವಾರದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಮದುದಾಪುರ, ಸರ್ಜರ ಜೈನಾಪೂರ, ಹನುಮಂತ ದೊರೆಗೊಳ, ರಮೇಶ ಸಾರವಾಡ, ಲಕ್ಷ್ಮಣ ಸವನಾಳ, ವಿಶ್ವಲ ಬಿರುದಾರ. ಅಂದಾನಯ್ಯ ವಿಭೂತಿ, ಮನ್ಸೂರರಬ ಮುಜಾವರ, ಲಕ್ಷ್ಮಣ ತಳವಾರ, ಪಕೀರಪ್ಪ ಕವಳ್ಳಿ ನಿಂಗಪ್ಪ ಅನಗವಾಡಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.